Supreme Court  
ಸುದ್ದಿಗಳು

ಗೋಕರ್ಣ ಗುಹೆಯಲ್ಲಿ ರಷ್ಯಾ ಮಹಿಳೆ, ಮಕ್ಕಳು ಪತ್ತೆ ಪ್ರಕರಣ: ಮಕ್ಕಳ ತಂದೆ ಎಂದಿದ್ದ ಇಸ್ರೇಲಿಗನಿಗೆ ಸುಪ್ರೀಂ ಛೀಮಾರಿ

"ನೀವು ಇಸ್ರೇಲಿ. ಭಾರತದಲ್ಲಿ ನಿಮಗೇನು ಕೆಲಸ? ನೀವು ಅಲ್ಲಿ (ಗೋಕರ್ಣ) ಏನು ಮಾಡುತ್ತಿದ್ದಿರಿ?" ಎಂದ ನ್ಯಾಯಾಲಯ ಆತನ ಮನವಿ ತಿರಸ್ಕರಿಸಿತು.

Bar & Bench

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಗುಹೆಯಲ್ಲಿ ನಿಗೂಢವಾಗಿ ನೆಲೆಸಿದ್ದ ರಷ್ಯಾದ ಮಹಿಳೆಗೆ ಜನಿಸಿದ್ದ ಇಬ್ಬರು ಮಕ್ಕಳಲ್ಲಿ ಒಬ್ಬಾಕೆಯ ತಂದೆ ತಾನು ಎಂದು ಹೇಳಿಕೊಂಡು ಇಸ್ರೇಲಿ ಪ್ರಜೆ ಡ್ರೋರ್ ಶಲೋಮ್ ಗೋಲ್ಡ್‌ಸ್ಟೈನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ಡ್ರೋರ್ ಶಲೋಮ್‌ ಗೋಲ್ಡ್‌ಸ್ಟೈನ್ಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]

ರಷ್ಯಾಗೆ ಮಹಿಳೆ ಮತ್ತು ಮಕ್ಕಳ ಗಡೀಪಾರು ತಡೆಯಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ನಿರಾಕರಿಸಿತು.

ಮಹಿಳೆಯೇ ಮನೆಗೆ ಮರಳುವುದಕ್ಕಾಗಿ ರಷ್ಯಾದ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದಾರೆ ಎಂದು ಹೈಕೋರ್ಟ್ ಹೇಳಿತ್ತು. ಈ ತೀರ್ಪು ಪ್ರಶ್ನಿಸಿ ಇಸ್ರೇಲಿ ಪ್ರಜೆ ಡ್ರೋರ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಆತನ ಪ್ರಾಮಾಣಿಕತೆ ಮತ್ತು ಆದಾಯ ಮೂಲವನ್ನು ಪ್ರಶ್ನಿಸಿತು.

"ನೀವು ಇಸ್ರೇಲಿ. ಭಾರತದಲ್ಲಿ ನಿಮಗೇನು ಕೆಲಸ? ನೀವು ನೇಪಾಳಕ್ಕೆ ಹೋಗಿ, ನಿಮ್ಮ ವೀಸಾವನ್ನು ನವೀಕರಿಸಿಕೊಂಡು ಗೋವಾಕ್ಕೆ ಹಿಂತಿರುಗುತ್ತೀರಿ. ನೀವು ಅಲ್ಲಿ (ಗೋವಾ) ಏನು ಮಾಡುತ್ತಿದ್ದೀರಿ? ನಿಮ್ಮ ಆದಾಯದ ಮೂಲ ಯಾವುದು?" ಎಂದು ನ್ಯಾಯಮೂರ್ತಿ ಕಾಂತ್ ಪ್ರಶ್ನಿಸಿದರು.

ಗೋಕರ್ಣ ಬಳಿಯ ರಾಮತೀರ್ಥ ಬೆಟ್ಟದ ಗುಹೆಯೊಂದರಲ್ಲಿ ಸುಮಾರು ಎರಡು ತಿಂಗಳ ಕಾಲ ಅಧಿಕೃತ ಪ್ರಯಾಣ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ ಮಹಿಳೆ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಜುಲೈ 2025ರಲ್ಲಿ ಪತ್ತೆಯಾಗಿದ್ದರು.

ಸ್ಥಳೀಯ ಪೊಲೀಸರು ಅವರನ್ನು ರಕ್ಷಿಸಿ ತುಮಕೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ (ಎಫ್‌ಆರ್‌ಆರ್‌ಒ) ಮೇಲ್ವಿಚಾರಣೆಯಲ್ಲಿ ವಿದೇಶಿಯರ ನಿರ್ಬಂಧ ಕೇಂದ್ರದಲ್ಲಿ ಇರಿಸಿದ್ದರು. ನಂತರ ಆ ತಾಯಿ ಹಾಗೂ ಮಕ್ಕಳು ರಷ್ಯಾಕ್ಕೆ ಮರಳಲು ರಷ್ಯಾದ ರಾಯಭಾರ ಕಚೇರಿ ತುರ್ತು ಪ್ರಯಾಣ ದಾಖಲೆಗಳನ್ನು ಒದಗಿಸಿತ್ತು.

