ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರ ಮನೆ ಅಥವಾ ಅಂಗಡಿಗಳನ್ನು ವಿಚಾರಣೆಯೇ ಇಲ್ಲದೆ ಅಕ್ರಮವಾಗಿ ಶಿಕ್ಷಿಸುವ ನೆವದಲ್ಲಿ ಬುಲ್ಡೋಜರ್ ಬಳಸಿ ನೆಲಸಮ ಮಾಡುವುದನ್ನು ತಡೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಕಾಯ್ದಿರಿಸಿದೆ.
ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದ ಶಂಕಿತರ ಆಸ್ತಿಗಳನ್ನು ನ್ಯಾಯಾಲಯದ ಅನುಮತಿ ಪಡೆಯದೆ ನೆಲಸಮ ಮಾಡುವುದನ್ನು ನಿಷೇಧಿಸಲಾಗಿದ್ದ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶ ಪ್ರಕರಣ ಇತ್ಯರ್ಥವಾಗುವವರೆಗೆ ವಿಸ್ತರಿಸಲಿದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿತು.
ಆದರೆ ತೆರವು ಕಾರ್ಯಾಚರಣೆಗೆ ಮುಂದಾಗದಂತೆ ತಾನು ಈ ಹಿಂದೆ ನೀಡಿದ್ದ ಆದೇಶ ಅಕ್ರಮ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಲ್ಲದೆ ಉದ್ದೇಶಿತ ತೆರವು ಕಾರ್ಯಾಚರಣೆಗೆ ತುತ್ತಾಗುವವರಿಗೆ ಮುಂಚಿತವಾಗಿ ಮಾಹಿತಿ ನೀಡಲು ಹಾಗೂ ಕೈಗೊಂಡ ಕ್ರಮದ ವಿಡಿಯೋಗ್ರಫಿಯನ್ನು ದಾಖಲಿಸಲು ಆನ್‌ಲೈನ್ ವೇದಿಕೆ ರೂಪಿಸಬೇಕು ಎಂದು ಅದು ಹೇಳಿದೆ.
ಜೊತೆಗೆ 'ಬುಲ್ಡೋಜರ್ ನ್ಯಾಯʼದಂತಹ ಸಮಸ್ಯೆ ನಿಭಾಯಿಸಲು ತಾನು ಈ ಹಿಂದೆ ತಿಳಿಸಿದಂತೆ ರೂಪಿಸಲಾಗುವ ಮಾರ್ಗಸೂಚಿ ಇಡೀ ಭಾರತಕ್ಕೆ ಅನ್ವಯವಾಗಲಿದೆಯೇ ವಿನಾ ಯಾವುದೇ ನಿರ್ದಿಷ್ಟ ಸಮುದಾಯಕ್ಕಲ್ಲ ಎಂದು ಅದು ಸ್ಪಷ್ಟಪಡಿಸಿದೆ.
"ನಮ್ಮದು ಜಾತ್ಯತೀತ ದೇಶ ಮತ್ತು ನಮ್ಮ ನಿರ್ದೇಶನಗಳು ಧರ್ಮ ಅಥವಾ ಸಮುದಾಯವನ್ನು ಲೆಕ್ಕಿಸದೆ ಎಲ್ಲರಿಗೂ ಅನ್ವಯವಾಗುತ್ತದೆ. ಸಾರ್ವಜನಿಕ ರಸ್ತೆ, ಫುಟ್‌ಪಾತ್, ಜಲಮೂಲ ಅಥವಾ ರೈಲು ಮಾರ್ಗದ ಅತಿಕ್ರಮಣಕಾರರಿಗೆ ಸಂಬಂಧಿಸಿದಂತೆ ನಾವು ಈಗಾಗಲೇ ಸ್ಪಷ್ಟನೆ ನೀಡಿದ್ದು ಗುರುದ್ವಾರವೇ ಇರಲಿ ದರ್ಗಾವೇ ಇರಲಿ ಅಥವಾ ದೇವಸ್ಥಾನವೇ ಆಗಿರಲಿ ಅದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವಂತಿಲ್ಲ” ಎಂದು ಅದು ಪುನರುಚ್ಚರಿಸಿದೆ.
ಯಾವುದೇ ಕಟ್ಟಡ ಕೆಡವಲು ಹೊರಡಿಸುವ ಆದೇಶಕ್ಕೆ ನ್ಯಾಯಾಂಗ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ಕೂಡ ನ್ಯಾಯಾಲಯ ನುಡಿದಿದೆ.
ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳ ಪರವಾಗಿ ವಾದ ಮಂಡಿಸಿದರು.
ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರ ಮನೆ ಅಥವಾ ಅಂಗಡಿಗಳನ್ನು ನೆಲಸಮ ಮಾಡುವ ಪ್ರವೃತ್ತಿಯನ್ನು ಈಚೆಗೆ ಖಂಡಿಸಿದ್ದ ಸುಪ್ರೀಂ ಕೋರ್ಟ್ ʼಬುಲ್ಡೋಜರ್ ನ್ಯಾಯʼದಂತಹ ಸಮಸ್ಯೆಗಳನ್ನು ನಿಭಾಯಿಸಲು ಮಾರ್ಗಸೂಚಿ ಪ್ರಕಟಿಸುವುದಾಗಿ ತಿಳಿಸಿತ್ತು.
ಒಬ್ಬ ವ್ಯಕ್ತಿ ಆರೋಪಿಯಾಗಿದ್ದ ಮಾತ್ರಕ್ಕೇ ಅವರ ಕಟ್ಟಡಗಳನ್ನು ತೆರವುಗೊಳಿಸಬಹುದೇ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಕಿಡಿಕಾರಿತ್ತು.