Supreme Court, Political Parties  
ಸುದ್ದಿಗಳು

ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಸಂವಿಧಾನದ 14 ಮತ್ತು 19(1) (ಎ) ವಿಧಿಗಳಡಿ ಒದಗಿಸಲಾದ ಹಕ್ಕುಗಳನ್ನು ಕಾಯಿದೆಯ ಸೆಕ್ಷನ್ 13 ಎ (ಡಿ) ಉಲ್ಲಂಘಿಸುತ್ತದೆ. ಇದರಿಂದಾಗಿ ರಾಜಕೀಯ ನಿಧಿಯ ಮೂಲ ತಿಳಿದುಕೊಳ್ಳುವ ಮತದಾರರ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದಿದೆ ಅರ್ಜಿ.

Bar & Bench

ರಾಜಕೀಯ ಪಕ್ಷಗಳು ₹2,000 ವರೆಗಿನ ನಗದು ದೇಣಿಗೆ ಸ್ವೀಕರಿಸಲು ಅವಕಾಶ ನೀಡುವ ಆದಾಯ ತೆರಿಗೆ ಕಾಯಿದೆಯಸೆಕ್ಷನ್ 13 ಎ (ಡಿ)ಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಭಾರತೀಯ ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದೆ [ ಡಾ. ಖೇಮ್ ಸಿಂಗ್ ಭಾಟಿ ಮತ್ತು  ಭಾರತ ಚುನಾವಣಾ ಆಯೋಗ ಇನ್ನಿತರರ ನಡುವಣ ಪ್ರಕರಣ ].

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 13 ಎ(ಡಿ) ಸಂವಿಧಾನದ 14 ಮತ್ತು 19(1)(ಎ) ವಿಧಿಗಳಡಿ ಒದಗಿಸಲಾದ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದರಿಂದಾಗಿ ರಾಜಕೀಯ ನಿಧಿಯ ಮೂಲ ತಿಳಿದುಕೊಳ್ಳುವ ಮತದಾರರ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ  ಎಂದು ಖೇಮ್ ಸಿಂಗ್ ಭಾಟಿ ಅವರು ಸಲ್ಲಿಸಿರುವ ಅರ್ಜಿ ದೂರಿದೆ.

ಚುನಾವಣಾ ಬಾಂಡ್‌ಗಳ ತೀರ್ಪಿನಲ್ಲಿ ಮತದಾರರ ತಿಳಿದುಕೊಳ್ಳುವ ಹಕ್ಕನ್ನು ನ್ಯಾಯಾಲಯ ಗುರುತಿಸಿದ್ದರೂ, ರಾಜಕೀಯ ನಿಧಿಗೆ ಮೂಲಭೂತ ಪಾರದರ್ಶಕತೆ ಇಲ್ಲ ಎಂದು ಹಿರಿಯ ವಕೀಲ ವಿಜಯ್ ಹನ್ಸಾರಿಯಾ  ಅವರು ವಾದಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿತು.

ಅರ್ಜಿಯ ಪ್ರಮುಖಾಂಶಗಳು

  • ₹2,000ರವರೆಗಿನ ನಗದು ದೇಣಿಗೆ ಸ್ವೀಕರಿಸಿದರೆ ದಾನಿಯ ಹೆಸರು, ಪ್ಯಾನ್‌ ಹಾಗೂ ಬ್ಯಾಂಕ್‌ ವಿವರಗಳು ಬಹಿರಂಗಗೊಳ್ಳುವುದಿಲ್ಲ.

  • ದೇಶದಲ್ಲಿ ಜೂನ್‌ 2025ರಲ್ಲಿ ಸುಮಾರು ₹24.03 ಲಕ್ಷ ಕೋಟಿ ಮೊತ್ತದ ಹಣವು ಯುಪಿಐ ಮುಖಾಂತರ ವರ್ಗಾವಣೆಗೊಂಡಿದೆ. ಇಷ್ಟು ವ್ಯಾಪಕ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಇರುವಾಗ ನಗದು ದೇಣಿಗೆಗೆ ಅನುಮತಿಸುವುದಕ್ಕೆ ಸಕಾರಣವಿಲ್ಲ. ಅಂತಹ ಅವಕಾಶವನ್ನು ನೀಡುವುದು ರಾಜಕೀಯ ಆರ್ಥಿಕ ಚಟುವಟಿಕೆಗಳನ್ನು ಅಪಾರದರ್ಶಕಗೊಳಿಸುತ್ತದೆ.

