Bhagat Singh Koshiyari, Uttarakhand, Supreme Court 
ಸುದ್ದಿಗಳು

ಸರ್ಕಾರಿ ಬಂಗಲೆಗೆ ಬಾಡಿಗೆ ಪಾವತಿ ಪ್ರಕರಣ: ರಾಜ್ಯಪಾಲ ಕೋಶ್ಯಾರಿ ವಿರುದ್ಧದ ನಿಂದನಾ ನೋಟಿಸ್‌ಗೆ ಸುಪ್ರೀಂ ತಡೆ

ಹೈಕೋರ್ಟ್ ಆದೇಶದನ್ವಯ ಮುಖ್ಯಮಂತ್ರಿ ಅವಧಿ ನಂತರವೂ ತಾವು ಉಳಿದುಕೊಂಡಿದ್ದ ಬಂಗಲೆಯನ್ನು ತೆರವುಗೊಳಿಸದ ಕಾರಣಕ್ಕೆ ಕೋಶ್ಯಾರಿ ಅವರು ಮಾರುಕಟ್ಟೆ ದರದಲ್ಲಿ 47.5 ಲಕ್ಷ ರೂಪಾಯಿ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಲೆಕ್ಕ ಹಾಕಲಾಗಿತ್ತು.

Bar & Bench

ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರಿಗೆ ಉತ್ತರಾಖಂಡ ಹೈಕೋರ್ಟ್‌ ಜಾರಿಗೊಳಿಸಿದ್ದ ನ್ಯಾಯಾಂಗ ನಿಂದನೆ ನೋಟಿಸ್‌ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆಯಾಜ್ಞೆ ನೀಡಿದೆ. ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ ಅವಧಿ ನಂತರವೂ ತಾವು ವಾಸವಿದ್ದ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸದೆ ಅಕ್ರಮವಾಗಿ ಉಳಿದುಕೊಂಡಿದ್ದ ಕಾರಣಕ್ಕೆ ಮಾರುಕಟ್ಟೆ ದರದಲ್ಲಿ ಬಾಡಿಗೆ ವಿಧಿಸಲಾಗಿತ್ತು. ಇದನ್ನು ಪಾವತಿಸದೇ ಇದ್ದುದಕ್ಕೆ ನೋಟಿಸ್ ಜಾರಿಯಾಗಿತ್ತು.

ನ್ಯಾಯಮೂರ್ತಿಗಳಾದ ರೋಹಿಂಟನ್‌ ನಾರಿಮನ್‌, ಕೆ ಎಂ ಜೋಸೆಫ್‌ ಮತ್ತು ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠವು ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಮಾರುಕಟ್ಟೆ ಬಾಡಿಗೆ ದರವನ್ನು ಹೈಕೋರ್ಟ್ ಯಾವ ಆಧಾರದ ಮೇಲೆ ಖಚಿತಪಡಿಸಿದೆ ಎಂಬುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಬಾಕಿ ಉಳಿದಿರುವ ಮನವಿಯೊಂದಿಗೆ ಅರ್ಜಿಯನ್ನು ಜೊತೆಗೂಡಿಸಿದೆ.

ಹೈಕೋರ್ಟ್‌ ಮೇನಲ್ಲಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಉತ್ತರಾಖಂಡ ಸರ್ಕಾರ ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಮನವಿಗಳನ್ನು ಆಧರಿಸಿ ನ್ಯಾಯಾಲಯವು ನೋಟಿಸ್‌ ಜಾರಿಗೊಳಿಸಿದ್ದು, ಹೈಕೋರ್ಟ್‌ ಮುಂದಿರುವ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ತಡೆ ನೀಡಿದೆ.

ತಾವು ಮಹಾರಾಷ್ಟ್ರದ ಹಾಲಿ ರಾಜ್ಯಪಾಲರಾಗಿದ್ದು, ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಅರ್ಜಿಯ ಕುರಿತು ನೋಟಿಸ್‌ ಜಾರಿಗೊಳಿಸುವುದಕ್ಕೂ ಮುನ್ನ ಸಂವಿಧಾನದ 361ನೇ ವಿಧಿಯನ್ನು ನಿರ್ಲಕ್ಷಿಸಲಾಗಿದೆ ಎಂದು ವಕೀಲ ಎ ಕೆ ಪ್ರಸಾದ್‌ ಅವರ ಮೂಲಕ ಕೋಶ್ಯಾರಿ ಅವರು ಅರ್ಜಿ ಸಲ್ಲಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಿಗೆ ರಾಜ್ಯ ಸರ್ಕಾರ ವಾಸ್ತವ್ಯಕ್ಕೆ ಉಚಿತವಾಗಿ ಒದಗಿಸಿದ ಬಂಗಲೆ ಮತ್ತು 19 ವರ್ಷಗಳ ಅವಧಿಯಲ್ಲಿ ಅವುಗಳಿಗೆ ಅಕ್ರಮವಾಗಿ ಮಾಡಿದ್ದ ಖರ್ಚುವೆಚ್ಚವನ್ನು ಸಿಂಧುಗೊಳಿಸುವ ಸಂಬಂಧ ಉತ್ತರಾಖಂಡ ಸರ್ಕಾರವು 2020ರ ಜೂನ್‌ನಲ್ಲಿ ಜಾರಿಗೊಳಿಸಿದ್ದ ಕಾನೂನನ್ನು ಉತ್ತರಾಖಂಡ ಹೈಕೋರ್ಟ್‌ ರದ್ದುಪಡಿಸಿತ್ತು.

ತಮ್ಮ ಅಧಿಕಾರಾವಧಿ ಮುಗಿದ ಮೇಲೂ ಮಾಜಿ ಮುಖ್ಯಮಂತ್ರಿಗಳು ಉಚಿತವಾಗಿ ಸರ್ಕಾರಿ ಬಂಗಲೆಗಳನ್ನು ಬಳಸದೇ ಅವುಗಳನ್ನು ತೆರವು ಮಾಡುವಂತೆ 2019ರಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಅನೂರ್ಜಿತಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾಯಿದೆ ಜಾರಿಗೆ ತಂದಿತ್ತು. ಕಾನೂನುಬಾಹಿರವಾಗಿ 19 ವರ್ಷಗಳ ಕಾಲ ಸರ್ಕಾರಿ ಬಂಗಲೆ ಬಳಸಿದ್ದಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆ ಬಾಡಿಗೆ ದರವನ್ನು ಪಾವತಿಸುವಂತೆ ಮಾಜಿ ಮುಖ್ಯಮಂತ್ರಿಗಳಿಗೆ ನ್ಯಾಯಾಲಯವು ಸೂಚಿಸಿತ್ತು. ಹೈಕೋರ್ಟ್‌ ತೀರ್ಪು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು 2019ರ ಆಗಸ್ಟ್‌ 7ರಂದು ನ್ಯಾಯಾಲಯ ವಜಾಗೊಳಿಸಿತ್ತು.