Calcutta High Court, Supreme Court  
ಸುದ್ದಿಗಳು

ಹರೆಯದ ಹುಡುಗಿಯರು ಲೈಂಗಿಕ ಅಭೀಪ್ಸೆ ಹತ್ತಿಕ್ಕಿಕೊಳ್ಳಬೇಕು ಎಂದಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂ

ಆದೇಶ ಸಂಪೂರ್ಣ ತಪ್ಪು ಸಂದೇಶ ರವಾನಿಸಲಿದೆ. ಸಿಆರ್‌ಪಿಸಿ ಸೆಕ್ಷನ್ 482ರ ಅಡಿ ಹೈಕೋರ್ಟ್ ನ್ಯಾಯಮೂರ್ತಿಗಳು ಅನ್ವಯಿಸಿರುವ ತತ್ವವಾದರೂ ಎಂಥದ್ದು ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು.

Bar & Bench

ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಅಭೀಪ್ಸೆಗಳನ್ನು ಹತ್ತಿಕ್ಕಿಕೊಳ್ಳಬೇಕು ಎಂದು ಕಲ್ಕತ್ತಾ ಹೈಕೋರ್ಟ್‌ ಈ ಹಿಂದೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ.

ಹೇಗೆ ತೀರ್ಪುಗಳನ್ನು ಬರೆಯಬೇಕು ಎಂಬುದರ ಕುರಿತು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ವಿವರಿಸಿತು.

ಆದೇಶ ಸಂಪೂರ್ಣ ತಪ್ಪು ಸಂದೇಶ ರವಾನಿಸಲಿದೆ. ಸಿಆರ್‌ಪಿಸಿ ಸೆಕ್ಷನ್ 482ರ ಅಡಿ ಹೈಕೋರ್ಟ್ ನ್ಯಾಯಮೂರ್ತಿಗಳು ಅನ್ವಯಿಸಿರುವ ತತ್ವವಾದರೂ ಎಂಥದ್ದು ಎಂದು ಸುಪ್ರೀಂ ಕೋರ್ಟ್ ಕಳಕಳಿ ವ್ಯಕ್ತಪಡಿಸಿತು.

ಕ್ಷಣಿಕ ಸುಖಕ್ಕೆ ಹದಿಹರೆಯದ ಹುಡುಗಿಯರು ಮಣಿಯುವ ಬದಲು ತಮ್ಮ ಲೈಂಗಿಕ ಅಭೀಪ್ಸೆಗಳನ್ನು ಹತ್ತಿಕ್ಕಿಕೊಳ್ಳಬೇಕು ಎಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಶಿಕ್ಷೆಗೊಳಗಾದ ಪ್ರಣಯ ಸಂಬಂಧ ಹೊಂದಿದ ಯುವಕನನ್ನು ಖುಲಾಸೆಗೊಳಿಸುವಾಗ ನ್ಯಾಯಮೂರ್ತಿಗಳಾದ ಚಿತ್ತ ರಂಜನ್ ದಾಸ್‌ ಮತ್ತು ಪಾರ್ಥ ಸಾರಥಿ ಸೇನ್ ಅವರಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ತಿಳಿಸಿತ್ತು. ಹದಿಹರೆಯದವರಿಗೆ ಕರ್ತವ್ಯ ಅಥವಾ ಹೊಣೆಗಾರಿಕೆ ವಿಧಾನ ಸೂಚಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಜೊತೆಗೆ ಹದಿಹರೆಯದ ಹೆಣ್ಣು ಮತ್ತು ಗಂಡಿನ ಕರ್ತವ್ಯಗಳು ಬೇರೆ ಬೇರೆ ಎಂದು ಹೇಳಿತ್ತು.

ತೀರ್ಪಿನ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಹೈಕೋರ್ಟ್‌ ಅವಲೋಕನ ಆಕ್ಷೇಪಾರ್ಹ ಮತ್ತು ಅನಗತ್ಯ ಎಂದಿದ್ದ ಅದು ನ್ಯಾಯಾಧೀಶರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಅಥವಾ ಬೋಧಿಸುವ ಅಗತ್ಯವಿಲ್ಲ ಎಂದು ಕಿವಿ ಹಿಂಡಿತ್ತು.

ಆರೋಪಿಯ ಶಿಕ್ಷೆಯನ್ನು ಮರುಜಾರಿಗೊಳಿಸಿದ ಸುಪ್ರೀಂ ಕೋರ್ಟ್‌ ಶಿಕ್ಷೆ ಪ್ರಮಾಣ ಕುರಿತಂತೆ ತಜ್ಞರ ಸಮಿತಿ ನಿರ್ಧರಿಸಬೇಕು ಎಂದು ಸೂಚಿಸಿತು.

ಹಿರಿಯ ವಕೀಲರಾದ ಮಾಧವಿ ದಿವಾನ್ ಮತ್ತು ಲಿಜ್ ಮ್ಯಾಥ್ಯೂ ಅವರು ಈ ಪ್ರಕರಣದಲ್ಲಿ ಅಮಿಕಿ ಕ್ಯೂರಿಯಾಗಿದ್ದರು.ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಹುಝೆಫಾ ಅಹ್ಮದಿ ಮತ್ತು ವಕೀಲೆ ಆಸ್ತಾ ಶರ್ಮಾ ಹಾಜರಿದ್ದರು.