Supreme Court and CLAT 2025 
ಸುದ್ದಿಗಳು

ಸಿಎಲ್ಎಟಿ ಯುಜಿ ಪ್ರವೇಶ ಪರೀಕ್ಷೆ: ಪರಿಷ್ಕೃತ ಫಲಿತಾಂಶ ಪ್ರಕಟಿಸುವಂತೆ ನೀಡಲಾಗಿದ್ದ ಆದೇಶಕ್ಕೆ ಸುಪ್ರೀಂ ತಡೆ

ಹೈಕೋರ್ಟ್ ಆದೇಶದಿಂದ ತಾನು ಮತ್ತು 'ಎ' ಪ್ರಶ್ನೆಪತ್ರಿಕೆ ಸೆಟ್ ಪಡೆದ ಇತರ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗುತ್ತೇವೆ ಎಂದು ಅಭ್ಯರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

Bar & Bench

ನಾಲ್ಕು ಪ್ರಶ್ನೆಗಳಲ್ಲಿ ದೋಷ ಕಂಡುಬಂದಿದ್ದರಿಂದ, ಪದವಿ ಕೋರ್ಸ್‌ಗಳ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್‌ಎಟಿ) ಪರಿಷ್ಕೃತ ಫಲಿತಾಂಶ ಪ್ರಕಟಿಸುವಂತೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟಕ್ಕೆ (ಎನ್‌ಎಲ್‌ಯುಗಳ ಒಕ್ಕೂಟ) ದೆಹಲಿ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಬುಧವಾರ ತಡೆಹಿಡಿದಿದೆ.

ಹೈಕೋರ್ಟ್ ಆದೇಶದಿಂದ ತಾನು ಮತ್ತು 'ಎ' ಪ್ರಶ್ನೆಪತ್ರಿಕೆ ಸೆಟ್ ಪಡೆದ ಇತರ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗುತ್ತೇವೆ ಎಂದು ಅಭ್ಯರ್ಥಿ ಸಿದ್ಧಿ ಸಂದೀಪ್ ಲಾಂಡಾ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ತಡೆಯಾಜ್ಞೆ ನೀಡಿತು. ಮೊದಲ ಫಲಿತಾಂಶ ಪ್ರಕಟವಾದಾಗ ಲಾಂಡಾ 22ನೇ ರ‍್ಯಾಂಕ್ ಪಡೆದಿದ್ದರು.

ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯ ಎನ್‌ಎಲ್‌ಯುಗಳ  ಒಕ್ಕೂಟಕ್ಕೆ ನೋಟಿಸ್ ಜಾರಿ ಮಾಡಿ, ಪ್ರಕರಣವನ್ನು ಮೇ 5ಕ್ಕೆ ಮುಂದೂಡಿತು.

ನ್ಯಾಯಾಲಯಕ್ಕೆ ಅಭ್ಯರ್ಥಿ ಸಲ್ಲಿಸಿರುವ ಅರ್ಜಿ ಬಗ್ಗೆ ತನ್ನ ಜಾಲತಾಣದಲ್ಲಿ ಪ್ರಕಟಿಸುವಂತೆ ನ್ಯಾಯಾಲಯ ಒಕ್ಕೂಟಕ್ಕೆ ನಿರ್ದೇಶನ ನೀಡಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಕೆ ಕೆ ವೇಣುಗೋಪಾಲ್, ಗೋಪಾಲ್ ಶಂಕರನಾರಾಯಣನ್ ಮತ್ತು ದೀಪಕ್ ನರ್ಗೋಲ್ಕರ್ ಹಾಗೂ ವಕೀಲ ಶೌಮಿಕ್ ಘೋಷಾಲ್ ವಾದ ಮಂಡಿಸಿದರು.

ಪ್ರಸಕ್ತ ಸಾಲಿನ ಪದವಿ ಕೋರ್ಸ್‌ಗಳ ಸಿಎಲ್‌ಎಟಿಯಲ್ಲಿ ನಾಲ್ಕು ಪ್ರಶ್ನೆಗಳು ಮತ್ತು ಉತ್ತರಗಳಲ್ಲಿ ದೋಷಗಳಿವೆ ಎಂದು ದೆಹಲಿ ಹೈಕೋರ್ಟ್ ಏಪ್ರಿಲ್ 23ರಂದು ತೀರ್ಪು ನೀಡಿತ್ತು. ಹೀಗಾಗಿ ಪರಿಷ್ಕೃತ ಫಲಿತಾಂಶ ಪ್ರಕಟಿಸುವಂತೆ ಅದು ಆದೇಶಿಸಿತ್ತು.