Vijay Mallya, Supreme Court 
ಸುದ್ದಿಗಳು

ನ್ಯಾಯಾಂಗ ನಿಂದನೆ ಪ್ರಕರಣ: ವಿಜಯ್‌ ಮಲ್ಯಗೆ 4 ತಿಂಗಳು ಜೈಲು, ₹2,000 ದಂಡ ವಿಧಿಸಿದ ಸುಪ್ರೀಂ ಕೋರ್ಟ್‌

ನ್ಯಾಯಮೂರ್ತಿಗಳಾದ ಉದಯ್‌ ಉಮೇಶ್‌ ಲಲಿತ್‌, ಎಸ್‌ ರವೀಂದ್ರ ಭಟ್‌ ಮತ್ತು ಪಿ ಎಸ್‌ ನರಸಿಂಹ ಅವರ ನೇತೃತ್ವದ ತ್ರಿಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ.

Bar & Bench

ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ದೇಶಭ್ರಷ್ಟ ಉದ್ಯಮಿ ವಿಜಯ್‌ ಮಲ್ಯಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ಮತ್ತು ₹2,000 ದಂಡವನ್ನು ಸೋಮವಾರ ಸುಪ್ರೀಂ ಕೋರ್ಟ್‌ ವಿಧಿಸಿದೆ.

ನ್ಯಾಯಮೂರ್ತಿಗಳಾದ ಉದಯ್‌ ಉಮೇಶ್‌ ಲಲಿತ್‌, ಎಸ್‌ ರವೀಂದ್ರ ಭಟ್‌ ಮತ್ತು ಪಿ ಎಸ್‌ ನರಸಿಂಹ ಅವರ ನೇತೃತ್ವದ ತ್ರಿಸದಸ್ಯ ಪೀಠವು ತೀರ್ಪು ಪ್ರಕಟಿಸಿದ್ದು, ಒಂದು ತಿಂಗಳಲ್ಲಿ 40 ಮಿಲಿಯನ್‌ ಅಮೆರಿಕನ್‌ ಡಾಲರ್‌ ಜೊತೆಗೆ ಬಡ್ಡಿ ಸಮೇತ ಠೇವಣಿ ಇಡಬೇಕು. ಇಲ್ಲವಾದರೆ ಮಲ್ಯ ಆಸ್ತಿಯನ್ನು ಜಫ್ತಿ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.

ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಪಡೆದಿದ್ದ ₹9,000 ಕೋಟಿ ಸಾಲ ಪಾವತಿಸದಿರುವುದಕ್ಕೆ ಸಂಬಂಧಿಸಿದಂತೆ ಮಲ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗಿತ್ತು. ಭಾರತೀಯ ಸ್ಟೇಟ್‌ ಬ್ಯಾಂಕ್‌ ನೇತೃತ್ವದ ಸಾಲ ನೀಡುವವರ ಒಕ್ಕೂಟ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ 2017ರಲ್ಲಿ ತಾನು ನೀಡಿದ್ದ ತೀರ್ಪನ್ನು ಪಾಲಿಸದ ಹಿನ್ನೆಲೆಯಲ್ಲಿ ಮಲ್ಯ ವಿರುದ್ಧ ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿತ್ತು.

ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಲ್ಯ ಅವರು ತಮ್ಮ ಖಾತೆಯಿಂದ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಿರುವುದಲ್ಲದೇ ತಮ್ಮ ಆಸ್ತಿಗಳ ಬಗ್ಗೆ ಅಸ್ಪಷ್ಟ ಮಾಹಿತಿ ನೀಡಿದ್ದರು ಎಂದು ಆರೋಪಿಸಲಾಗಿತ್ತು. ವಾಸ್ತವಿಕ ವಿಚಾರಗಳನ್ನು ಬಚ್ಚಿಟ್ಟು ಮಲ್ಯ ಅವರು ತಮ್ಮ ಪುತ್ರ ಸಿದ್ಧಾರ್ಥ್‌ ಮಲ್ಯ, ಪುತ್ರಿಯರಾದ ಲಿಯನ್ನಾ ಮತ್ತು ತಾನ್ಯಾ ಮಲ್ಯ ಅವರ ಖಾತೆಗೆ ಕರ್ನಾಟಕ ಹೈಕೋರ್ಟ್‌ ಆದೇಶಗಳನ್ನು ಉಲ್ಲಂಘಿಸಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಬ್ಯಾಂಕ್‌ಗಳು ನಿರ್ದಿಷ್ಟ ಆರೋಪ ಮಾಡಿದ್ದವು.

ವರ್ಷದ ಆರಂಭದಲ್ಲಿ ನ್ಯಾ. ಲಲಿತ್‌ ಅವರ ನೇತೃತ್ವದ ಪೀಠವು “ಜನವರಿಯಲ್ಲಿ ಮನವಿ ಇತ್ಯರ್ಥಪಡಿಸಲು ಪಟ್ಟಿ ಮಾಡಲಾಗುವುದು. ಇನ್ನು ನಾವು ಕಾಯಲಾಗದು. ಹಸ್ತಾಂತರದ ಪ್ರಕ್ರಿಯೆಗಳು ಅಂತಿಮ ಹಂತವನ್ನು ತಲುಪಿವೆ ಮತ್ತು ಮೂರನೇ ಪ್ರತಿವಾದಿಗೆ (ವಿಜಯ್ ಮಲ್ಯ) ಯುನೈಟೆಡ್ ಕಿಂಗ್‌ಡಂನಲ್ಲಿ ಮೇಲ್ಮನವಿಯ ಎಲ್ಲಾ ಮಾರ್ಗಗಳನ್ನು ಬಂದ್‌ ಆಗಿವೆ” ಎಂದಿತ್ತು.

ತಮ್ಮ ವಿರುದ್ಧದ ಶಿಕ್ಷೆ ನಿಗದಿಪಡಿಸುವ ವಿಚಾರಣೆಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯವು ಮಲ್ಯಗೆ ಆದೇಶಿಸಿತ್ತು. ಈ ವೇಳೆಗಾಗಲೇ ದೇಶ ತೊರೆದಿದ್ದ ಮಲ್ಯ ಅವರು ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. 2017ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಮಲ್ಯ ಸಲ್ಲಿಸಿದ್ದ ಮನವಿಯನ್ನು 2020ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು.

ಇದರ ಬೆನ್ನಿಗೇ, ಯುನೈಟೆಡ್‌ ಕಿಂಗ್‌ಡಂನಲ್ಲಿ ಮಲ್ಯ ವಿರುದ್ಧ ಕೆಲವು ಗೌಪ್ಯ ಪ್ರಕ್ರಿಯೆ ಆರಂಭಿಸಿರುವುದರಿಂದ ಮಲ್ಯ ಅವರ ಗಡಿಪಾರಿಗೆ ಆದ್ಯತೆ ನೀಡಲಾಗಿಲ್ಲ ಎಂದು ವಿದೇಶಾಂಗ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಹೀಗಾಗಿ, ಮಲ್ಯ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿತ್ತು.