Supreme Court 
ಸುದ್ದಿಗಳು

ಡಿಪ್ಲೊಮಾ ಪದವೀಧರರೂ ಚಿಕಿತ್ಸೆ ನೀಡುವಂತೆ ಅವಕಾಶ ಕಲ್ಪಿಸಿದ್ದ ಅಸ್ಸಾಂ ಕಾಯಿದೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಉನ್ನತ ಶಿಕ್ಷಣಕ್ಕೆ ಮಾನದಂಡ ರೂಪಿಸುವ, ಸಂಸ್ಥೆಗಳನ್ನು ಮಾನ್ಯ ಮಾಡುವ ಇಲ್ಲವೇ ಅಮಾನ್ಯಗೊಳಿಸುವ ವಿಶೇಷ ಶಾಸಕಾಂಗ ಅಧಿಕಾರ ಸಂಸತ್ತಿಗೆ ಇದೆಯೇ ವಿನಾ ರಾಜ್ಯ ಸರ್ಕಾರಕ್ಕಲ್ಲ ಎಂದು ತೀರ್ಪು.

Bar & Bench

ಡಿಪ್ಲೊಮಾ ಪದವೀಧರರೂ ಕೆಲ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದು ಎಂದು ಅವಕಾಶ ಕಲ್ಪಿಸಿದ್ದ ಅಸ್ಸಾಂ ಗ್ರಾಮೀಣ ಆರೋಗ್ಯ ನಿಯಂತ್ರಣ ಪ್ರಾಧಿಕಾರದ ಕಾಯಿದೆ- 2004 ನ್ನು ರದ್ದುಗೊಳಿಸಿದ್ದ ಗುವಾಹಟಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ [ಬಹರುಲ್ ಇಸ್ಲಾಂ ಮತ್ತು ಭಾರತೀಯ ವೈದ್ಯಕೀಯ ಸಂಘ ನಡುವಣ ಪ್ರಕರಣ].

ಪ್ರವೇಶ ಪಟ್ಟಿ 66, 1 ರ ಪ್ರಕಾರ ಉನ್ನತ ಶಿಕ್ಷಣಕ್ಕೆ ಮಾನದಂಡ ರೂಪಿಸುವ, ಸಂಸ್ಥೆಗಳನ್ನು ಮಾನ್ಯ ಮಾಡುವ ಇಲ್ಲವೇ ಅಮಾನ್ಯಗೊಳಿಸುವ ವಿಶೇಷ ಶಾಸಕಾಂಗ ಅಧಿಕಾರ ಸಂಸತ್ತಿಗಷ್ಟೇ ಇದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಹೇಳಿದೆ.   

ಇದೇ ವೇಳೆ ಕನಿಷ್ಠ ಮಾನದಂಡ ರೂಪಿಸುವಿಕೆ ಮತ್ತು ಸಮನ್ವಯ ಹೊರತುಪಡಿಸಿ ಶಿಕ್ಷಣದ ಉಳಿದೆಲ್ಲಾ ಅಂಶಗಳಿಗೆ ಸಂಬಂಧಿಸಿದಂತೆ ಶಾಸನ ರೂಪಿಸಲು ರಾಜ್ಯ ಶಾಸಕಾಂಗಗಳಿಗೆ ಅಧಿಕಾರ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕನಿಷ್ಠ ಮಾನದಂಡ ರೂಪಿಸುವ ಅಧಿಕಾರ ರಾಜ್ಯ ಶಾಸಕಾಂಗಕ್ಕೆ ಇಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿತು.

"ಮೇಲೆ ಪಟ್ಟಿ ಮಾಡಲಾದ ಅಂಶಗಳಿಗೆ ಸಂಬಂಧಿಸಿದಂತೆ ಶಾಸನ ರೂಪಿಸುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕೆ ಇಲ್ಲದೇ ಇರುವುದರಿಂದ  ವೈದ್ಯಕೀಯ ಶಿಕ್ಷಣದ ಇಂತಹ ಅಂಶಗಳನ್ನು ನಿಯಂತ್ರಿಸಲು ಹೊರಡುವ ಅಸ್ಸಾಂ ಕಾಯಿದೆಯು ರದ್ದುಪಡಿಸಲು ಅರ್ಹ" ಎಂದು ನ್ಯಾಯಾಲಯ ಆದೇಶಿಸಿದೆ.

ಹೈಕೋರ್ಟ್ ತೀರ್ಪಿನ ಆಧಾರ ತೆಗೆದುಹಾಕಲು ಮತ್ತು ಡಿಪ್ಲೊಮಾ ಪದವೀಧರರನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ 2015ರಲ್ಲಿ ಅಸ್ಸಾಂ ಸಮುದಾಯ ವೃತ್ತಿಪರ ನೋಂದಣಿ ಮತ್ತು ಸಾಮರ್ಥ್ಯ ಕಾಯಿದೆಯನ್ನು ಜಾರಿಗೊಳಿಸಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ "ಆಕ್ಷೇಪಾರ್ಹ ತೀರ್ಪಿನ ಆಧಾರವನ್ನು ತೆಗೆದುಹಾಕಲಾಗಿರುವುದರಿಂದ ಅದು ಸಾಂವಿಧಾನಿಕವಾಗಿ ಮಾನ್ಯವಾಗಿದೆ" ಎಂದು ಹೇಳಿದೆ.

ಕೇಂದ್ರ ರೂಪಿಸಿರುವ ಭಾರತೀಯ ವೈದ್ಯಕೀಯ ಮಂಡಳಿ ಕಾಯಿದೆಗೆ ಅಸ್ಸಾಂ ಕಾಯಿದೆ ವ್ಯತಿರಿಕ್ತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. "ಹೀಗಾಗಿ ರಾಜ್ಯದ ಕಾನೂನು ಮತ್ತು ಕೇಂದ್ರ ಸರ್ಕಾರದ ಕಾನೂನಿನ ನಡುವೆ ನೇರ ಸಂಘರ್ಷ ಉಂಟಾದಾಗ, ಉನ್ನತ ಶಿಕ್ಷಣದಲ್ಲಿನ ಮಾನದಂಡಗಳ ಸಮನ್ವಯ ಮತ್ತು ನಿರ್ಣಯದ ವಿಷಯದಲ್ಲಿ, ರಾಜ್ಯ ಕಾನೂನಿಗೆ ಯಾವುದೇ ಸಿಂಧುತ್ವ ಇರುವುದಿಲ್ಲ" ಎಂದು ತೀರ್ಪು ನೀಡಿದೆ.