ನ್ಯಾಯಾಂಗ ನಿಂದನಾ ಪ್ರಕರಣ: ನ್ಯಾಯಮೂರ್ತಿಗಳ ಯೋಚನೆ ಪ್ರಭಾವಿಸುವ ರೀತಿಯಲ್ಲಿ ಮಾಧ್ಯಮಗಳಿಂದ ಚರ್ಚೆ - ವೇಣುಗೋಪಾಲ್ ಕಳವಳ

ನ್ಯಾಯಾಂಗ ನಿಂದನಾ ಪ್ರಕರಣದ ವಿಚಾರಣೆಯನ್ನು ನವೆಂಬರ್ 4ರಂದು ನ್ಯಾಯಾಲಯ ನಡೆಸಲಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ವಕೀಲರು ಚರ್ಚಿಸಿ, ಪ್ರಶ್ನೆಗಳನ್ನು ಅಂತಿಮಗೊಳಿಸಿದ ಬಳಿಕ ಅವುಗಳನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗುವುದು.
Attorney General KK Venugopal
Attorney General KK Venugopal

ಆಂಗ್ಲ ನಿಯತಕಾಲಿಕೆ ತೆಹಲ್ಕಾಗೆ 2009ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಕುರಿತು ಮಾತನಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಮಂಗಳವಾರ ನಡೆದಿದ್ದು, ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿರುವ ಪ್ರಕರಣದ ಮೇಲಿನ ಮಾಧ್ಯಮಗಳ ಚರ್ಚೆಯು ನ್ಯಾಯಾಂಗ ಸಂಸ್ಥೆಗೆ ಹೇಗೆ ಧಕ್ಕೆ ಉಂಟು ಮಾಡುತ್ತಿವೆ ಎನ್ನುವ ಬಗ್ಗೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಕಳವಳ ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠವು ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿದ ವಿಸ್ತೃತ ಪ್ರಶ್ನೆಗಳನ್ನು ನ್ಯಾಯಾಲಯವು ಪರಿಗಣಿಸುತ್ತಿರುವುದರಿಂದ, ಇದೇ ವೇಳೆ ನ್ಯಾಯಾಲಯದಲ್ಲಿರುವ ಪ್ರಕರಣಗಳ ಮೇಲೆ ಪ್ರತಿಕ್ರಿಯಿಸುವ ಪ್ರಶ್ನೆಯ ಕುರಿತಾಗಿಯೂ ಪರಿಗಣಿಸಬೇಕು ಎಂದು ವೇಣುಗೋಪಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ಇಂದು ನ್ಯಾಯಮೂರ್ತಿಗಳ ವಿಚಾರಗಳನ್ನು ಪ್ರಭಾವಿಸುವ ರೀತಿಯಲ್ಲಿ ಚರ್ಚೆ ನಡೆಸುತ್ತಿವೆ. ಇದರಿಂದ ಸಂಸ್ಥೆಗೆ ಭಾರಿ ಧಕ್ಕೆಯಾಗುತ್ತಿದೆ. ಆದ್ದರಿಂದ ನ್ಯಾಯಾಂಗ ವಿಚಾರಣೆಯಲ್ಲಿರುವ ಪ್ರಕರಣಗಳ ಕುರಿತಾದ ಪ್ರಶ್ನೆಯನ್ನೂ ಪರಿಗಣಿಸಬೇಕಿದೆ."
ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್

