Bulldozer 
ಸುದ್ದಿಗಳು

ಅಕ್ರಮವಾಗಿ ಮನೆ ನೆಲಸಮ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ತರಾಟೆ; ₹25 ಲಕ್ಷ ಪರಿಹಾರ ನೀಡುವಂತೆ ಆದೇಶ

ದಂಡನಾತ್ಮಕ ಪರಿಹಾರ ನೀಡುವುದರ ಜೊತೆಗೆ ಕಟ್ಟಡ ಧ್ವಂಸಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.

Bar & Bench

ಕಾನೂನು ಪ್ರಕ್ರಿಯೆ ಪಾಲಿಸದೆ ವ್ಯಕ್ತಿಯೊಬ್ಬರ ಮನೆ ಕೆಡವಿದ್ದಕ್ಕಾಗಿ ಉತ್ತರ ಪ್ರದೇಶ (ಯುಪಿ) ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.

ತೆರವು ಕಾರ್ಯಾಚರಣೆ ದಬ್ಬಾಳಿಕೆಯಿಂದ ಕೂಡಿದ್ದು ಕಾನೂನಿನ ಅಧಿಕಾರ ಇಲ್ಲದೆ ಇದು ನಡೆದಿದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠ ತಿಳಿಸಿತು.

"ಕಾನೂನು ಪಾಲಿಸದೆ ಅಥವಾ ನೋಟಿಸ್ ನೀಡದೆ ನೀವು ಯಾರದೋ ಮನೆ ಹೊಕ್ಕು ಅದನ್ನು ಕೆಡವಲು ಹೇಗೆ ಸಾಧ್ಯ" ಎಂದು ಪೀಠ ಕಿಡಿಕಾರಿತು.

ಆದ್ದರಿಂದ ಸಂತ್ರಸ್ತ ವ್ಯಕ್ತಿಗೆ ₹ 25 ಲಕ್ಷ  ದಂಡನಾತ್ಮಕ ಪರಿಹಾರ ನೀಡುವುದರ ಜೊತೆಗೆ ಕಟ್ಟಡ ಧ್ವಂಸಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಅದು ನಿರ್ದೇಶನ ನೀಡಿತು. ಒಂದು ತಿಂಗಳೊಳಗಾಗಿ ತನ್ನ ಆದೇಶ ಜಾರಿಯಾಗಬೇಕು ಎಂತಲೂ ನ್ಯಾಯಾಲಯ ತಿಳಿಸಿದೆ.

 ಗಡಿ ಗುರುತಿಸುವಿಕೆಯ ಆಧಾರ ಅಥವಾ ನೆಲಸಮ ಮಾಡಬೇಕಾದ ವ್ಯಾಪ್ತಿಗೆ ಸಂಬಂಧಿಸಿದಂತೆ ಅನುಭೋಗಿಗಳಿಗೆ ಯಾವುದೇ ನೋಟಿಸ್‌ ನೀಡದೆ ತೆರವು ಕಾರ್ಯಾಚರಣೆ ನಡೆದಿದೆ. ತೆರವು ಕಾರ್ಯಾಚರಣೆ ದಬ್ಬಾಳಿಕೆಯಿಂದ ಕೂಡಿದ್ದು ಕಾನೂನಿನ ಅಧಿಕಾರ ಇಲ್ಲದೆ ಇದು ನಡೆದಿದೆ. ರಸ್ತೆ ನಿರ್ಮಾಣ ಯೋಜನೆಯಲ್ಲಿ ಅಕ್ರಮ ನಡೆದಿರುವ ಕುರಿತಂತೆ ಅರ್ಜಿದಾರರು ಮಾಧ್ಯಮಗಳ ಗಮನ ಸೆಳೆದಿದ್ದರಿಂದ ತನ್ನ ಕಟ್ಟಡ ನೆಲಸಮ ಮಾಡಲಾಗಿದೆ ಎಂದು ದಾವೆದಾರ ಹೇಳಿದ್ದಾರೆ. ಸರ್ಕಾರದ ಈ ಕ್ರಮ ಒಪ್ಪುವಂಥದ್ದಲ್ಲ ಮತ್ತು ಖಾಸಗಿ ಆಸ್ತಿಗೆ ಸಂಬಂಧಿಸಿದಂತೆ ವ್ಯವಹರಿಸುವಾಗ ಕಾನೂನು ಪಾಲಿಸಬೇಕು ಎಂದು ನ್ಯಾಯಾಲಯ ಕಿವಿ ಹಿಂಡಿದೆ.

ರಸ್ತೆ ಯೋಜನೆಯ ಅಕ್ರಮಗಳ ಬಗ್ಗೆ ತಾನು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರಿಂದ ತನ್ನ ವಿರುದ್ಧ ಪ್ರತೀಕಾರದ ಕ್ರಮವಾಗಿ ನೆಲಸಮ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದರು.

ಪ್ರಕರಣ ಮುಂದೂಡುವಂತೆ ಉತ್ತರ ಪ್ರದೇಶ ಸರ್ಕಾರ ಮಾಡಿದ ಮನವಿಯನ್ನೂ ನ್ಯಾಯಾಲಯ ವಜಾಗೊಳಿಸಿತು. ಎಲ್ಲಾ ಕಾನೂನು ದಾಖಲೆಗಳನ್ನು ಈಗಾಗಲೇ ಸಲ್ಲಿಸಿರುವುದರಿಂದ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಅದು ಹೇಳಿತು.

ನೆಲಸಮ ಕಾರ್ಯಾಚರಣೆ ಪ್ರಾರಂಭಿಸುವ ಮೊದಲು ಹೆದ್ದಾರಿಯ ಮೂಲ ಅಗಲದ ಕುರಿತಾದ ಮಾಹಿತಿಯನ್ನಾಗಲಿ, ಯಾವುದೇ ಅತಿಕ್ರಮಣದ ಪ್ರಮಾಣಕ್ಕೆ ಸಂಬಂಧಿಸಿದ ಸಾಕ್ಷ್ಯವನ್ನಾಗಲಿ ಅಥವಾ ಯಾವುದೇ ಭೂಸ್ವಾಧೀನವನ್ನು ಕೈಗೊಳ್ಳಲಾಗಿದೆ ಎಂಬುದಕ್ಕೆ ಪುರಾವೆಗಳನ್ನಾಗಲಿ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ ಅತಿಕ್ರಮಣ ನಡೆದಿರಬಹುದಾದ ಜಾಗಕ್ಕಿಂತಲೂ ಹೆಚ್ಚಿನೆಡೆಗಳಲ್ಲಿ ಕಟ್ಟಡ ನೆಲಸಮ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ತನಿಖಾ ವರದಿ ಹೇಳಿರುವುದನ್ನು ನ್ಯಾಯಾಲಯ ತಿಳಿಸಿತು.