ಗೋವಾದಲ್ಲಿ ವಾಸಿಸುತ್ತಿದ್ದ ಡ್ರೋರ್, ನಂತರ ತಾನು ಮಕ್ಕಳ ತಂದೆ ಎಂದು ಹೇಳಿಕೊಂಡು ಹೈಕೋರ್ಟ್‌ ಮೊರೆ ಹೋಗಿದ್ದರು. ರಷ್ಯಾಕ್ಕೆ ತಾಯಿ- ಮಕ್ಕಳನ್ನು ಗಡೀಪಾರು ಮಾಡುವುದು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಕೈಗೊಂಡ ನಿರ್ಣಯವನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಪಾದಿಸಿದರು.

ಆದರೆ, ಮಹಿಳೆ ಮತ್ತು ಮಕ್ಕಳನ್ನು ನಿಜವಾಗಿಯೂ ಡ್ರೋರ್ ಬೆಂಬಲಿಸುತ್ತಿದ್ದರೆ, ಅವರು ಗುಹೆಯಲ್ಲಿ ವಾಸಿಸುತ್ತಿದ್ದುದು ಏಕೆ ಎಂಬುದನ್ನು ಆತ ವಿವರಿಸಿಲ್ಲ ಎಂದಿದ್ದ ಹೈಕೋರ್ಟ್ ಅರ್ಜಿ ತಿರಸ್ಕರಿಸಿತ್ತು. ಪರಿಣಾಮ ಡ್ರೋರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ರಷ್ಯಾಕ್ಕೆ ತಾಯಿ- ಮಕ್ಕಳನ್ನು ಗಡಿಪಾರು ಮಾಡುತ್ತಿರುವುದು ಕಾನೂನುಬಾಹಿರ ಎಂದಿದ್ದರು.

ನೀವು ಇಸ್ರೇಲಿ. ಭಾರತದಲ್ಲಿ ಏನು ಮಾಡುತ್ತಿದ್ದೀರಿ?
ಸುಪ್ರೀಂ ಕೋರ್ಟ್

ಡ್ರೋರ್ ಪರ ವಕೀಲರ ಸಮರ್ಥನೆಗಳನ್ನು ಒಪ್ಪದ ನ್ಯಾಯಾಲಯ ಮಕ್ಕಳು ಗುಹೆಯಲ್ಲಿ ವಾಸಿಸುತ್ತಿದ್ದಾಗ ಅವರೇನು ಮಾಡುತ್ತಿದ್ದರು ಎಂದು ಪ್ರಶ್ನಿಸಿತು. ಅಲ್ಲದೆ ಮಕ್ಕಳನ್ನು ಡ್ರೋರ್ ಪೋಷಿಸುತ್ತಾರೆ ಎಂಬ ಆತನ ಪರ ವಕೀಲರ ಹೇಳಿಕೆಗಳನ್ನು ಒಪ್ಪದ ನ್ಯಾಯಾಲಯ ಆತ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಂತಹ ಯಾವುದೇ ದಾಖಲೆಗಳು ಇಲ್ಲ ಎಂದಿತು.

ಅಲ್ಲದೆ ಇದು ಆತ ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ ಎಂತಲೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಇದೇ ವೇಳೆ ತನ್ನ ಪಿತೃತ್ವ ಸಾಬೀತುಪಡಿಸುವಂತಹ ದಾಖಲೆಗಳನ್ನು ಆತ ಒದಗಿಸಬೇಕು ಜೊತೆಗೆ ಭಾರತದಲ್ಲಿ ಉಳಿದಿರುವ ಆತನನ್ನೂ ಏಕೆ ಇಸ್ರೇಲ್‌ಗೆ ಗಡಿಪಾರು ಮಾಡಬಾರದು ಎಂದು ನ್ಯಾಯಾಲಯ ಪ್ರಶ್ನಿಸಿತು.

ಮಕ್ಕಳಲ್ಲಿ ಒಬ್ಬರು ಭಾರತದಲ್ಲಿ ಜನಿಸಿರುವುದರಿಂದ ಅವರಿಗೆ ಭಾರತೀಯ ಕಾನೂನಿನಡಿಯಲ್ಲಿ ಕೆಲವು ಹಕ್ಕುಗಳಿವೆ ಎಂದು ಡ್ರೋರ್ ಪರ ವಕೀಲರು ಉತ್ತರಿಸಿದರು. ಆಗ ಪೀಠ ಆತನ ವಾಸಸ್ಥಳ ಮತ್ತು ಆದಾಯ ಮೂಲದ ಬಗ್ಗೆ ಪ್ರಶ್ನೆ ಕೇಳಿತು. ಕಡೆಗೆ ವಕೀಲರ ಕೋರಿಕೆಯಂತೆ ಮನವಿ ಹಿಂಪಡೆಯಲು ಅದು ಅವಕಾಶ ನೀಡಿತು. ಈ ಹಂತದಲ್ಲಿ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ದೇಶ ಎಲ್ಲರಿಗೂ ನೆಲೆಯಾಗುತ್ತಿದೆ. ಯಾರೇ ಬಂದರೂ ಇಲ್ಲಿ ನೆಲೆಸಲು ಬಯಸುತ್ತಾರೆ ಎಂದರು.