ನ್ಯಾಯಾಂಗ ವಿಚಾರಣೆಯಲ್ಲಿರುವ ವಿಚಾರಗಳ ಮೇಲಿನ ಪ್ರತಿಕ್ರಿಯೆಯು ಇಂದು ಕೇಂದ್ರ ಸ್ಥಾನದಲ್ಲಿದೆ ಎಂದಿರುವ ವೇಣುಗೋಪಾಲ್ ಅವರು “ಜಾಮೀನು ಅರ್ಜಿ ವಿಚಾರಣೆ ನಡೆಯುವಾಗ ಟಿವಿಗಳು ಆರೋಪಿ ಮತ್ತು ಇತರರ ನಡುವಿನ ಸಂಭಾಷಣೆ ಪ್ರಕಟಿಸುವುದನ್ನು ನಾನು ಟಿವಿಯಲ್ಲಿ ನೋಡಿದ್ದೇನೆ. ಇದು ಆರೋಪಿಗೆ ಸಮಸ್ಯೆ ಉಂಟು ಮಾಡಬಹುದು. ಇದು ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನಡೆಯುವ ಬೆಳವಣಿಗೆಯಾಗಿದ್ದು, ನ್ಯಾಯಾಂಗ ನಿಂದನೆಯಾಗಿದೆ” ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಹಿರಿಯ ವಕೀಲ ರಾಜೀವ್ ಧವನ್ ಅವರು ನ್ಯಾಯಾಂಗ ವಿಚಾರಣೆಯಲ್ಲಿರುವ ವಿಚಾರಗಳಿಗೆ ಪ್ರತಿಕ್ರಿಯಿಸುವ ಪ್ರಶ್ನೆಯನ್ನು ಒಂದು ಭಾಗವಾಗಿ ಸಹಾರಾ ಪ್ರಕರಣದಲ್ಲಿ ಪರಿಗಣಿಸಲಾಗಿದೆ ಎಂದರು.

“ಮತ್ತೊಂದು ಅಂಶವು ಯೂರೋಪ್‌ ನ್ಯಾಯಾಲಯದ ತೀರ್ಪಿನವರೆಗೆ ವಿಸ್ತರಿಸಿದ್ದು, “ಶೈಲಾಕ್ ಪ್ರಕರಣವನ್ನು ಮಾಧ್ಯಮಗಳು ವರದಿ ಮಾಡಬಾರದು ಎಂದು ಹೇಳಬಹುದೇ?” ಎಂಬ ನ್ಯಾಯಾಲಯದ ಪ್ರಶ್ನೆಯ ಕುರಿತು ಚರ್ಚಿಸಲಾಗಿದೆ ಎಂದರು.

ಪ್ರಕರಣದ ವಿಚಾರಣೆಯನ್ನು ನವೆಂಬರ್ 4ರಂದು ನ್ಯಾಯಾಲಯ ನಡೆಸಲಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ವಕೀಲರು ಚರ್ಚಿಸಿ, ಪ್ರಶ್ನೆಗಳನ್ನು ಅಂತಿಮಗೊಳಿಸಿದ ಬಳಿಕ ಅವುಗಳನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗುವುದು. ಇದೇ ಸಂದರ್ಭದಲ್ಲಿ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರನ್ನು ಸಂಪರ್ಕಿಸಿ, ನವೆಂಬರ್ 4ರಂದು ವಿಚಾರಣೆಯಲ್ಲಿ ಭಾಗವಹಿಸುವಂತೆ ಸೂಚಿಸುವಂತೆ ರೆಜಿಸ್ಟ್ರಿಗೆ ನ್ಯಾಯಪೀಠ ಆದೇಶಿಸಿದೆ.

ಸದರಿ ಪ್ರಕರಣದ ದಾಖಲೆಗಳನ್ನು ವೇಣುಗೋಪಾಲ್ ಅವರಿಗೆ ಕಳುಹಿಸಿಕೊಂಡುವಂತೆ ಹಿಂದೆಯೇ ನ್ಯಾಯಪೀಠವು ಸೂಚಿಸಿತ್ತು.

ಸದರಿ ಪ್ರಕರಣದ ವಿಚಾರಣೆಯನ್ನು ಹಿಂದೆ ನ್ಯಾ. ಅರುಣ್ ಮಿಶ್ರಾ ಅವರಿದ್ದ ಪೀಠದ ಮುಂದೆ ಮಂಡಿಸಲಾಗಿತ್ತು. ಪ್ರಕರಣದಿಂದ ಏಳುವ ಪ್ರಮುಖ ಪ್ರಶ್ನೆ ಮತ್ತು ಅವುಗಳ ವಿಚಾರಣೆಗೆ ಸುದೀರ್ಘ ಕಾಲಾವಕಾಶ ಬೇಕಿರುವುದರಿಂದ ಅದನ್ನು ಮತ್ತೊಂದು ಸೂಕ್ತ ಪೀಠದ ಮುಂದೆ ವಿಚಾರಣೆಗೆ ಇರಿಸುವಂತೆ ನಿವೃತ್ತಿಗೆ ಕೆಲವೇ ದಿನ ಬಾಕಿ ಇರುವಾಗ ನ್ಯಾ. ಅರುಣ್ ಮಿಶ್ರಾ ಅವರಿದ್ದ ಪೀಠವು ಆಗಸ್ಟ್ 25ರಂದು ಆದೇಶ ಹೊರಡಿಸಿತ್ತು.

