BS Yediyurappa and Supreme Court  
ಸುದ್ದಿಗಳು

ಪೋಕ್ಸೊ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

ಪ್ರಕರಣ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದನ್ನು ಯಡಿಯೂರಪ್ಪ ಪ್ರಶ್ನಿಸಿದ್ದರು.

Bar & Bench

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ 2012ರ (ಪೋಕ್ಸೊ) ಅಡಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ [ಬಿ ಎಸ್ ಯಡಿಯೂರಪ್ಪ ವಿರುದ್ಧ ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಕರ್ನಾಟಕ ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ಆಲಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಈ ಆದೇಶ ಹೊರಡಿಸಿತು.

ಯಡಿಯೂರಪ್ಪ ಅವರ ಮನವಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ನ್ಯಾಯಾಲಯ, ಪ್ರಕರಣವನ್ನು ಹೈಕೋರ್ಟ್‌ಗೆ ವಹಿಸಲಷ್ಟೇ ತಾನು ತಡೆ ನೀಡುತ್ತಿರುವುದಾಗಿ ತಿಳಿಸಿತು.

ಯಡಿಯೂರಪ್ಪ ಪರ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ , ಹೈಕೋರ್ಟ್ ಪ್ರಮುಖ ಸಾಕ್ಷ್ಯಗಳನ್ನು ನಿರ್ಲಕ್ಷಿಸಿದೆ ಎಂದು ವಾದಿಸಿದರು.

" ಪ್ರಾಸಿಕ್ಯೂಷನ್ ತಿಳಿಸದೆ ಇರುವ ಕೆಲವು ಹೇಳಿಕೆಗಳಿವೆ. ಕೃತ್ಯ ನಡೆದಿಲ್ಲ ಎಂದು ಹೇಳುವ ಸಾಕ್ಷ್ಯಗಳಿವೆ ಎಂಬ ಸಂಗತಿಯನ್ನು ಹೈಕೋರ್ಟ್ ನಿರ್ಲಕ್ಷಿಸಿದೆ. ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದವರು" ಎಂದು ಲೂತ್ರಾ ತಿಳಿಸಿದರು.

ಆದರೆ ಸಿಜೆಐ ಸೂರ್ಯಕಾಂತ್ "ಹೈಕೋರ್ಟ್ (ಪ್ರಕರಣದ ಕುರಿತು) ಮಿನಿ ವಿಚಾರಣೆ ನಡೆಸುವಂತೆ ನೀವು ಒತ್ತಾಯಿಸಬಹುದೆ?" ಎಂದು ಲೂತ್ರಾ ಅವರನ್ನು ಪ್ರಶ್ನಿಸಿದರು.

ಸಹಾಯ ಕೋರಿ ಯಡಿಯೂರಪ್ಪ ಅವರ ಮನೆಗೆ ಹೋಗಿದ್ದ ವೇಳೆ ತನ್ನ 17 ವರ್ಷದ ಮಗಳ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು.

ಬಾಲಕಿಯ ತಾಯಿ ಮಾರ್ಚ್ 14, 2024ರಂದು ಯಡಿಯೂರಪ್ಪ ಅವರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದರು. ಮಾಜಿ ಮುಖ್ಯಮಂತ್ರಿ ಹಣ ನೀಡುವ ಮೂಲಕ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ಪ್ರಸ್ತುತ ಬಾಲಕಿ ತಾಯಿ ಮೃತ ಪಟ್ಟಿದ್ದಾರೆ.

ಈ ದೂರಿನ ಆಧಾರದ ಮೇಲೆ, ಪೊಲೀಸರು ಪೋಕ್ಸೊ ಕಾಯಿದೆಯ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354 (ಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಜುಲೈ 4, 2024ರಂದು, ವಿಚಾರಣಾ ನ್ಯಾಯಾಲಯ ಯಡಿಯೂರಪ್ಪ ಹಾಗೂ ಇತರ ಮೂವರ ವಿರುದ್ಧ ಐಪಿಸಿಯ ಸೆಕ್ಷನ್ 204 (ಸಾಕ್ಷ್ಯ ನಾಶ), 214 (ಕಾನೂನು ಶಿಕ್ಷೆಯಿಂದ ಪಾರಾಗಲು ಉಡುಗೊರೆ, ಆಸ್ತಿ ನೀಡುವುದು) ಹಾಗೂ ಸೆಕ್ಷನ್ 37 (ಅಪರಾಧವಾಗುವ ಹಲವಾರು ಕೃತ್ಯಗಳಲ್ಲಿ ಒಂದನ್ನು ಎಸಗುವ ಮೂಲಕ ಸಹಕರಿಸುವುದು) ಅಡಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ಸಂಜ್ಞೇಯ ಅಪರಾಧವಾಗಿ ಗಣನೆಗೆ ತೆಗೆದುಕೊಳ್ಳುವ ಆದೇಶ ಹೊರಡಿಸಿತ್ತು.

ಇದನ್ನು ಯಡಿಯೂರಪ್ಪ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣಾ ನ್ಯಾಯಾಲಯದ ಆದೇಶ ಅತಿ ಸಂಕ್ಷಿಪ್ತವಾಗಿದ್ದು ವಿವೇಚನೆ ಬಳಸದೆ ಸಂಜ್ಞೇ ಪರಿಗಣಿಸಿದೆ ಎಂದು ತಿಳಿಸಿದ ಹೈಕೋರ್ಟ್‌ ಜುಲೈ 2024ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ರದ್ದುಗೊಳಿಸಿತ್ತು. ಮತ್ತೆ ಪ್ರಕರಣದ ವಿಚಾರಣೆ ನಡೆಸುವಂತೆ ಅದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.

ಫೆಬ್ರವರಿ 28 ರಂದು, ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಲಯದ ನ್ಯಾಯಾಧೀಶ ಎನ್ ಎಂ ರಮೇಶ್ ಅವರು  ಹೊಸದಾಗಿ ಆದೇಶ ಹೊರಡಿಸಿ ಮಾರ್ಚ್ 15ರಂದು ಯಡಿಯೂರಪ್ಪ ಹಾಗೂ ಉಳಿದ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದ್ದರು.

ನಂತರ ಯಡಿಯೂರಪ್ಪ ಅವರು ದೂರು ಮತ್ತು ವಿಚಾರಣಾ ನ್ಯಾಯಾಲಯದ ಆದೇಶ ಎರಡನ್ನೂ ರದ್ದುಗೊಳಿಸುವಂತೆ ಹೈಕೋರ್ಟ್‌ ಮೊರೆ ಹೋಗಿದ್ದರು. ಆರೋಪಗಳು ರಾಜಕೀಯ ಪ್ರೇರಿತ ಮತ್ತು ವಿರೋಧಾಭಾಸದಿಂದ ಕೂಡಿವೆ ಎಂದು ವಾದಿಸಿದರು.

ಕಳೆದ ತಿಂಗಳು ಹೈಕೋರ್ಟ್ ಯಡಿಯೂರಪ್ಪ ಅವರಿಗೆ ಪರಿಹಾರ ನಿರಾಕರಿಸಿತ್ತು. ಪರಿಣಾಮ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.