Supreme Court, Delhi Air Pollution  
ಸುದ್ದಿಗಳು

ದೀಪಾವಳಿ ವೇಳೆ ಕಾರ್ಯ ನಿರ್ವಹಿಸದ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳು: ವರದಿ ಕೇಳಿದ ಸುಪ್ರೀಂ

ದೀಪಾವಳಿ ವೇಳೆ ದೆಹಲಿಯಲ್ಲಿರುವ 37 ಮೇಲ್ವಿಚಾರಣಾ ಕೇಂದ್ರಗಳಲ್ಲಿ ಕೇವಲ 9 ಮಾತ್ರ ಕಾರ್ಯನಿರ್ವಹಿಸುತ್ತಿದ್ದವು ಎಂದು ಅಮಿಕಸ್ ನ್ಯಾಯಾಲಯಕ್ಕೆ ತಿಳಿಸಿದರು.

Bar & Bench

ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಕುರಿತಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಸ್ಥಿತಿಗತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.

ದೀಪಾವಳಿ ವೇಳೆಯೇ ದೆಹಲಿಯಲ್ಲಿ ಈ ಕೇಂದ್ರಗಳು ಕಾರ್ಯ ನಿರ್ವಹಿಸಲಿಲ್ಲ ಎಂಬುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಈ ಆದೇಶ ನೀಡಿತು.

ದೆಹಲಿ ವಾಯು ಮಾಲಿನ್ಯ ವಿಷಯದಲ್ಲಿ ಅಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲೆ ಅಪರಾಜಿತಾ ಸಿಂಗ್ , ಸಿಎಕ್ಯೂಎಂ ವರದಿ ಕೋರಿದರು. "ಪ್ರಸ್ತುತ ವಾಯು ಮಾಲಿನ್ಯ ಸ್ಥಿತಿಯ ಕುರಿತು ಸಿಎಕ್ಯೂಎಂ ವರದಿ ಸಲ್ಲಿಸಬೇಕು. ದೆಹಲಿಯ 37 ಮೇಲ್ವಿಚಾರಣಾ ಕೇಂದ್ರಗಳಲ್ಲಿ, ದೀಪಾವಳಿ ವೇಳೆ ಕೇವಲ 9 ಕಾರ್ಯನಿರ್ವಹಿಸುತ್ತಿದ್ದವು " ಎಂದು ಸಿನ್ಹಾ ತಿಳಿಸಿದರು. ಈ ಹಂತದಲ್ಲಿ ನ್ಯಾಯಾಲಯ ವರದಿ ಸಲ್ಲಿಸುವಂತೆ ಸಿಎಕ್ಯೂಎಂಗೆ ಸೂಚಿಸಿತು.

ದೀಪಾವಳಿ ಆಚರಣೆಯ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿತ್ತು. ದೆಹಲಿ ಸರ್ಕಾರ ಗಾಳಿಯ ಗುಣಮಟ್ಟದ ಮೇಲ್ವಿಚಾರಣಾ ಕೇಂದ್ರಗಳ ಸುತ್ತಲೂ ನೀರನ್ನು ಸಿಂಪಡಿಸಲು ಟ್ಯಾಂಕರ್‌ಗಳನ್ನು ನಿಯೋಜಿಸಿದ್ದು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ರೀಡಿಂಗ್‌ ಮೀಟರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಲು ಹೀಗೆ ಮಾಡಲಾಗಿದೆ  ಎಂದು ಮಾಧ್ಯಮ ವರದಿಗಳು ಆರೋಪಿಸಿದ್ದವು.

ಸುಪ್ರೀಂ ಕೋರ್ಟ್ ಈ ಹಿಂದೆ ದೀಪಾವಳಿಯ ಸಮಯದಲ್ಲಿ ರಾಷ್ಟ್ರ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಿತ್ತು . ಆದರೆ, ಮಾಲಿನ್ಯದ ಮಟ್ಟ ಹೆಚ್ಚುತ್ತಿರುವುದರಿಂದ, ಕೆಲವು ವಾರಗಳ ಕಾಲ ದೆಹಲಿಯನ್ನು ತೊರೆಯುವಂತೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನತೆಗೆ ವೈದ್ಯರು ಸಲಹೆ ನೀಡುತ್ತಿದ್ದಾರೆ.