Also Read
ಭ್ರಷ್ಟಾಚಾರದ ಬಗ್ಗೆ ಚರ್ಚಿಸದಿದ್ದರೆ, ನ್ಯಾಯಾಂಗದಲ್ಲಿ ಸುಧಾರಣೆ ತರುವುದು ಹೇಗೆ? ಪ್ರಶಾಂತ್ ಭೂಷಣ್

ತೀರ್ಪು ಹೊರಡಿಸುವ ಸಂದರ್ಭದಲ್ಲಿ ನ್ಯಾಯಪೀಠವು ಪ್ರಕರಣದಲ್ಲಿ ಭಾಗಿಯಾಗಿರುವ ವಕೀಲರಿಗೆ ಕೆಳಗಿನ ಪ್ರಶ್ನೆಗಳನ್ನು ಒಳಗೊಳ್ಳುವಂತೆ ಸೂಚಿಸಿತ್ತು.

  1. ಒಂದೊಮ್ಮೆ ನಿರ್ದಿಷ್ಟ ನ್ಯಾಯಮೂರ್ತಿ(ಗಳ) ಬಗ್ಗೆ ಭ್ರಷ್ಟಾಚಾರದ ಕುರಿತು ಸಾರ್ವಜನಿಕ ಹೇಳಿಕೆ ನೀಡಬೇಕಾದರೆ ಯಾವ ಸಂದರ್ಭ ಮತ್ತು ಆಧಾರದಲ್ಲಿ ನೀಡಬಹುದು ಮತ್ತು ಇದಕ್ಕೆ ಸಂಬಂಧಿಸಿದಂತೆ ಯಾವೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು?

  2. ಹಾಲಿ ನ್ಯಾಯಮೂರ್ತಿಯ ನಡೆಯ ವಿರುದ್ಧ ಆರೋಪವಿದ್ದಾಗ ಇಂಥ ಪ್ರಕರಣದಲ್ಲಿ ದೂರು ದಾಖಲಿಸಲು ಯಾವ ವಿಧಾನ ಅಳವಡಿಸಿಕೊಳ್ಳಬೇಕು?

  3. ನಿವೃತ್ತ ನ್ಯಾಯಮೂರ್ತಿ(ಗಳ) ಬಗ್ಗೆ ಸಾರ್ವಜನಿಕವಾಗಿ ಭ್ರಷ್ಟಾಚಾರ ಆರೋಪ ಮಾಡಬಹುದೇ; ಇದರಿಂದ ನ್ಯಾಯಾಂಗದ ಮೇಲೆ ಸಾಮಾನ್ಯ ಜನರು ಇಟ್ಟಿರುವ ನಂಬಿಕೆಗೆ ಧಕ್ಕೆಯಾಗುವುದಿಲ್ಲವೇ; ಇದೂ ನ್ಯಾಯಾಂಗ ನಿಂದನೆ ಕಾಯಿದೆ ಅಡಿ ಶಿಕ್ಷೆಗೆ ಅರ್ಹವೇ?

ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಕುರಿತ ದೂರನ್ನು ಹರೀಶ್ ಸಾಳ್ವೆ ನೀಡಿದ ಬಳಿಕ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು. 2010ರ ನವೆಂಬರ್ 10ರಂದು ತ್ರಿಸದಸ್ಯ ಪೀಠವು ನ್ಯಾಯಾಂಗ ನಿಂದನಾ ಅರ್ಜಿಯ ಮಾನ್ಯತೆ ಎತ್ತಿ ಹಿಡಿದಿತ್ತು.

Related Stories

No stories found.
Kannada Bar & Bench
kannada.barandbench.com