ಸುದ್ದಿಗಳು

ಜೊಮ್ಯಾಟೊ, ಸ್ವಿಗ್ಗಿ, ಓಲಾ, ಉಬರ್ ಚಾಲಕರಿಗೆ ಸಾಮಾಜಿಕ ಭದ್ರತೆ ಕೋರಿ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಚಾಲಕರು ಅಗ್ರಿಗೇಟರ್ ಕಂಪೆನಿಯೊಂದಿಗೆ ಉದ್ಯೋಗ ಸಂಬಂಧ ಹೊಂದಿದ್ದು ಅವರು ಕೂಡ ಕೆಲಸಗಾರರು ಎಂಬ ವ್ಯಾಖ್ಯಾನಕ್ಕೆ ಒಳಪಡುತ್ತಾರೆ ಎಂದು ತಿಳಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾ. ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠ ನೋಟಿಸ್ ಜಾರಿ ಮಾಡಿತು.

Bar & Bench

ಆಹಾರ ವಿತರಣಾ ಆ್ಯಪ್‌ಗಳಾದ ಜೊಮ್ಯಾಟೊ, ಸ್ವಿಗ್ಗಿ ಮತ್ತು ಟ್ಯಾಕ್ಸಿ ಅಗ್ರಿಗೇಟರ್ ಆ್ಯಪ್‌ಗಳಾದ ಓಲಾ ಉಬರ್‌ ಚಾಲಕರಿಗೆ ಸಾಮಾಜಿಕ ಭದ್ರತೆ ಒದಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಭಾರತೀಯ ಆ್ಯಪ್‌ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].

ಚಾಲಕರು ಅಗ್ರಿಗೇಟರ್ ಕಂಪೆನಿಯೊಂದಿಗೆ ಉದ್ಯೋಗ ಸಂಬಂಧ ಹೊಂದಿದ್ದು ಸಾಮಾಜಿಕ ಭದ್ರತಾ ಕಾನೂನಿನ ಪ್ರಕಾರ ಅವರು ಕೂಡ ಕೆಲಸಗಾರರು ಎಂಬ ವ್ಯಾಖ್ಯಾನಕ್ಕೆ ಒಳಪಡುತ್ತಾರೆ ಎಂದು ತಿಳಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾ. ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠ ನೋಟಿಸ್‌ ಜಾರಿ ಮಾಡಿತು.

ಅಸಂಘಟಿತ ಕಾರ್ಮಿಕರ ಸಮಾಜ ಕಲ್ಯಾಣ ಭದ್ರತಾ ಕಾಯಿದೆ- 2008ರ ಅಡಿ ಈ ಬಗೆಯ ಕಾರ್ಮಿಕರು ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದ್ದು ಅವರು ಸಾಮಾಜಿಕ ಭದ್ರತೆಗೆ ಅರ್ಹರಾಗಿರುತ್ತಾರೆ ಎಂದು ಭಾರತೀಯ ಆ್ಯಪ್‌ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟ ಮತ್ತು ಕ್ಯಾಬ್‌ ಡ್ರೈವರ್‌ ಸೇರಿದಂತೆ ಇಬ್ಬರು ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ವಿವರಿಸಲಾದ ಪ್ರಮುಖಾಂಶಗಳು ಹೀಗಿವೆ.

  • ಕಾರ್ಮಿಕರ ಮೂಲಭೂತ ಮಾನವ ಘನತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದಲೇ ಸರ್ಕಾರದ ನೀತಿಯ ನಿರ್ದೇಶಕ ತತ್ವಗಳ ಅನುಸಾರವಾಗಿ ಜಾರಿಗೆ ತಂದ ಕಾಯಿದೆಯಡಿಯಲ್ಲಿ ತಮ್ಮನ್ನು ನೋಂದಾಯಿಸಲು ಸರ್ಕಾರ ವಿಫಲವಾಗಿದ್ದು ಇದು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ.

