ಸುದ್ದಿಗಳು

ಪೋಕ್ಸೊ ಪ್ರಕರಣ: ಅಲಾಹಾಬಾದ್ ಹೈಕೋರ್ಟ್ ವಿವಾದಾತ್ಮಕ ಆದೇಶಕ್ಕೆ ಸುಪ್ರೀಂ ತಡೆ

ಆದೇಶ ಹೊರಡಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ ಸೂಕ್ಷ್ಮತೆಯ ಕೊರತೆ ಇದ್ದುದರಿಂದ ತಾನು ನೋವನುಭವಿಸುವಂತಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Bar & Bench

ಅಪ್ರಾಪ್ತ ಸಂತ್ರಸ್ತೆಯ ಸ್ತನ ಹಿಡಿಯುವುದು, ಆಕೆ ಧರಿಸಿದ್ದ ಪೈಜಾಮಾದ ಲಾಡಿ ಕಳಚುವುದು ಹಾಗೂ ಆಕೆಯನ್ನು ಬಲವಂತವಾಗಿ ಕಿರಿದಾದ ಸೇತುವೆಯೊಂದರ ಕೆಳಗೆ ಎಳೆದೊಯ್ಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನದ ಅಪರಾಧವಾಗದು ಎಂಬ ಅಲಾಹಾಬಾದ್‌ ಹೈಕೋರ್ಟ್‌ ವಿವಾದಾತ್ಮಕ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ತಡೆ ನೀಡಿದೆ [ ಕ್ರಿಮಿನಲ್ ಪರಿಷ್ಕರಣೆ ಸಂಖ್ಯೆ 1449/2024 ಮತ್ತು ಪೂರಕ ಪ್ರಕರಣಗದಲ್ಲಿ ಅಲಾಹಾಬಾದ್‌ ಹೈಕೋರ್ಟ್‌17.03.2025 ರಂದು ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಸ್ವಯಂ ಪ್ರೇರಿತ ವಿಚಾರಣೆ].

'ವಿ ದಿ ವುಮೆನ್ ಆಫ್ ಇಂಡಿಯಾ' ಎಂಬ ಸಂಘಟನೆ ತೀರ್ಪನ್ನು ನ್ಯಾಯಾಲಯದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ  ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲು ನಿರ್ಧರಿಸಿತ್ತು.  ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಈ ಸಂಬಂಧ ಇಂದು ತಡೆಯಾಜ್ಞೆ ನೀಡಿತು.

ಆದೇಶ ಹೊರಡಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ ಸೂಕ್ಷ್ಮತೆಯ ಕೊರತೆ ಇದ್ದು, ಇದು ತತ್‌ಕ್ಷಣಕ್ಕೆ ಹೊರಡಿಸಿದ ಆದೇಶವಲ್ಲ. ತೀರ್ಪನ್ನು ಕಾಯ್ದಿರಿಸಿ ನಾಲ್ಕು ತಿಂಗಳ ಬಳಿಕ ಆದೇಶ ನೀಡಲಾಗಿದೆ. ಹೀಗಾಗಿ ವಿವೇಚನೆ ಬಳಸಲಾಗಿದೆ. ಈ ಹಂತದಲ್ಲಿ ಸಾಮಾನ್ಯವಾಗಿ ತಾನು ತಡೆಯಾಜ್ಞೆ ನೀಡುವುದಿಲ್ಲ. ಆದರೆ, ಪ್ಯಾರಾಗ್ರಾಫ್ 21, 24 ಮತ್ತು 26 ರಲ್ಲಿನ ಅವಲೋಕನಗಳು ಅಮಾನವೀಯವಾಗಿರುವುದರಿಂದ ಆ ಅವಲೋಕನಗಳಿಗೆ ತಡೆ ನೀಡುವುದಾಗಿ ಸುಪ್ರೀಂ ಕೋರ್ಟ್‌ ವಿವರಿಸಿದೆ. ಆದೇಶದಿಂದ ತಾನು ನೋವು ಅನುಭವಿಸುವಂತಾಯಿತು ಎಂದು ಅದು ಬೇಸರ ವ್ಯಕ್ತಪಡಿಸಿದೆ.

ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ನ್ಯಾಯಾಲಯದ ಅಭಿಪ್ರಾಯಕ್ಕೆ ಸಮ್ಮತಿಸಿ, ಆದೇಶಕ್ಕೆ ತಡೆ ನೀಡಲು ಸಾಕಷ್ಟು ಕಾರಣಗಳಿವೆ ಎಂದು ಹೇಳಿದರು.

"ಇದು ಗಂಭೀರ ವಿಷಯ. ಹೈಕೋರ್ಟ್‌ ನ್ಯಾಯಮೂರ್ತಿಗಳು ಸಂಪೂರ್ಣ ಸಂವೇದನಾರಹಿತರಾಗಿ ನಡೆದುಕೊಂಡಿದ್ದಾರೆ. ಇದು ಸಮನ್ಸ್ ಜಾರಿ ಮಾಡುವ ಹಂತದಲ್ಲಿತ್ತು! ನ್ಯಾಯಮೂರ್ತಿ ವಿರುದ್ಧ ಇಂತಹ ಕಠಿಣ ಪದಗಳನ್ನು ಬಳಸಿದ್ದಕ್ಕೆ  ವಿಷಾದವಿದೆ" ಎಂದು ನ್ಯಾ. ಗವಾಯಿ ಹೇಳಿದರು.

