ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಕೆ ವೈ ನಂಜೇಗೌಡ ಅವರು ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದ್ದು ಮರು ಮತಎಣಿಕೆ ನಡೆಸುವಂತೆ ಸೂಚಿಸಿದೆ.
ಆದರೆ ಮರು ಮತ ಎಣಿಕೆಯ ಫಲಿತಾಂಶವನ್ನು ಯಾವುದೇ ಕಾರಣಕ್ಕೂ ಪ್ರಕಟಿಸದೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿದೆ.
ಮತ ಎಣಿಕೆ ಫಲಿತಾಂಶ ಬರುವವರೆಗೂ ನಂಜೇಗೌಡ ಅವರ ಶಾಸಕ ಸ್ಥಾನ ಅಬಾಧಿತ ಎಂದಿರುವ ಅದು ಪ್ರಕರಣವನ್ನು ನಾಲ್ಕು ವಾರದ ಬಳಿಕ ಆಲಿಸುವುದಾಗಿ ಹೇಳಿದೆ.
ನಂಜೇಗೌಡ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸುವಂತೆ ಕೋರಿ 248 ಮತಗಳಿಂದ ಪರಾಜಿತರಾಗಿದ್ದ ಬಿಜೆಪಿಯ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಸೆಪ್ಟೆಂಬರ್‌ನಲ್ಲಿ ಪುರಸ್ಕರಿಸಿತ್ತು.
ಮುಂದಿನ ನಾಲ್ಕು ವಾರಗಳಲ್ಲಿ ಹೊಸದಾಗಿ ಮತ ಎಣಿಕೆ ನಡೆಸಿ, ಫಲಿತಾಂಶ ಪ್ರಕಟಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಅದು ಸೂಚಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ನಂಜೇಗೌಡ ಅವರು ಪ್ರಶ್ನಿಸಲು ಅನುವಾಗುವಂತೆ ಒಂದು ತಿಂಗಳ ಮಟ್ಟಿಗೆ ಆದೇಶಕ್ಕೆ ತಡೆ ನೀಡಿತ್ತು. ಅಂತೆಯೇ ನಂಜೇಗೌಡ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.