ಗೋಕರ್ಣ ದೇವಾಲಯದ ಆಡಳಿತ ವಿವಾದ: ನ್ಯಾಯಮೂರ್ತಿ ಬಿ ಎನ್‌ ಕೃಷ್ಣಗೆ ವಿಟೋ ಅಧಿಕಾರ ನೀಡಿದ ಸುಪ್ರೀಂ ಕೋರ್ಟ್‌

ಗೋಕರ್ಣ ದೇವಾಲಯದ ಚಟುವಟಿಕೆಗಳನ್ನು ನಿರ್ವಹಿಸುವ ಸಂಬಂಧ 2021ರಲ್ಲಿ ಸುಪ್ರೀಂ ಕೋರ್ಟ್‌ ತಮ್ಮ ನೇತೃತ್ವದಲ್ಲಿ ಸಮಿತಿ ರಚಿಸಿದ ಬಳಿಕ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನ್ಯಾ. ಕೃಷ್ಣ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಸಿದರು.
Justice BN Srikrishna and Supreme Court
Justice BN Srikrishna and Supreme Court
Published on

ಗೋಕರ್ಣದ ಮಹಾಬಲೇಶ್ವರ ದೇವಾಲಯದ ಚಟುವಟಿಕೆಗಳ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ ಎನ್‌ ಕೃಷ್ಣ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಸುಪ್ರೀಂ ಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ.

ದೇವಸ್ಥಾನದ ಸಮಿತಿಯ ನೇತೃತ್ವದ ವಹಿಸಿರುವ ನ್ಯಾ. ಕೃಷ್ಣ ಅವರ ಸಮಿತಿಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರ ತ್ರಿಸದಸ್ಯ ಪೀಠವು ವಿಟೊ ಅಧಿಕಾರ ಸೇರಿ ಹಲವು ನಿರ್ದೇಶನಗಳನ್ನು ನೀಡುವ ಮೂಲಕ ಅವರ ಕರ್ತವ್ಯ ನಿರ್ವಹಿಸಲು ದಾರಿ ಸುಗಮಗೊಳಿಸಿದೆ.

ಸಮಿತಿಯ ಸದಸ್ಯರು ಸಹಕಾರ ನೀಡುತ್ತಿಲ್ಲ. ಸದ್ಯದ ಪರಿಸ್ಥಿತಿ ಮುಂದುವರಿದರೆ ಸದಸ್ಯರು ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಸಿಲುಕಬಹುದು ಎಂದು ನ್ಯಾ. ಕೃಷ್ಣ ಅವರು ಸುಪ್ರೀಂ ಕೋರ್ಟ್‌ಗೆ ವರದಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪೀಠವು “ಮಹಾಬಲೇಶ್ವರ ಗೋಕರ್ಣ ದೇವಾಲಯವು 8ನೇ ಶತಮಾನದ ದೇವಸ್ಥಾನವಾಗಿದ್ದು, ಇಲ್ಲಿನ ಸಂಪ್ರದಾಯ ಮತ್ತು ಕಾಲಕ್ರಮೇಣದಿಂದ ನಡೆದುಕೊಂಡು ಬಂದಿರುವ ಚಟುವಟಿಕೆಗಳನ್ನು ಪಾಲಿಸಬೇಕಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ವಾಸ್ತವಿಕ ಪರಿಸ್ಥಿತಿಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕಿದೆ. ನ್ಯಾ. ಕೃಷ್ಣ ಅವರ ಸಲಹೆಗಳನ್ನು ಒಪ್ಪಿಕೊಳ್ಳಬೇಕು” ಎಂದು ಪೀಠ ಹೇಳಿದೆ.

“ನ್ಯಾ. ಕೃಷ್ಣ ಅವರು ಅತ್ಯಂತ ಬೇಸರದಿಂದ ವರದಿ ಸಲ್ಲಿಸಿದ್ದಾರೆ ಮತ್ತು ಅವರು ತೊಡಕಿನ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಅವರು ತಮ್ಮ ಸ್ಥಾನ ತೊರೆದಿಲ್ಲ ಎಂಬುದಕ್ಕೆ ನಾವು ಕೃತಜ್ಞತೆ ಸಲ್ಲಿಸಬೇಕು. ಅವರಿಗೆ ದೇವಸ್ಥಾನ ಮತ್ತು ಪ್ರಾಚೀನವಾದ ಮಠ ಎಷ್ಟು ಪೂಜ್ಯನೀಯ ಎಂಬುದರ ಅರಿವಿದೆ” ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ಪೀಠವು ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ:

- ದೇವಸ್ಥಾನದ ಸಮಿತಿ ಸಕ್ರಿಯವಾಗಿ ಕೆಲಸ ಮಾಡಲು ಕಾರವಾರದ ಜಿಲ್ಲಾ ನ್ಯಾಯಾಧೀಶರನ್ನು ಸೇರ್ಪಡೆ ಮಾಡಬೇಕು. ಒಂದೊಮ್ಮೆ ಅವರು ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸಲು ಅಸಾಧ್ಯವಾದರೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಶ್ರೇಣಿಗಿಂತ (ಎಡಿಜೆ) ಕಡಿಮೆಯಿಲ್ಲದ ಯಾವುದೇ ಸದಸ್ಯರನ್ನು ನೇಮಕ ಮಾಡಬಹುದು. ಎಡಿಜೆ ಅವರು ಟ್ರಸ್ಟ್‌ ಅಥವಾ ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ನಿರ್ವಹಿಸುವಂತಿಲ್ಲ.

