ಪಠಾಣ್‌ಕೋಟ್‌ನಿಂದ ಜಮ್ಮುವಿನ ಉಧಾಂಪುರದವರೆಗೆ ರಾಷ್ಟ್ರೀಯ ಹೆದ್ದಾರಿ - 44ರ ಕಾಮಗಾರಿ ಪೂರ್ಣಗೊಳ್ಳುವವರೆಗೆ ಎರಡು ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಕೇವಲ ಶೇಕಡಾ 20 ರಷ್ಟು ಮಾತ್ರ ಶುಲ್ಕ ಸಂಗ್ರಹಿಸಬೇಕು ಎಂದು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಈಚೆಗೆ ಮಧ್ಯಂತರ ತಡೆ ನೀಡಿದೆ [ಸುಗಂಧ ಸಾಹ್ನಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಕಾಮಗಾರಿ ಕಾರಣಕ್ಕೆ ಹೆದ್ದಾರಿ ಕಳಪೆ ಸ್ಥಿತಿಯಲ್ಲಿದ್ದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಅಥವಾ ಶುಲ್ಕ ವಸೂಲಾತಿ ಮಾಡುವ ಸಂಸ್ಥೆ ಪ್ರಯಾಣಿಕರಿಂದ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದ್ದರಿಂದ, ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಹೆದ್ದಾರಿಯಲ್ಲಿರುವ ಎರಡು ಪ್ಲಾಜಾಗಳಲ್ಲಿ ಟೋಲ್ ಶುಲ್ಕದ ಶೇಕಡಾ 20 ರಷ್ಟು ಮಾತ್ರ ಸಂಗ್ರಹಿಸಬೇಕೆಂದು ಅದು ಆದೇಶಿಸಿತ್ತು.
ಏಪ್ರಿಲ್ 15ರಂದು ಎನ್ಎಚ್ಎಐ ಇದನ್ನು ಪ್ರಶ್ನಿಸಿತ್ತು. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಮುಂದಿನ ವಿಚಾರಣೆ ನಡೆಯಲಿರುವ ಮೇ 19, 2025ರೊಳಗಾಗಿ ನೋಟಿಸ್‌ಗೆ ಪ್ರತಿಕ್ರಿಯಿಸುವಂತೆ ಅದು ಪ್ರತಿವಾದಿಗಳಿಗೆ ಆದೇಶಿಸಿದೆ.
ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಅನುಮತಿಸಲಾದ ಪ್ರಮಾಣಿತ ದರದ ಶೇ.75ರಷ್ಟು ಟೋಲ್ ಸಂಗ್ರಹಿಸುವುದನ್ನು ಎನ್ಎಚ್ಎಐ ಮುಂದುವರಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಾವಳಿ 4(9) ರ ಪ್ರಕಾರ, ರಸ್ತೆ ನವೀಕರಣದ ಅವಧಿಯಲ್ಲಿ ಇಂತಹ ವಿನಾಯಿತಿಗೆ ಅವಕಾಶ ನೀಡಿ ಈಗಾಗಲೇ ಶೇ. 75 ರ ದರದಲ್ಲಿ ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂದು ಎನ್ಎಚ್ಎಐ ಪರವಾಗಿ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ಮೆಹ್ತಾ ಅವರಲ್ಲದೆ ಎನ್ಎಚ್ಎಐ ಪರವಾಗಿ ವಕೀಲರಾದ ನಿಶಾಂತ್ ಅವಾನಾ, ರಿನಿ ಬಡೋನಿ, ಜಿಎಸ್ ಅವಾನಾ, ರೆಬೆಕಾ ಮಿಶ್ರಾ ಮತ್ತು ಮಯಾಂಕ್ ಚೌಧ್ ಅವರು ವಾದ ಮಂಡಿಸಿದರು.