Supreme Court and POSH Act 
ಸುದ್ದಿಗಳು

ಪೋಶ್ ಕಾಯಿದೆ ಜಾರಿಯಾಗಿದೆಯೇ ಎಂಬುದನ್ನು ತಿಳಿಸದ ಆರು ಸರ್ಕಾರಗಳಿಗೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್

ದಂಡ ಪಾವತಿಸಿ ಕಾಯಿದೆ ಅನುಪಾಲನೆ ಕುರಿತ ಅಫಿಡವಿಟ್‌ಅನ್ನು ಇನ್ನು ಮೂರು ವಾರಗಳಲ್ಲಿ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿತು.

Bar & Bench

ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ- 2013‌ ಅರ್ಥಾತ್‌ ಪೋಶ್‌ ಕಾಯಿದೆ ಜಾರಿ ಗೊಳಿಸುವ ಸಂಬಂಧ ತಾನು ನೀಡಿದ್ದ ನಿರ್ದೇಶನ ಪಾಲಿಸದ ಮಣಿಪುರ, ಜಾರ್ಖಂಡ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ತೆಲಂಗಾಣ ಹಾಗೂ ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಈಚೆಗೆ ₹5,000 ದಂಡ ವಿಧಿಸಿದೆ [ಆರೆಲಿಯಾನೊ ಫೆರ್ನಾಂಡಿಸ್ ಮತ್ತು ಗೋವಾ ಸರ್ಕಾರ ನಡುವಣ ಪ್ರಕರಣ].

ದಂಡ ಪಾವತಿಸಿ ಕಾಯಿದೆ ಅನುಪಾಲನೆ ಕುರಿತ ಅಫಿಡವಿಟ್‌ಅನ್ನು ಇನ್ನು ಮೂರು ವಾರಗಳಲ್ಲಿ ಸಲ್ಲಿಸಲು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠ ಫೆ. 11ರಂದು ಅವಕಾಶ ನೀಡಿತು.

ಡಿಸೆಂಬರ್ 3, 2024 ರಂದು ಸರ್ವೋಚ್ಚ ನ್ಯಾಯಾಲಯ ಪೋಶ್‌ ಕಾಯಿದೆಯನ್ನು ಪರಿಣಾಮಕಾರಿ ಜಾರಿಗೆ ತರುವ ಸಂಬಂಧ  ವಿವರವಾದ ನಿರ್ದೇಶನಗಳನ್ನು ನೀಡಿತ್ತು .

ಇಡೀ ದೇಶಕ್ಕೆ ಕಾಯಿದೆ ಅನ್ವಯವಾಗಬೇಕಿದೆ ಎಂದಿದ್ದ ನ್ಯಾಯಾಲಯ ಕಾಯಿದೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕರೂಪವಾಗಿ ಜಾರಿಗೆ ತರುವಂತೆ ನಿರ್ದೇಶಿಸಿತ್ತು.

 ಆದ್ದರಿಂದ ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕು ಮತ್ತು ಮತ್ತು ಮಹಿಳೆಯರು ದೂರುಗಳನ್ನು ಸಲ್ಲಿಸಬಹುದಾದ ʼಶಿ ಬಾಕ್ಸ್‌ʼ  (SheBox) ಪೋರ್ಟಲ್‌ಗಳನ್ನು ರಚಿಸುವುದು ಸೇರಿದಂತೆ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅದು ಸೂಚಿಸಿತ್ತು.

ಫೆಬ್ರವರಿ 11ರಂದು ಪ್ರಕರಣದ ವಿಚಾರಣೆ ನಡೆದಾಗ, ಅಮಿಕಸ್ ಕ್ಯೂರಿ ಪದ್ಮ ಪ್ರಿಯಾ ಅವರು ಕರ್ನಾಟಕ, ನಾಗಾಲ್ಯಾಂಡ್, ಗೋವಾ, ಬಿಹಾರ, ರಾಜಸ್ಥಾನ, ಉತ್ತರಾಖಂಡ, ಒರಿಸ್ಸಾ, ಮಿಜೋರಾಂ, ತ್ರಿಪುರ, ಗುಜರಾತ್, ಉತ್ತರ ಪ್ರದೇಶ ಮತ್ತು ಅಸ್ಸಾಂ, ಹರಿಯಾಣ, ತಮಿಳುನಾಡು, ಮೇಘಾಲಯ, ಪಂಜಾಬ್, ಸಿಕ್ಕಿಂ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಉತ್ತರಾಖಂಡ ರಾಜ್ಯಗಳು, ಚಂಡೀಗಢ ಮತ್ತು ಅಂಡಮಾನ್‌- ನಿಕೋಬಾರ್ ಕೇಂದ್ರಾಡಳಿತ ಪ್ರದೇಶಗಳು ಅನುಪಾಲನಾ ಅಫಿಡವಿಟ್‌ ಸಲ್ಲಿಸಿವೆ ಎಂದು ತಿಳಿಸಿದ್ದರು.

ಆದರೆ, ಮಣಿಪುರ, ಜಾರ್ಖಂಡ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶಗಳು ಈ ಆದೇಶವನ್ನು ಪಾಲಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ದೇಶದೆಲ್ಲೆಡೆ ತನ್ನ ಆದೇಶ ಪಾಲನೆ ಹಾಗೂ ಕಾಯಿದೆ ಜಾರಿಯಾಗಿದೆಯೇ ಎಂಬ ಕುರಿತು ಪರಿಶೀಲಿಸಲು ಮಾರ್ಚ್ 25ರಂದು ಪ್ರಕರಣ ಆಲಿಸುವುದಾಗಿ ತಿಳಿಸಿದೆ.