ಸುದ್ದಿಗಳು

ಒಟಿಟಿಗಳಲ್ಲಿ ಅಶ್ಲೀಲ ವಸ್ತು ವಿಷಯ ನಿಯಂತ್ರಣ: ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಮಾತ್ರವಲ್ಲದೆ ಎಕ್ಸ್ ಕಾರ್ಪ್, ನೆಟ್‌ಫ್ಲಿಕ್ಸ್‌ ಅಮೆಜಾನ್, ಉಲ್ಲು ಡಿಜಿಟಲ್, ಆಲ್ಟ್ ಬಾಲಾಜಿ, ಎಂಯುಬಿಐ, ಗೂಗಲ್, ಆಪಲ್ ಹಾಗೂ ಮೆಟಾಗೆ ನೋಟಿಸ್ ಜಾರಿ ಮಾಡಿದೆ.

Bar & Bench

ಭಾರತದ ಒಟಿಟಿ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಅಥವಾ ಅನುಚಿತವಾದ ವಸ್ತು ವಿಷಯ ಪ್ರಸಾರ ನಿಷೇಧಿಸಲು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಉದಯ್ ಮಹೂರ್ಕರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಎ ಜಿ ಮಸೀಹ್ ಅವರಿದ್ದ ಪೀಠ ಎಕ್ಸ್ ಕಾರ್ಪ್, ನೆಟ್‌ಫ್ಲಿಕ್ಸ್, ಅಮೆಜಾನ್, ಉಲ್ಲು ಡಿಜಿಟಲ್, ಆಲ್ಟ್ ಬಾಲಾಜಿ, ಎಂಯುಬಿಐ, ಗೂಗಲ್, ಆಪಲ್ ಹಾಗೂ ಮೆಟಾ ಸಂಸ್ಥೆಗಳಿಗೂ ನೋಟಿಸ್ ಜಾರಿ ಮಾಡಿದೆ.

ಆದರೆ, ಪ್ರಕರಣದಲ್ಲಿ ಹಸ್ತಕ್ಷೇಪ ಸಂಬಂಧ ತನಗೆ ಸೀಮಿತ ವ್ಯಾಪ್ತಿ ಇರಬಹುದು ಎಂದು ನ್ಯಾಯಾಲಯ ಹೇಳಿತು.

"ಇದು ಶಾಸಕಾಂಗ ಅಥವಾ ಕಾರ್ಯಾಂಗಕ್ಕೆ ಸಂಬಂಧಿಸಿದೆ. ಶಾಸಕಾಂಗ (ಮತ್ತು) ಕಾರ್ಯಾಂಗ ಕ್ಷೇತ್ರಗಳನ್ನು ಅತಿಕ್ರಮಿಸಿದ ಆರೋಪಗಳನ್ನು ನಾವು ಎದುರಿಸುತ್ತಿದ್ದೇವೆ. ಆದರೂ, ನೋಟಿಸ್ ನೀಡುತ್ತೇವೆ" ಎಂದು ನ್ಯಾ. ಗವಾಯಿ ಹೇಳಿದರು.

"ಒಟಿಟಿ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಆಕ್ಷೇಪಾರ್ಹ, ಅಶ್ಲೀಲ ಮತ್ತು ಅಸಭ್ಯ ವಿಷಯಗಳ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಈ ಅರ್ಜಿ ಪ್ರಧಾನವಾಗಿ ಆತಂಕ ಹೊರಹಾಕಿದೆ. ಮನವಿಯನ್ನು  ಪ್ರತಿಕೂಲ ರೀತಿಯಲ್ಲಿ ಪರಿಗಣಿಸಬಾರದು ಎಂದು ಎಸ್‌ಜಿ ಹೇಳುತ್ತಾರೆ. ಕೆಲವು ವಿಷಯಗಳು ವಿಕೃತವಾಗಿವೆ ಎಂದು ವಾದಿಸಲಾಗಿದೆ... ಕೆಲ ನಿಯಮಗಳು ಅಸ್ತಿತ್ವದಲ್ಲಿದ್ದು ಇನ್ನೂ ಕೆಲ ನಿಯಮಗಳನ್ನು ಪರಿಗಣಿಸಲಾಗುತ್ತಿದೆ ಎಂದು ಎಸ್‌ಜಿ ವಾದ ಮಂಡಿಸಿದ್ದಾರೆ. ಹೀಗಾಗಿ, ನಾವು ಪ್ರತಿವಾದಿಗಳಿಗೆ ನೋಟಿಸ್ ನೀಡುತ್ತೇವೆ" ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ವಾದ ಮಂಡನೆ ವೇಳೆ ಮಕ್ಕಳು ಅನುಚಿತ ವಸ್ತು ವಿಷಯಗಳಿಗೆ ತುತ್ತಾಗಬಹುದು ಎಂದು ನ್ಯಾಯಾಲಯ ಕೂಡ ಆತಂಕ ವ್ಯಕ್ತಪಡಿಸಿತು. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ವಾದ ಮಂಡಿಸಿದರು. ಅರ್ಜಿದಾರರನ್ನು ವಕೀಲ ವಿಷ್ಣು ಶಂಕರ್ ಜೈನ್ ಪ್ರತಿನಿಧಿಸಿದ್ದರು.