  • ಈ ಬಗೆಯ ದೇಣಿಗೆಯು ರಾಜಕೀಯ ನಿಧಿಯ ಮೂಲ ತಿಳಿದುಕೊಳ್ಳಲು ಅನುವು ಮಾಡಿಕೊಡುವ ಸಂವಿಧಾನದ 19(1)(ಎ) ವಿಧಿಗೆ ಮತ್ತು ಸಂವಿಧಾನದ 14 ನೇ ವಿಧಿಯಡಿ ಒದಗಿಸಲಾದ ಸಮಾನತೆಯ  ಹಕ್ಕಿಗೆ ವಿರುದ್ಧವಾಗಿದೆ.

  •  ಹಲವು ರಾಜಕೀಯ ಪಕ್ಷಗಳು ಅಪೂರ್ಣ ಇಲ್ಲವೇ ತಡವಾದ ದೇಣಿಗೆ ವರದಿ ಸಲ್ಲಿಸುತ್ತಿವೆ. ಅವು ಪ್ಯಾನ್‌ ಅಥವಾ ಬ್ಯಾಂಕ್‌ ವಿವರಗಳನ್ನು ನೀಡುತ್ತಿಲ್ಲ. ದೇಣಿಗೆ ಮತ್ತು ಚಂದಾ ಎಂದು ಒಟ್ಟಾರೆ ದೊಡ್ಡ ಮೊತ್ತವನ್ನು ವಿವರಿಸುತ್ತಿವೆಯೇ ವಿನಾ ಅವು ಯಾರಿಂದ ಬಂದಿವೆ ಎಂಬುದನ್ನು ತಿಳಿಸುತ್ತಿಲ್ಲ.

  • ರಾಜಕೀಯ ಪಕ್ಷಗಳು ಸಲ್ಲಿಸುವ ಫಾರ್ಮ್‌ ನಂ 24ಎ ನಲ್ಲಿರುವ ವರದಿಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

  • ವಿವರಗಳನ್ನು ಒಳಗೊಂಡಿರದ ನಗದು ದಾನವನ್ನು ಪ್ರತ್ಯೇಕ ಖಾತೆಗೆ ಜಮಾ ಮಾಡಲು ಅಥವಾ ದಾನಿಗಳಿಗೆ ಮರಳಿಸಲು ಸೂಚಿಸಬೇಕು.

  • ರಾಜಕೀಯ ಪಕ್ಷಗಳ ಹಣಕಾಸು ವರದಿಗಳನ್ನು ಸ್ವತಂತ್ರವಾಗಿ ಲೆಕ್ಕಪರಿಶೋಧನೆಗೊಳಪಡಿಸುವುದು ಕಡ್ಡಾಯವಾಗಬೇಕು.

  • ಪಕ್ಷ ಪದೇ ಪದೇ ನಿಯಮ ಉಲ್ಲಂಘಿಸಿದರೆ ಪಕ್ಷದ ಚಿಹ್ನೆಗೆ ಸಂಬಂಧಿಸಿದಂತೆ ನೀಡಲಾದ ಸೌಲಭ್ಯ, ತೆರಿಗೆ ವಿನಾಯಿತಿಯಂತಹ ಸವಲತ್ತುಗಳನ್ನು ಹಿಂಪಡೆಯಬೇಕು.

ಕಳೆದ ಐದು ವರ್ಷಗಳಿಂದ ಕೇಂದ್ರೀಯ ನೇರ ತೆರಿಗೆ ಮಂಡಳಿಯಿಂದ ನಡೆಸಲಾದ ಸಮಾನಾಂತರ ಲೆಕ್ಕಪರಿಶೋಧನೆ ಕೋರಿದ್ದ, ಪ್ರತ್ಯೇಕ ಆದರೆ ಸಂಬಂಧಿತ ಅರ್ಜಿಯನ್ನು ಸಹ ನ್ಯಾಯಾಲಯ ಇದೇ ವೇಳೆ ವಿಚಾರಣೆ ನಡೆಸಿತು. ಚುನಾವಣಾ ಆಯೋಗ ತನ್ನ ಪ್ರತಿಕ್ರಿಯೆ ಸಲ್ಲಿಸಿದ ನಂತರ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.