
ಅಪ್ರಾಪ್ತ ಸಂತ್ರಸ್ತೆಯ ಸ್ತನ ಹಿಡಿಯುವುದು, ಆಕೆ ಧರಿಸಿದ್ದ ಪೈಜಾಮಾದ ಲಾಡಿ ಕಳಚುವುದು ಹಾಗೂ ಆಕೆಯನ್ನು ಬಲವಂತವಾಗಿ ಕಿರಿದಾದ ಸೇತುವೆಯೊಂದರ ಕೆಳಗೆ ಎಳೆದೊಯ್ಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನದ ಅಪರಾಧವಾಗದು ಎಂದು ಈಚೆಗೆ ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್ ಈ ಸಂಬಂಧದ ಸಮನ್ಸ್ ಆದೇಶ ಮಾರ್ಪಡಿಸಿದೆ. ಈ ತೀರ್ಪು ಇದೀಗ ನ್ಯಾಯಾಂಗ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಅತ್ಯಾಚಾರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 18ರ (ಅಪರಾಧ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಶಿಕ್ಷೆ) ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ ಸಮನ್ಸ್ ಆದೇಶವನ್ನು ಮಾರ್ಪಾಡು ಮಾಡುವ ವೇಳೆ ನ್ಯಾಯಾಲಯ ಮೇಲಿನ ತೀರ್ಪು ನೀಡಿತ್ತು.
ಆರೋಪಿಗಳ ವಿರುದ್ಧ ದಾಖಲಿಸಲಾಗಿದ್ದ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 18ರ (ಅಪರಾಧ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಶಿಕ್ಷೆ) ಬದಲಿಗೆ ಐಪಿಸಿ ಸೆಕ್ಷನ್ 354-ಬಿ (ವಿವಸ್ತ್ರಗೊಳ್ಳುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 9/10 (ತೀವ್ರ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತು.
"... ಆರೋಪಿ ಪವನ್ ಮತ್ತು ಆಕಾಶ್ ವಿರುದ್ಧದ ಆರೋಪವೆಂದರೆ ಅವರು ಸಂತ್ರಸ್ತೆಯ ಸ್ತನಗಳನ್ನು ಹಿಡಿಯಲು ಪ್ರಯತ್ನಿಸಿದರು, ಆಕಾಶ್ ಸಂತ್ರಸ್ತೆಯ ಕೆಳ ಉಡುಪನ್ನು ಕಳಚಲು ಪ್ರಯತ್ನಿಸಿದ್ದ ಮತ್ತು ಈ ಉದ್ದೇಶಕ್ಕಾಗಿಯೇ ಆಕೆಯ ಕೆಳ ಉಡುಪಿನ ಲಾಡಿಯನ್ನು ಸೆಳೆದು ಕಿರುಸೇತುವೆಯ ಕೆಳಗೆ ಎಳೆದೊಯ್ಯಲು ಆರೋಪಿಗಳು ಯತ್ನಿಸಿದ್ದರು ಎಂಬುದಾಗಿದೆ. ಆದರೆ ಸಾಕ್ಷಿಗಳ ಮಧ್ಯಪ್ರವೇಶದಿಂದಾಗಿ ಅವರು ಸಂತ್ರಸ್ತೆಯನ್ನು ಬಿಟ್ಟು ಘಟನಾ ಸ್ಥಳದಿಂದ ಓಡಿಹೋದರು. ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಲು ನಿರ್ಧರಿಸಿದ್ದರು ಎಂದು ಊಹಿಸಲು ಈ ಅಂಶಗಳು ಸಾಕಾಗುವುದಿಲ್ಲ. ಏಕೆಂದರೆ ಈ ಸಂಗತಿಗಳನ್ನು ಹೊರತುಪಡಿಸಿ ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡುವ ಉದ್ದೇಶ ಹೊಂದಿದ್ದರು ಎನ್ನಲು ಮತ್ತಾವುದೇ ಕೃತ್ಯಗಳನ್ನು ಆರೋಪಿಸಲಾಗಿಲ್ಲ” ಎಂದು ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ತಿಳಿಸಿದರು.
ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗುವ ದೃಢನಿಶ್ಚಯ ಹೊಂದಿದ್ದರು ಎಂದು ಸೂಚಿಸಲು ಯಾವುದೇ ದಾಖಲೆಗಳಿಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ. ದೂರಿನಲ್ಲಿ ಅಥವಾ ಸಾಕ್ಷಿಗಳ ಹೇಳಿಕೆಗಳಲ್ಲಿ ಆರೋಪಿ ಆಕಾಶ್ ಅಪ್ರಾಪ್ತ ವಯಸ್ಕ ಸಂತ್ರಸ್ತೆಯ ಕೆಳಉಡುಪಿನ ದಾರ ಎಳೆದ ನಂತರ ಸ್ವತಃ ಚಂಚಲಿತನಾದ ಎಂಬ ಯಾವುದೇ ಆರೋಪವಿಲ್ಲ ಎಂದು ನ್ಯಾಯಾಲಯ ಹೇಳಿತು.
"... ಆರೋಪಿಯ ಕೃತ್ಯದಿಂದಾಗಿ ಸಂತ್ರಸ್ತೆ ಬೆತ್ತಲೆಯಾದಳು ಅಥವಾ ವಿವಸ್ತ್ರಳಾದಳು ಎಂದು ಸಾಕ್ಷಿಗಳು ಹೇಳಿಲ್ಲ. ಸಂತ್ರಸ್ತೆಯ ಮೇಲೆ ಲಿಂಗ ಪ್ರವೇಶಿಕೆಯ ಲೈಂಗಿಕ ದೌರ್ಜನ್ಯ ಎಸಗಲು ಆರೋಪಿ ಯತ್ನಿಸಿದನೆಂಬ ಯಾವುದೇ ಆರೋಪವಿಲ್ಲ" ಎಂದು ಆದೇಶದಲ್ಲಿ ಹೇಳಲಾಗಿದೆ.
ಪ್ರಕರಣದಲ್ಲಿನ ಆರೋಪಗಳು ಅತ್ಯಾಚಾರ ಯತ್ನದ ಅಪರಾಧವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
"ಅತ್ಯಾಚಾರಕ್ಕೆ ಯತ್ನಿಸಿದ ಆರೋಪವನ್ನು ಹೊರಿಸಲು, ಪ್ರಾಸಿಕ್ಯೂಷನ್ ಅದು ಅತ್ಯಾಚಾರ ತೊಡಗುವ ಸಿದ್ಧತೆಯ ಹಂತವನ್ನು ಮೀರಿದೆ ಎಂಬುದನ್ನು ಸಾಬೀತುಪಡಿಸಬೇಕು. ಸಿದ್ಧತೆ ಮತ್ತು ಅಪರಾಧ ಮಾಡಲು ನಡೆಸುವ ನಿಜವಾದ ಪ್ರಯತ್ನದ ನಡುವಿನ ವ್ಯತ್ಯಾಸವು ಬದ್ಧತೆಯ ತೀವ್ರತೆಗೆ ಸಂಬಂಧಪಟ್ಟಿದ್ದಾಗಿರುತ್ತದೆ" ಎಂದು ನ್ಯಾಯಾಲಯ ಹೇಳಿತು.
ಪರಿಣಾಮ, ಸಮನ್ಸ್ ಆದೇಶ ಮಾರ್ಪಡಿಸಿದ ಅದು ಪರಿಷ್ಕೃತ ಸೆಕ್ಷನ್‌ಗಳ ಅಡಿಯಲ್ಲಿ ಹೊಸ ಸಮನ್ಸ್ ಆದೇಶ ನೀಡುವಂತೆ ಕೆಳ ನ್ಯಾಯಾಲಯಕ್ಕೆ ನಿರ್ದೇಶಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]