Shahnawaz Hussain, Supreme Court 
ಸುದ್ದಿಗಳು

ಬಿಜೆಪಿ ನಾಯಕ ಶಾನವಾಜ್‌ ಹುಸೇನ್ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸೂಚಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ಮುಂದಿರುವ ಎಲ್ಲ ಬಾಕಿ ವಿಚಾರಣಾ ಪ್ರಕ್ರಿಯೆಗಳಿಗೂ ತಡೆ ನೀಡಿದ ಪೀಠ.

Bar & Bench

ಅತ್ಯಾಚಾರದ ಅರೋಪದ ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಶಾನವಾಜ್‌ ಹುಸೇನ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ದೆಹಲಿ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ [ಸಯದ್‌ ಶಾನವಾಜ್‌ ಹುಸೇನ್‌ ವರ್ಸಸ್‌ ರಾಜ್ಯ ಸರ್ಕಾರ].

ತಮ್ಮ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನ ನಡೆದಿದ್ದು ಪ್ರಕರಣವನ್ನು ತುರ್ತಾಗಿ ಪರಿಗಣಿಸುವಂತೆ ಕೋರಿ ಶಾನವಾಜ್‌ ಹುಸೇನ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಯು ಯು ಲಲಿತ್‌, ಎಸ್‌ ರವೀಂದ್ರ ಭಟ್‌ ಮತ್ತು ಸುಧಾಂಶು ದುಲಿಯಾ ಅವರಿದ್ದ ತ್ರಿಸದಸ್ಯ ಪೀಠವು ಇದೇ ವೇಳೆ ವಿಚಾರಣಾ ನ್ಯಾಯಾಲಯದ ಮುಂದೆ ಇರುವ ಎಲ್ಲ ವಿಚಾರಣಾ ಪ್ರಕ್ರಿಯೆಯು ಸಹ ಪರಿಶೀಲನಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟು ಅದಕ್ಕೂ ತಡೆ ನೀಡಿತು.

"ಮುಂದಿನ ವಿಚಾರಣಾ ಪ್ರಕ್ರಿಯೆಗಳನ್ನು ತಡೆ ಹಿಡಿಯಲಾಗಿದೆ, ಅದೇ ರೀತಿ ಆಕ್ಷೇಪಿತ ಆದೇಶದಿಂದ ಉದ್ಭವಿಸುವ ಎಲ್ಲ ಪರಿಣಾಮ ಮತ್ತು ಕಾರ್ಯಾಚರಣೆಗಳನ್ನು ಸಹ" ಎಂದು ಪೀಠವು ಆದೇಶಿಸಿತು.

ಹಿನ್ನೆಲೆ

ಬಿಜೆಪಿ ವಿಧಾನಪರಿಷತ್ ಸದಸ್ಯ ಸೈಯದ್ ಶಾನವಾಜ್ ಹುಸೇನ್ ವಿರುದ್ಧ ನೀಡಲಾದ ಅತ್ಯಾಚಾರ ದೂರೊಂದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಆದೇಶಿಸಿತ್ತು.

ಅಮಲೇರಿಸುವ ವಸ್ತುವನ್ನು ನೀಡಿ ಅತ್ಯಾಚಾರ ನಡೆಸಿರುವ ಸಂಜ್ಞೇಯ ಅಪರಾಧ ನಡೆದಿದ್ದರೂ ಪೊಲೀಸ್ ಆಯುಕ್ತರಿಗೆ ನೀಡಿದ ದೂರು ಆಧರಿಸಿ ಎಫ್‌ಐಆರ್‌ ಏಕೆ ದಾಖಲಿಸಿಲ್ಲ ಎಂಬುದಕ್ಕೆ ಪೊಲೀಸರು ಬಹಳಷ್ಟು ವಿವರಣೆಗಳನ್ನು ನೀಡಬೇಕಿದೆ ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಆಶಾ ಮೆನನ್‌ ಅವರು ತಮ್ಮ ಅದೇಶದಲ್ಲಿ ವಿವರಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ನಿರ್ದೇಶನಗಳನ್ನು ನೀಡುವವರೆಗೂ ಪೊಲೀಸರು ಯಾವುದೇ ತನಿಖೆ ನಡೆಸಿಲ್ಲ. ಅಲ್ಲದೆ ಹೈಕೋರ್ಟ್‌ಗೆ ಸಲ್ಲಿಸಲಾದ ಸ್ಥಿತಿಗತಿ ವರದಿಯಲ್ಲಿ ಎಫ್‌ಐಆರ್‌ ಏಕೆ ದಾಖಲಿಸಿಲ್ಲ ಎಂಬ ಬಗ್ಗೆ ಉಲ್ಲೇಖವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.