- ನ್ಯಾ. ಕೃಷ್ಣ ಅವರ ಜೊತೆ ಸಮಾಲೋಚನೆ ನಡೆಸಿ ನಾಮನಿರ್ದೇಶಿತ ಎಡಿಜೆ ಅವರು ಸಮಿತಿಯ ಕಲ್ಯಾಣಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು.

- ಮುಖ್ಯಸ್ಥರಾದ ನ್ಯಾ. ಕೃಷ್ಣ ಅವರು ಮತ ಚಲಾವಣೆಯ ಹಕ್ಕು ಹೊಂದಿರಲಿದ್ದಾರೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹೊರತಾದ ಎಲ್ಲರೂ ಸಲಹೆಗಾರರ ಪಾತ್ರವನ್ನು ಮಾತ್ರವೇ ಹೊಂದಿರಲಿದ್ದು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನಿರ್ಧಾರವನ್ನು ಮೀರುವ ಯಾವುದೇ ವಿಟೋ ಅಧಿಕಾರ ಹೊಂದಿರುವುದಿಲ್ಲ.

- ರಾಜ್ಯ ಸರ್ಕಾರವು ಉಪಾದಿವಂತರಲ್ಲದ ನಾಲ್ವರು ಖಾಸಗಿ ಸದಸ್ಯರುಗಳನ್ನು ಮರು ನೇಮಕ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

2021ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾ. ಬಿ ಎನ್‌ ಕೃಷ್ಣ ಅವರನ್ನು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಉಸ್ತುವಾರಿಗಳನ್ನಾಗಿ ನೇಮಕ ಮಾಡಿತ್ತು.

ವಿಚಾರಣೆಯ ವೇಳೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಮುರಳೀಧರ್‌ ಅವರು “ಖಾಸಗಿಯಾಗಿ ನೇಮಕಗೊಂಡಿರುವ ಸದಸ್ಯರು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಅದಾಗ್ಯೂ, ಪ್ರತಿಬಂಧಕಾದೇಶಕ್ಕೆ ತಡೆ ನೀಡಿಲ್ಲ” ಎಂದರು.

Also Read
ಮಹಾಬಲೇಶ್ವರ ದೇವಾಲಯದ ಆಡಳಿತ ಮಂಡಳಿಗೆ ನಾಮ ನಿರ್ದೇಶನಗೊಂಡಿದ್ದ ಉಪಾಧಿವಂತರು, ವಿದ್ವಾಂಸರ ಬದಲಾವಣೆ: ಹೈಕೋರ್ಟ್‌ ತಡೆ

ಉಪಾಧಿವಂತರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ನ್ಯಾ. ಕೃಷ್ಣ ಅವರು ಸಲ್ಲಿಸಿರುವ ವರದಿಯು ಏಕಪಕ್ಷೀಯವಾಗಿದೆ. ನ್ಯಾ. ಕೃಷ್ಣ ಅವರು 2021ರಿಂದ ಸ್ಥಳಕ್ಕೆ ಭೇಟಿ ನೀಡಿಲ್ಲ” ಎಂದರು.

ಈ ವಾದ ಒಪ್ಪದ ಸಿಜೆಐ ಅವರು “ಈ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಯನ್ನು ನಂಬದಿರಲು ಯಾವುದೇ ಸಕಾರಣವಿಲ್ಲ. ಎಲ್ಲಾ ಸದಸ್ಯರು ಸಲಹಾಕಾರರ ಮಿತಿಯಲ್ಲಿ ಕೆಲಸ ಮಾಡಬೇಕು. ನ್ಯಾ. ಕೃಷ್ಣ ಅವರು ನಿಯಮ ಮತ್ತು ನಿಬಂಧನೆ ರೂಪಿಸಬೇಕು. ನ್ಯಾ. ಕೃಷ್ಣ ಅವರ ಅನುಪಸ್ಥಿತಿಯಲ್ಲಿ ನ್ಯಾ. ಕೃಷ್ಣ ಅವರ ಜೊತೆ ಸಮಾಲೋಚನೆ ನಡೆಸಿ, ಅವರ ಒಪ್ಪಿಗೆ ಪಡೆದು ಜಿಲ್ಲಾ ನ್ಯಾಯಾಧೀಶರು ನಿರ್ಧಾರ ಕೈಗೊಳ್ಳಬಹುದು” ಎಂದರು.

ಅಂತಿಮವಾಗಿ ಪೀಠವು ವಿಚಾರಣೆಯನ್ನು ಸೆಪ್ಟೆಂಬರ್‌ಗೆ ಮುಂದೂಡಿತು.

Kannada Bar & Bench
kannada.barandbench.com