ಇಂಗ್ಲೆಂಡ್‌ನಲ್ಲಿ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಗೌಪ್ಯ ವಿಚಾರಣೆ ನಡೆಸುತ್ತಿರುವುದರಿಂದ ಅವರ ಹಸ್ತಾಂತರ ವಿಚಾರ ಸಾಧ್ಯವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸೋಮವಾರ ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
ಮದ್ಯ ಉದ್ಯಮಿ ವಿಜಯ್ ಮಲ್ಯ ಇಂದು ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಾಜರಿರಬೇಕಿತ್ತು. ಆಗಸ್ಟ್ 31ರಂದು ಅವರ ವಿರುದ್ಧದ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಅವರು ದೋಷಿ ಎಂದು ಘೋಷಿಸಲ್ಪಟ್ಟಿರುವುದು ಕಾಯಂ ಆಗಿದೆ.
ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅಶೋಕ್ ಭೂಷಣ್ ಅವರಿದ್ದ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆಯ ವಕೀಲರು, ಮಲ್ಯ ಹಸ್ತಾಂತರವನ್ನು ಇಂಗ್ಲೆಂಡ್‌ನ ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ. ಆದರೆ, ಮಲ್ಯ ವಿರುದ್ಧ ಆನಂತರ ಕೆಲವೊಂದು "ಗೌಪ್ಯ ವಿಚಾರಣಾ ಪ್ರಕ್ರಿಯೆ"ಗಳಿಗೆ ಚಾಲನೆ ದೊರೆತಿರುವುದರಿಂದ ಹಸ್ತಾಂತರ ಸಾಧ್ಯವಾಗಿಲ್ಲ ಎಂದು ತಿಳಿಸಿದೆ.
ಗೌಪ್ಯ ಪ್ರಕ್ರಿಯೆ ಯಾವಾಗ ಅಂತ್ಯವಾಗಲಿದೆ ಎಂದು ಪ್ರಶ್ನಿಸಿದ ನ್ಯಾಯಾಲಯಕ್ಕೆ ಪ್ರಕರಣದಲ್ಲಿ ಭಾರತ ಸರ್ಕಾರವನ್ನು ಪ್ರತಿವಾದಿಗಳನ್ನಾಗಿಸಿಲ್ಲ. ಪ್ರಕರಣದ ಪ್ರಕ್ರಿಯೆಯು ಗೌಪ್ಯ ಸ್ವರೂಪದಿಂದ ಕೂಡಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಇದೇ ಪ್ರಶ್ನೆಯನ್ನು ನ್ಯಾಯಾಲಯವು ಮಲ್ಯ ಪರ ವಕೀಲ ಅಂಕುರ್ ಸೈಗಲ್ ಅವರಿಗೆ ಹಾಕಿತು. ಈ ವಿಚಾರದ ಬಗ್ಗೆ ತನಗೆ ಮಾಹಿತಿ ಇಲ್ಲ. ವಿವರ ಪಡೆಯಲು ಕಾಲಾವಕಾಶ ನೀಡುವಂತೆ ಅವರು ಕೋರಿದರು. ಇದರಿಂದ ಕೆರಳಿದ ನ್ಯಾಯಪೀಠವು, ಸೈಗಲ್ ಅವರು ಈ ಎಲ್ಲಾ ವಿಚಾರಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದಿತು.
ವಿವರ ಪಡೆಯಲು ಸೈಗಲ್ ಅವರಿಗೆ ಅವಕಾಶ ಮಾಡಿಕೊಟ್ಟ ನ್ಯಾಯಾಲಯವು ಕೆಳಗಿನ ಮೂರು ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಸೂಚಿಸಿದೆ.
ಇಂಗ್ಲೆಂಡ್‌ನಲ್ಲಿ ಬಾಕಿ ಇರುವ ವಿಚಾರಣಾ ಪ್ರಕ್ರಿಯೆಯ ಸ್ವರೂಪವೇನು?
ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳುವುದು ಯಾವಾಗ?
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಅವರು ಯಾವಾಗ ನ್ಯಾಯಾಲಯದ ಮುಂದೆ ಹಾಜರಾಗುತ್ತಾರೆ?
ಪ್ರಕರಣದ ವಿಚಾರಣೆಯನ್ನು ನವೆಂಬರ್ 2ರ ಮಧ್ಯಾಹ್ನ 2ಕ್ಕೆ ಮುಂದೂಡಲಾಗಿದೆ. ಆಗಸ್ಟ್ 31ರಂದು ವಿಜಯ್ ಮಲ್ಯ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಅಕ್ಟೋಬರ್ 5ರ ಮಧ್ಯಾಹ್ನ 2ಕ್ಕೆ ಹಾಜರಿರುವಂತೆ ಮಲ್ಯಗೆ ನ್ಯಾಯಾಲಯ ಸೂಚಿಸಿತ್ತು. ಮಲ್ಯ ಉಪಸ್ಥಿತಿಗೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನ್ಯಾಯಪೀಠ ಸೂಚಿಸಿತ್ತು.
