ಎಲ್ಲಾ ಭಾರತೀಯ ಭಾಷೆಗಳಲ್ಲಿ ತನ್ನ ತೀರ್ಪುಗಳು ಲಭ್ಯವಾಗುವಂತೆ ಮಾಡಲು ಯತ್ನಿಸುತ್ತಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದ್ದಾರೆ.
ಇದರಿಂದ ಅನೇಕರಿಗೆ ಅದರಲ್ಲಿಯೂ ವಿಶೇಷವಾಗಿ ಯುವಜನತೆಗೆ ಹೆಚ್ಚು ಉಪಯೋಗವಾಗುತ್ತದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
“ಇತ್ತೀಚಿನ ಸಮಾರಂಭವೊಂದರಲ್ಲಿ ಸಿಜೆಐ ಡಿ ವೈ ಚಂದ್ರಚೂಡ್ ಅವರು ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ತೀರ್ಪುಗಳು ಲಭ್ಯವಾಗುವಂತೆ ಕೆಲಸ ಮಾಡುವ ಅಗತ್ಯತೆಯ ಕುರಿತು ಮಾತನಾಡಿದರು. ಅವರು ತಂತ್ರಜ್ಞಾನ ಬಳಸಲು ಸಲಹೆ ನೀಡಿದರು. ಇದು ಶ್ಲಾಘನೀಯ ಚಿಂತನೆಯಾಗಿದ್ದು ಇದರಿಂದ ಅನೇಕರಿಗೆ ವಿಶೇಷವಾಗಿ ಯುವಜನತೆಗೆ ಹೆಚ್ಚು ಉಪಯೋಗವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಜಗತ್ತಿನಲ್ಲಿ ಡಿಜಟಲೀಕರಣದ ಪ್ರಭಾವ ಹೆಚ್ಚುತ್ತಿದ್ದು ಎಲ್ಲಾ ಭಾರತೀಯ ಭಾಷೆಗಳಲ್ಲಿ ತೀರ್ಪು ಲಭ್ಯವಾಗುವಂತೆ ಮಾಡುವತ್ತ ಭಾರತೀಯ ನ್ಯಾಯಾಂಗ ಮುಂದಿನ ಹೆಜ್ಜೆ ಇಡಲಿದೆ ಎಂದು ಸಿಜೆಐ ಚಂದ್ರಚೂಡ್ ಶನಿವಾರ ತಿಳಿಸಿದ್ದರು.
ಕೆಲ ತಿಂಗಳುಗಳ ಹಿಂದೆ ಸಿಜೆಐ ಹುದ್ದೆಗೇರಿದ್ದ ತಮ್ಮನ್ನುಅಭಿನಂದಿಸುವ ಸಲುವಾಗಿ ಮುಂಬೈನಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ವಕೀಲರ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನ್ಯಾ. ಚಂದ್ರಚೂಡ್ ಈ ವಿಚಾರ ಪ್ರಸ್ತಾಪಿಸಿದ್ದರು.
ಪ್ರಧಾನಮಂತ್ರಿಯವರು ತಮ್ಮ ಟ್ವೀಟ್‌ನಲ್ಲಿ ಕೇಂದ್ರ ಸರ್ಕಾರ ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
“ಭಾರತದಲ್ಲಿ ಹಲವು ಭಾಷೆಗಳಿವೆ. ಇದು ನಮ್ಮ ಸಾಂಸ್ಕೃತಿಕ ಕಂಪನ್ನು ಪಸರಿಸುತ್ತದೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯದಂತಹ ವಿಷಯಗಳನ್ನು ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ಆಯ್ಕೆ ನೀಡುವುದು ಸೇರಿದಂತೆ ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿದೆ” ಎಂದು ಕೂಡ ಮೋದಿ ಅವರು ಟ್ವೀಟಿಸಿದ್ದಾರೆ.