ನಂತರ ನ್ಯಾಯಾಲಯ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರದಿಂದ ಪ್ರತಿಕ್ರಿಯೆ ಬಯಸಿತು ಮತ್ತು ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಮತ್ತು ಎಸ್‌ಜಿ ತುಷಾರ್ ಮೆಹ್ತಾ ಅವರ ನೆರವನ್ನೂ ಕೇಳಿತು. ಆದೇಶದ ವಿರುದ್ಧ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸ್ವಯಂಪ್ರೇರಿತ ಪ್ರಕರಣಕ್ಕೆ ಸೇರಿಸಲಾಗಿದ್ದು, ಅದನ್ನೂ ಒಟ್ಟಿಗೆ ವಿಚಾರಣೆ ನಡೆಸಲಾಗುವುದು.

ಹಿನ್ನೆಲೆ

ಉತ್ತರ ಪ್ರದೇಶದಲ್ಲಿ ಅಪ್ರಾಪ್ತೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ದಾಖಲಿಸಲಾಗಿದ್ದ ಐಪಿಸಿ ಸೆಕ್ಷನ್‌ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 18ರ (ಅಪರಾಧ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಶಿಕ್ಷೆ) ಬದಲಿಗೆ ಐಪಿಸಿ ಸೆಕ್ಷನ್ 354-ಬಿ (ವಿವಸ್ತ್ರಗೊಳ್ಳುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 9/10 (ತೀವ್ರ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

"... ಆರೋಪಿ ಪವನ್ ಮತ್ತು ಆಕಾಶ್ ವಿರುದ್ಧದ ಆರೋಪವೆಂದರೆ ಅವರು ಸಂತ್ರಸ್ತೆಯ ಸ್ತನಗಳನ್ನು ಹಿಡಿಯಲು ಪ್ರಯತ್ನಿಸಿದರು, ಆಕಾಶ್ ಸಂತ್ರಸ್ತೆಯ ಕೆಳ ಉಡುಪನ್ನು ಕಳಚಲು ಪ್ರಯತ್ನಿಸಿದ್ದ ಮತ್ತು ಈ ಉದ್ದೇಶಕ್ಕಾಗಿಯೇ ಆಕೆಯ ಕೆಳ ಉಡುಪಿನ ಲಾಡಿಯನ್ನು ಸೆಳೆದು ಕಿರುಸೇತುವೆಯ ಕೆಳಗೆ ಎಳೆದೊಯ್ಯಲು ಆರೋಪಿಗಳು ಯತ್ನಿಸಿದ್ದರು ಎಂಬುದಾಗಿದೆ. ಆದರೆ ಸಾಕ್ಷಿಗಳ ಮಧ್ಯಪ್ರವೇಶದಿಂದಾಗಿ ಅವರು ಸಂತ್ರಸ್ತೆಯನ್ನು ಬಿಟ್ಟು ಘಟನಾ ಸ್ಥಳದಿಂದ ಓಡಿಹೋದರು. ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಲು ನಿರ್ಧರಿಸಿದ್ದರು ಎಂದು ಊಹಿಸಲು ಈ ಅಂಶಗಳು ಸಾಕಾಗುವುದಿಲ್ಲ. ಏಕೆಂದರೆ ಈ ಸಂಗತಿಗಳನ್ನು ಹೊರತುಪಡಿಸಿ ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡುವ ಉದ್ದೇಶ ಹೊಂದಿದ್ದರು ಎನ್ನಲು ಮತ್ತಾವುದೇ ಕೃತ್ಯಗಳನ್ನು ಆರೋಪಿಸಲಾಗಿಲ್ಲ” ಎಂದು ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ತಿಳಿಸಿದ್ದರು.

"... ಆರೋಪಿಯ ಕೃತ್ಯದಿಂದಾಗಿ ಸಂತ್ರಸ್ತೆ ಬೆತ್ತಲೆಯಾದಳು ಅಥವಾ ವಿವಸ್ತ್ರಳಾದಳು ಎಂದು ಸಾಕ್ಷಿಗಳು ಹೇಳಿಲ್ಲ. ಸಂತ್ರಸ್ತೆಯ ಮೇಲೆ ಲಿಂಗ ಪ್ರವೇಶಿಕೆಯ ಲೈಂಗಿಕ ದೌರ್ಜನ್ಯ ಎಸಗಲು  ಆರೋಪಿ ಯತ್ನಿಸಿದನೆಂಬ ಯಾವುದೇ ಆರೋಪವಿಲ್ಲ" ಎಂದು ಆದೇಶದಲ್ಲಿ ವಿವರಿಸಲಾಗಿತ್ತು.

ಕುತೂಹಲಕಾರಿ ಅಂಶವೆಂದರೆ ಅಲಾಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ಪಿಐಎಲ್ ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಮಾರ್ಚ್ 24ರಂದು ನಿರಾಕರಿಸಿತ್ತು.