  • ʼಆಹಾರ ಸರಬರಾಜು ಕಾರ್ಮಿಕರುʼ ಮತ್ತು ʼಪ್ಲಾಟ್‌ಫಾರ್ಮ್‌ ಕೆಲಸಗಾರರಿಗೆʼ (ಸೇವೆ ಒದಗಿಸುವ ಅಂತರ್ಜಾಲ ತಾಣ) ಸಾಮಾಜಿಕ ಭದ್ರತೆ ನಿರಾಕರಿಸಿರುವುದರಿಂದ ಸಂವಿಧಾನದ 23 ನೇ ವಿಧಿಯ ಅಡಿಯಲ್ಲಿ ವ್ಯಾಖ್ಯಾನಿಸಿರುವಂತೆ ಬಲವಂತದ ಕೆಲಸದ ಮೂಲಕ ಅವರನ್ನು ಶೋಷಣೆ ಮಾಡಲಾಗುತ್ತಿದೆ. ಜೀವನೋಪಾಯದ ಹಕ್ಕು ಎಂಬುದು ಘನತೆಯ ಕೆಲಸದ ಹಕ್ಕು ಮತ್ತು ನ್ಯಾಯಯುತ ಕೆಲಸದ ಸ್ಥಿತಿಯಲ್ಲಿ ಉದ್ಯೋಗ ಮಾಡುವ ಹಕ್ಕನ್ನು ಒಳಗೊಂಡಿದೆ.

  • ತಮ್ಮ ಮತ್ತು ಅರ್ಜಿದಾರರ ನಡುವೆ ಉದ್ಯೋಗದ ಒಪ್ಪಂದವಿಲ್ಲ ಮತ್ತು ಅರ್ಜಿದಾರರೊಂದಿಗಿನ ಅವರ ಸಂಬಂಧವು ಪಾಲುದಾರಿಕೆಯ ಸ್ವರೂಪದಲ್ಲಿದೆ ಎಂದು ಪ್ರತಿವಾದಿ ಕಂಪನಿಗಳು ಹೇಳಿಕೊಳ್ಳುತ್ತಿವೆ. ಇದನ್ನು ಒಪ್ಪುವುದು ಸಮಾಜ ಕಲ್ಯಾಣ ಕಾನೂನುಗಳ ಉದ್ದೇಶಕ್ಕೆ ಮಾರಕವಾಗಿ ಪರಿಣಮಿಸುತ್ತದೆ.

  • ಅಪ್ಲಿಕೇಶನ್‌ಗಳಲ್ಲಿ ನೋಂದಾಯಿಸಲು ಅನುಮತಿ ನೀಡುವವರ ಕೆಲಸ ಮಾಡುವ ವಿಧಾನ ಮತ್ತು ವಿಧಾನದ ಮೇಲೆ ಕಂಪನಿಗಳು ಸಂಪೂರ್ಣ ನಿಗಾ ಮತ್ತು ನಿಯಂತ್ರಣ ಹೊಂದಿರುತ್ತವೆ.

  • ಇದಲ್ಲದೆ, ನಿಗದಿತ ಅವಧಿಯ ಉದ್ಯೋಗ ಒಪ್ಪಂದಗಳು 'ಒಪ್ಪಿಕೊಳ್ಳಿ, ಇಲ್ಲವೇ ಬಿಟ್ಟುಬಿಡಿ' ಎಂಬ ಸ್ವರೂಪದಲ್ಲಿದ್ದು ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಈ ಒಪ್ಪಂದಗಳಿಗೆ ಸಹಿ ಹಾಕುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.

  • ಮಾಲೀಕರು ತಮ್ಮನ್ನು ತಾವು 'ಅಗ್ರಿಗೇಟರ್‌ಗಳು' (ಸೇವಾ ಸರಬರಾಜು ಒದಗಿಸುವ ಕಂಪೆನಿಗಳು) ಎಂದು ಪಾಲುದಾರಿಕೆ (ಪಾರ್ಟ್‌ನರ್ಶಿಪ್ ) ಒಪ್ಪಂದಗಳಿಗೆ ಮುಂದಾಗುವುದು ಕೇವಲ ಸಂಬಂಧದ ಸ್ವರೂಪವನ್ನು ಮರೆಮಾಚುವ ಉಪಾಯವಾಗಿದ್ದು ಇದು ನ್ಯಾಯಸಮ್ಮತವಲ್ಲ. ಈ ಮೂಲಕ ಮಾಲೀಕರು ಮತ್ತು ಕೆಲಸಗಾರರ ಸಂಬಂಧದ ಸ್ವರೂಪವನ್ನು ಮರೆಮಾಚಲಾಗದು.

ಉಬರ್ ಚಾಲಕರು ಕನಿಷ್ಠ ವೇತನ, ಪಾವತಿಸಿದ ವಾರ್ಷಿಕ ರಜೆ ಮತ್ತು ಇತರ ಕಾರ್ಮಿಕರ ಹಕ್ಕುಗಳಿಗೆ ಅರ್ಹರು ಎನ್ನುವ ಇಂಗ್ಲೆಂಡ್‌ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅರ್ಜಿದಾರರು ಅವಲಂಬಿಸಿದ್ದು ಅವರ ಪರವಾಗಿ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ ವಾದ ಮಂಡಿಸಿದರು.