ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಪಿ ಪಿ ಮೊಹಮ್ಮದ್ ಫೈಜಲ್ ಅವರನ್ನು ದೋಷಿ ಎಂದು ಅಪರಾಧ ನಿರ್ಣಯ ಮಾಡಿದ್ದ ತೀರ್ಪನ್ನು ಅಮಾನತುಗೊಳಿಸಲು ನಿರಾಕರಿಸಿದ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಹೈಕೋರ್ಟ್ ತೀರ್ಪಿಗೆ ತಡೆ ನೀಡುವ ಮೂಲಕ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ ಹೈಕೋರ್ಟ್ ಆದೇಶದ ನಂತರ ಸಂಸತ್ತಿನಿಂದ ಅನರ್ಹಗೊಂಡಿದ್ದ ಫೈಝಲ್ ಅವರ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಿತು.
ಇದೇ ವೇಳೆ ಸುಪ್ರೀಂ ಕೋರ್ಟ್, ಲಕ್ಷದ್ವೀಪ ಆಡಳಿತ ಮತ್ತು ಪ್ರಕರಣದ ದೂರುದಾರರ ಪ್ರತಿಕ್ರಿಯೆಯನ್ನೂ ಕೇಳಿದೆ.
ಹದಿನಾಲ್ಕು ವರ್ಷಗಳ ಹಿಂದೆ ಅಂದರೆ 2009ರ ಲೋಕಸಭೆ ಚುನಾವಣೆ ವೇಳೆ ನಡೆದ ರಾಜಕೀಯ ಕಲಹಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ ಎಂ ಸಯೀದ್ ಅವರ ಅಳಿಯ ಪಡನಾಥ್ ಸಾಲಿಹ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ಫೈಜಲ್ ಹಾಗೂ ಇತರ ಮೂವರನ್ನು ದೋಷಿಗಳು ಎಂದು ಕವರಟ್ಟಿಯ ಸೆಷನ್ಸ್ ನ್ಯಾಯಾಲಯ ಜನವರಿ 11ರಂದು ತೀರ್ಪು ನೀಡಿತ್ತು.
ಪ್ರಕರಣದಲ್ಲಿ ಪೈಜಲ್ ಸಹಿತ ಎಲ್ಲಾ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಕೂಡ ವಿಧಿಸಿತ್ತು.