ಜೂಜಿಗಾಗಿ ಆಡುವ ಆನ್‌ಲೈನ್ ಆಟಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಹೇರಿದ್ದ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025ನ್ನು ಪ್ರಶ್ನಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನವೆಂಬರ್ 26 ರಂದು ವಿಚಾರಣೆ ನಡೆಸಲಿದೆ [ಹೆಡ್ ಡಿಜಿಟಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಅರ್ಜಿಗಳಿಗೆ ಸಮಗ್ರ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ನಿರ್ದೇಶಿಸಿದೆ.
ಕಾಯಿದೆಯ ಸಾಂವಿಧಾನಿಕತೆ ಪ್ರಶ್ನಿಸಿ ಕರ್ನಾಟಕ, ದೆಹಲಿ ಹಾಗೂ ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವರ್ಗಾವಣೆ ಕೋರಿ ಕೇಂದ್ರ ಸಲ್ಲಿಸಿದ್ದ ಮನವಿಯನ್ನು ಈ ಹಿಂದೆ ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ತನಗೆ ವರ್ಗಾಯಿಸಿಕೊಂಡಿತ್ತು.
ಕಳೆದ ಆಗಸ್ಟ್ 22ರಂದು ಅಸ್ತಿತ್ವಕ್ಕೆ ಬಂದ ಈ ಕಾಯಿದೆ ಪಣಕ್ಕಿಡುವ ಅಥವಾ ಆರ್ಥಿಕ ಲಾಭದ ನಿರೀಕ್ಷೆ ಒಳಗೊಂಡಿರುವ ಯಾವುದೇ ಆಟಗಳನ್ನು ನಿಷೇಧಿಸುವ ಮೊದಲ ಕೇಂದ್ರ ಕಾನೂನು ಆಗಿದೆ. ಕಾಯಿದೆಯಿಂದಾಗಿ ಕೌಶಲ್ಯದ ಆಟಗಳು ಮತ್ತು ಅವಕಾಶದ ಆಟಗಳ ನಡುವೆ ದೀರ್ಘಕಾಲದಿಂದ ಇದ್ದ ಕಾನೂನು ವ್ಯತ್ಯಾಸ ಇಲ್ಲವಾಗಿ ಹಣವನ್ನು ಪಣಕ್ಕಿಡುವ ಅಥವಾ ಆರ್ಥಿಕ ಲಾಭದ ನಿರೀಕ್ಷೆ ಒಳಗೊಂಡಿರುವ ಯಾವುದೇ ಆಟ ಕಾನೂನುಬಾಹಿರವಾಗಿದೆ. ಈ ಅಪರಾಧಗಳು ಸಂಜ್ಞೇಯ ಅಪರಾಧಗಳೆನಿಸಿಕೊಳ್ಳಲಿದ್ದು ಜಾಮೀನು ರಹಿತ ಕೃತ್ಯಗಳಾಗಿವೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕರ್ನಾಟಕ, ದೆಹಲಿ ಹಾಗೂ ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ಮನವಿ ಸಲ್ಲಿಸಿದ ಹೆಡ್ ಡಿಜಿಟಲ್ ರೀತಿಯ ಗೇಮ್ ಆಪರೇಟರ್‌ಗಳಾದ ದಾವೆದಾರರು ಕಾಯಿದೆಯ ಸಿಂಧುತ್ವ ಪ್ರಶ್ನಿಸಿದರು.
ಕಾಯಿದೆ ಸಂವಿಧಾನದ 14 (ಸಮಾನತೆ ಹಕ್ಕು) ಮತ್ತು 19(1)(ಜಿ) (ವ್ಯಾಪಾರ/ಉದ್ಯಮ ನಡೆಸುವ ಹಕ್ಕು) ವಿಧಿಗಳಡಿ ಒದಗಿಸಲಾದ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ ಎಂದು ದಾವೆದಾರರು ವಾದಿಸಿದ್ದಾರೆ.
ಹೆಡ್ ಡಿಜಿಟಲ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಹಾಗೂ ಮತ್ತೊಂದು ಅರ್ಜಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಕೇಳಿ ನೋಟಿಸ್ ನೀಡಿದ್ದವು. ಆನ್‌ಲೈನ್ ಕ್ಯಾರಮ್ ವೇದಿಕೆಯೊಂದು ಇಂಥದ್ದೇ ಅರ್ಜಿಯನ್ನು ದೆಹಲಿ ಹೈಕೋರ್ಟ್‌ಗೆ ಸಲ್ಲಿತ್ತು. ನಂತರ ಕೇಂದ್ರ ಸರ್ಕಾರ ಈ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.