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನೇತೃತ್ವದ ಸಾಲ ನೀಡಿದವರ ಒಕ್ಕೂಟವು (ಸಿಒಸಿ) ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶಕ್ಕೆ ಅಗೌರವ ತೋರಿದ್ದಾರೆ ಎಂದು ಮಲ್ಯ ವಿರುದ್ಧ ನ್ಯಾಯಾಲಯವು 2017ರಲ್ಲಿ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಿ, ದೋಷಿ ಎಂದು ಘೋಷಿಸಿತ್ತು. ಮಲ್ಯ ಅವರು ತಮ್ಮ ಆಸ್ತಿಯ ಬಗ್ಗೆ ಅಸಮಂಜಸ ಮಾಹಿತಿ ನೀಡಿದ ಮತ್ತು ನ್ಯಾಯಾಲಯದ ಆದೇಶ ಧಿಕ್ಕರಿಸಿ ತಮ್ಮ ಖಾತೆಯಿಂದ ಇತರರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ತಮ್ಮ ವಿರುದ್ಧದ ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟ ವಿಚಾರಣೆಯಲ್ಲಿ ಹಾಜರಿರುವಂತೆ ಸೂಚಿಸಲಾಗಿತ್ತು. ಈಗಾಗಲೇ ದೇಶ ತೊರಿದಿದ್ದರಿಂದ ಅವರು ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ.
2017ರ ನ್ಯಾಯಾಂಗ ನಿಂದನಾ ತೀರ್ಪನ್ನು ಮರುಪರಿಶೀಲಿಸುವಂತೆ ಮಲ್ಯ ಅವರು ವಿಭಾಗೀಯ ಪೀಠವನ್ನು ಕೋರಿದ್ದರು. ಬ್ಯಾಂಕ್‌ಗಳ ಆರೋಪಕ್ಕೆ ಸಂಬಂಧಿಸಿದಂತೆ ಮಲ್ಯ ಪ್ರತಿಕ್ರಿಯೆ ದಾಖಲಿಸಿಲ್ಲ ಎಂಬ ತಪ್ಪಾದ ದಾಖಲೆಯನ್ನು ಆಧರಿಸಿ ನ್ಯಾಯಾಲಯವು ಪ್ರಕ್ರಿಯೆ ಜಾರಿಗೊಳಿಸಿತ್ತು. ಪ್ರಕ್ರಿಯೆಯ ವಿಚಾರದಲ್ಲಿ ನ್ಯಾಯಾಲಯದಿಂದ ಲೋಪ ಎಸಗಿತ್ತು ಎಂದು ಮಲ್ಯ ವಾದಿಸಿದ್ದರು. ಈ ವಿಚಾರದ ಆಧಾರದಲ್ಲಿ ನ್ಯಾಯಪೀಠವು ತೀರ್ಪು ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮುಕ್ತ ನ್ಯಾಯಾಲಯದಲ್ಲಿ ನಡೆಸಿತ್ತು.
“...30.01.2017ರಂದು ಮೆಮೊ ಒಳಗೊಂಡಂತೆ ಸಂಬಂಧ ಪಟ್ಟ ದಾಖಲೆಗಳು ಮತ್ತು 30.01.2017ರಂದು ಪ್ರತಿಕ್ರಿಯೆಯನ್ನು ನಮ್ಮ ಅವಗಾಹನೆಗೆ ಸಲ್ಲಿಸಲಾಗಿತ್ತು. ಈ ವಿಚಾರಗಳಿಂದ ಸ್ಪಷ್ಟವಾಗುವುದೇನೆಂದರೆ ಮೂರನೇ ಪ್ರತಿವಾದಿಯು ಬ್ಯಾಂಕ್ ಗಳ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ದಾಖಲಿಸಿಲ್ಲ ಎನ್ನುವುದನ್ನುಪರಿಶೀಲಿಸಿಯೂ ಪ್ರಕ್ರಿಯೆ ಮುಂದುವರಿಸಿದ್ದು ಈ ನ್ಯಾಯಾಲಯದಿಂದ ಆದ ತಪ್ಪು”.
ಆಗಸ್ಟ್ 31ರಂದು ತೀರ್ಪು ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ್ದ ನ್ಯಾಯಾಲಯವು ತನ್ನಿಂದಾದ ಲೋಪವನ್ನು ಗುರುತಿಸಿದ್ದು, ಬ್ಯಾಂಕ್ ಗಳ ಹೇಳಿಕೆಗೆ ಮಲ್ಯ ಪ್ರತಿಕ್ರಿಯೆ ದಾಖಲಿಸಿಲ್ಲ ಎಂಬ ವಿಚಾರದ ವಿಚಾರಣೆಯನ್ನು ಮುಂದುವರಿಸಿತ್ತು.
ತೀರ್ಪು ಕಾಯ್ದಿರಿಸುವುದಕ್ಕೂ ಮುನ್ನ, ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ ತೊರೆದ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಪ್ರಮುಖ ದಾಖಲೆಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಹಿಂದೆ ಪ್ರಕರಣವನ್ನು ಮುಂದೂಡಲಾಗಿತ್ತು. ಮಲ್ಯ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಮೂರು ವರ್ಷವಾದರೂ ಯಾಕೆ ವಿಚಾರಣೆಗೆ ಮಂಡಿಸಿಲ್ಲ ಎಂದು ಜೂನ್ 19ರಂದು ರಿಜಿಸ್ಟ್ರಿಯನ್ನು ನ್ಯಾಯಾಲಯ ಪ್ರಶ್ನಿಸಿತ್ತು.