A1
A1
ಸುದ್ದಿಗಳು

ಬಂಧಿತ ಸ್ತ್ರೀ ಸಲಿಂಗ ಸಂಗಾತಿಗೆ ಆಪ್ತ ಸಮಾಲೋಚನೆ: ಕೇರಳ ಹೈಕೋರ್ಟ್ ವಿಚಾರಣೆಗೆ ಸುಪ್ರೀಂ ತಡೆ

Bar & Bench

ತನ್ನ ಸಂಗಾತಿಯನ್ನು ಆಕೆಯ ಹೆತ್ತವರು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಆರೋಪಿಸಿ ಸಲಿಂಗ ಸಂಬಂಧ ಹೊಂದಿರುವ (ಲೆಸ್ಬಿಯನ್‌) ಮಹಿಳೆಯೊಬ್ಬರು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ [ದೇವು ಜಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಬಂಧಿತ ಸಂಗಾತಿ ಆಪ್ತ ಸಮಾಲೋಚನೆಗೆ ಹಾಜರಾಗುವಂತೆ ಕೇರಳ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಅರ್ಜಿದಾರೆ ಪ್ರಶ್ನಿಸಿದ್ದರು. ಹೈಕೋರ್ಟ್‌ನಲ್ಲಿರುವ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ತಡೆ ನೀಡಿತು.

ಬಂಧಿತಳ ಪೋಷಕರು ಆಕೆಯನ್ನು ಕೊಲ್ಲಂ ಕೌಟುಂಬಿಕ ನ್ಯಾಯಾಲಯದೆದುರು ಹಾಜರುಪಡಿಸಬೇಕು ಎಂದು ಸೂಚಿಸಿದ ಪೀಠ “ಸುಪ್ರೀಂ ಕೋರ್ಟ್‌ ಇ- ಸಮಿತಿಯ ಸಲೀನಾ ಅವರು ಬಂಧಿತ ಹೆಣ್ಣುಮಗಳ ಸಂದರ್ಶನ ನಡೆಸಬೇಕು. ಅಕ್ರಮ ಬಂಧನದಲ್ಲಿ ಆಕೆಯನ್ನು ಇರಿಸಲಾಗಿತ್ತೇ ಎಂಬ ಕುರಿತು ಈ ನ್ಯಾಯಾಲಯದ ಅಧಿಕಾರಿ ವರದಿ ಸಲ್ಲಿಸಬೇಕು. ಹೇಳಿಕೆಗಳನ್ನು ತಿರುಚದೆ ನ್ಯಾಯಯುತ ರೀತಿಯಲ್ಲಿ ದಾಖಲಿಸಿಕೊಳ್ಳಬೇಕು. ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು. ಮುಂದಿನ ವಿಚಾರಣೆಯವರೆಗೆ  ಹೈಕೋರ್ಟ್‌ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದೆ” ಎಂದಿತು.

ಅರ್ಜಿದಾರರೆ ಮತ್ತು ಬಂಧನದಲ್ಲಿರುವ ಮಹಿಳೆ ಸ್ತ್ರೀ ಸಲಿಂಗ ಜೋಡಿಯಾಗಿದ್ದು ಅವರು ಒಟ್ಟಿಗೆ ಬದುಕಲು ಮತ್ತು ಮದುವೆಯಾಗಲು ಬಯಸಿದ್ದಾರೆ. ವಕೀಲರಾದ ಶ್ರೀರಾಮ್ ಪರಕ್ಕಟ್ ಮತ್ತು ಎಂ ಎಸ್ ವಿಷ್ಣು ಶಂಕರ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಅಕ್ರಮವಾಗಿ ಪೋಷಕರಿಂದ ಗೃಹಬಂಧನದಲ್ಲಿದ್ದಾಳೆ ಎನ್ನಲಾದ ಸಂಗಾತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರಲಾಗಿದ್ದು ಹೈಕೋರ್ಟ್ ಆದೇಶಿಸಿದ್ದ ಲಿಂಗ ಸಂವೇದನೆ ಆಪ್ತಸಮಾಲೋಚನೆಯನ್ನು ಕೂಡ ಪ್ರಶ್ನಿಸಲಾಗಿದೆ.

ಹೈಕೋರ್ಟ್‌ ಸೂಚಿಸಿರುವ ಆಪ್ತ ಸಮಾಲೋಚನೆಯು ನಿರ್ವಿವಾದವಾಗಿ ಮಹಿಳೆಯು ತನ್ನ ಲೈಂಗಿಕ ಮನೋಧರ್ಮವನ್ನು ಬದಲಿಸಿಕೊಳ್ಳಲು ಸೂಚಿಸಿರುವಂತದ್ದಾಗಿದೆ. ಈ ರೀತಿಯ ಆಪ್ತ ಸಮಾಲೋಚನೆಯನ್ನು ಕಾನೂನಿನಡಿ ನಿರ್ಬಂಧಿಸಲಾಗಿದೆ ಎನ್ನುವುದನ್ನು ಇಲ್ಲಿ ಗೌರವಪೂರ್ವಕವಾಗಿ ತಿಳಿಸಲು ಬಯಸುತ್ತೇವೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲಿಂಗತ್ವ ಮನೋಧರ್ಮದ ಕುರಿತಾದ ಆಪ್ತ ಸಮಾಲೋಚನೆಯು ಕಾನೂನು ಸಮ್ಮತವೇ, ಅಲ್ಲವೇ ಎನ್ನುವ ಬಗ್ಗೆಯೂ ಪರಿಶೀಲಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಲಾಗಿದೆ.