Uttarakhand Chief Minister TS Rawat  
ಸುದ್ದಿಗಳು

ಉತ್ತರಾಖಂಡ ಮುಖ್ಯಮಂತ್ರಿ ರಾವತ್‌ ವಿರುದ್ಧದ ಸಿಬಿಐ ತನಿಖೆಯ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ

ಪ್ರಕರಣದಲ್ಲಿ ಮುಖ್ಯಮಂತ್ರಿ ಪಕ್ಷಕಾರರಲ್ಲ. ಹೀಗಿದ್ದೂ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದೆ. ಇದು ಸರ್ಕಾರವನ್ನು ಅಸ್ಥಿರಗೊಳಿಸಲು ಅನುಮತಿ ನೀಡದ ಸುಪ್ರೀಂಕೋರ್ಟ್ ತೀರ್ಪುಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದ ಅಟಾರ್ನಿ ಜನರಲ್.

Bar & Bench

ಪತ್ರಕರ್ತರು ಮಾಡಿದ ಲಂಚದ ಆರೋಪದ ಹಿನ್ನೆಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಟಿ ಎಸ್‌ ರಾವತ್‌ ಅವರ ವಿರುದ್ಧ ಎಫಐಆರ್‌ ದಾಖಲಿಸುವಂತೆ ಉತ್ತರಾಖಂಡ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ಅವರಿದ್ದ ನ್ಯಾಯಪೀಠ ಅಕ್ಟೋಬರ್ 27 ರಂದು ಹೈಕೋರ್ಟ್ ನೀಡಿದ್ದ ತೀರ್ಪಿನ 155.6, 155.7, ಮತ್ತು 155.8 ಪ್ಯಾರಾದರಲ್ಲಿರುವ ವಿಚಾರಗಳನ್ನು ಜಾರಿ ಮಾಡದಂತೆ ನಿರ್ಬಂಧಿಸಿದೆ.

ಅರ್ಜಿದಾರರು ಅಂತಹ (ತನಿಖೆಯಂತಹ) ಯಾವುದೇ ವಿಷಯವನ್ನು ಎತ್ತಿಲ್ಲದಿದ್ದರೂ ಹೈಕೋರ್ಟ್ 226 ನೇ ವಿಧಿ ಅನ್ವಯ ತನ್ನ ಸ್ವಯಂ ಪ್ರೇರಿತ ಅಧಿಕಾರ ಚಲಾಯಿಸಿ ʼಎಲ್ಲರೂ ಆಶ್ಚರ್ಯಚಕಿತʼರಾಗುವಂತೆ ಮಾಡಿದೆ ಎಂದು ನ್ಯಾಯಮೂರ್ತಿ ಶಾ ಅಭಿಪ್ರಾಯಪಟ್ಟರು. ನ್ಯಾಯಮೂರ್ತಿ ಭೂಷಣ್ ಅವರು, ʼಮುಖ್ಯಮಂತ್ರಿ ಪ್ರಕರಣದಲ್ಲಿ ಪಕ್ಷಕಾರರಲ್ಲದಿದ್ದರೂ ಅಂತಹ ಕಠಿಣ ಆದೇಶ ಜಾರಿ ಮಾಡಲಾಗಿದೆʼ ಎಂದು ಹೇಳಿದರು. ಆದೇಶದ ಕೆಲ ಭಾಗಗಳಿಗೆ ತಡೆ ನೀಡಿತು. ನಾಲ್ಕು ವಾರಗಳ ಬಳಿಕ ಸುಪ್ರೀಂಕೋರ್ಟ್‌ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಇದಕ್ಕೂ ಮುನ್ನ ರಾವತ್‌ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ʼ ಪ್ರಕರಣದಲ್ಲಿ ಪಕ್ಷಕಾರರಾಗಿರದ ಮುಖ್ಯಮಂತ್ರಿ ವಿರುದ್ಧ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ತನಿಖೆ ನಡೆಸಲು ಆದೇಶಿಸಿ ಹೈಕೋರ್ಟ್‌ ತಪ್ಪೆಸಗಿದೆʼ ಎಂದು ಹೇಳಿದರು. "ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಪಕ್ಷಕಾರರಲ್ಲ. ಹೀಗಿದ್ದೂ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದೆ. ಇದು ಸರ್ಕಾರವನ್ನು ಅಸ್ಥಿರಗೊಳಿಸಲು ಅನುಮತಿ ನೀಡದ ಸುಪ್ರೀಂಕೋರ್ಟ್ ತೀರ್ಪುಗಳಿಗೆ ವಿರುದ್ಧವಾಗಿದೆ. ಏಕೆಂದರೆ ಅಂತಹ ತೀರ್ಪುಗಳು ಸಿಎಂಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಿದ್ದು ಅದು ನಡೆಯುತ್ತಿದೆ” ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಪರ ಹಾಜರಾದ ಮತ್ತೊಬ್ಬ ಹಿರಿಯ ವಕೀಲ ಮುಕುಲ್ ರೋಹಟ್ಗಿ, ʼಹೈಕೋರ್ಟ್ ಆದೇಶವು ಕಾನೂನು ಉಲ್ಲಂಘನೆಯಾಗಿದೆʼ ಎಂದು ವಾದಿಸಿದರು. ಪತ್ರಕರ್ತರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ʼರಾವತ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿರುವ ವಾಟ್ಸಾಪ್ ಸಂದೇಶಗಳು ಮತ್ತು ಬ್ಯಾಂಕ್ ಖಾತೆಗಳ ವಿವರಗಳ ಇರುವುದರಿಂದ ಪ್ರಕರಣ ಗಂಭೀರವಾಗಿದೆʼ ಎಂದು ಸಮರ್ಥಿಸಿಕೊಂಡರು.