Maratha reservation and supreme court 
ಸುದ್ದಿಗಳು

ಮಹಾರಾಷ್ಟ್ರ ಸರ್ಕಾರದ ಮರಾಠಾ ಮೀಸಲಾತಿ ಕಾಯಿದೆ ರದ್ದುಪಡಿಸಿದ ಸುಪ್ರೀಂ ಕೋರ್ಟ್

ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಶೇ 50 ರಷ್ಟು ಮಿತಿಯನ್ನು ಮೀರುವುದು ಸಂವಿಧಾನದ 14 ಮತ್ತು 15ನೇ ನಿಯಮದ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಸಾರ್ವಜನಿಕ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ 2018ರ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮಹಾರಾಷ್ಟ್ರ ರಾಜ್ಯ ಮೀಸಲಾತಿ (ಎಸ್‌ಬಿಸಿ) ಕಾಯಿದೆಯನ್ನು ಸುಪ್ರೀಂಕೋರ್ಟ್‌ ಬುಧವಾರ ಅನೂರ್ಜಿತಗೊಳಿಸಿ ರದ್ದುಪಡಿಸಿದೆ.

1992ರ ಇಂದಿರಾ ಸಾಹ್ನಿ ಪ್ರಕರಣದ ತೀರ್ಪಿನ ವೇಳೆ ಸುಪ್ರೀಂಕೋರ್ಟ್‌ ನಿಗದಿಪಡಿಸಿದ್ದ ಶೇ 50ಕ್ಕಿಂತ ಹೆಚ್ಚಿನ ಮೀಸಲಾತಿಯನ್ನು ಮರಾಠಾ ಸಮುದಾಯಕ್ಕೆ ನೀಡಲು ಯಾವುದೇ ವಿಶೇಷ ಸಂದರ್ಭಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

2018ರ ಕಾಯಿದೆ ಸಮಾನತೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಮತ್ತು ಶೇ 50ಕ್ಕೆ ಮಿತಿಗೊಳಿಸಿರುವ ಮೀಸಲಾತಿಯನ್ನು ಮೀರುವುದು ಸಂವಿಧಾನದ 14 ಮತ್ತು 15ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ 1992ರ ತೀರ್ಪನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಮತ್ತು ಸಾಹ್ನಿ ಪ್ರಕರಣದಲ್ಲಿ ಶೇ 50 ರಷ್ಟು ಮೀಸಲಾತಿ ಮಿತಿ ನಿಗದಿಪಡಿಸಿರುವುದು ಉತ್ತಮವಾದ ಕಾನೂನು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಅಲ್ಲದೆ ಸಾಹ್ನಿ ಪ್ರಕರಣದ ತೀರ್ಪನ್ನು ನ್ಯಾಯಾಲಯ ಅನೇಕ ಬಾರಿ ಅನುಸರಿಸಿದೆ ಮತ್ತು ಸುಪ್ರೀಂಕೋರ್ಟ್‌ನ ಕನಿಷ್ಠ ನಾಲ್ಕು ಸಂವಿಧಾನ ಪೀಠಗಳಿಂದ ಅದು ಅನುಮೋದನೆ ಪಡೆದಿದೆ ಎಂದು ಪೀಠ ವಿವರಿಸಿದೆ.

ಗಾಯಕವಾಡ್‌ ಆಯೋಗವಾಗಲೀ ಅಥವಾ ಬಾಂಬೆ ಹೈಕೋರ್ಟ್‌ ತೀರ್ಪಾಗಲೀ ಮರಾಠಾ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡಲು ಅಸಾಮಾನ್ಯ ಸಂದರ್ಭಗಳು ಬಂದೊದಗಿವೆ ಎಂದು ಹೇಳಿಲ್ಲ. ಆಯೋಗದ ತೀರ್ಮಾನ ಸಮರ್ಥನೀಯವಲ್ಲ ಎಂದು ಪಂಚ ಸದಸ್ಯ ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಲ್ ನಾಗೇಶ್ವರ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ಸಂವಿಧಾನಿಕ ಪೀಠ ಸರ್ವಾನುಮತದಿಂದ ಈ ತೀರ್ಪು ನೀಡಿದೆ.

ಆದರೂ 102 ನೇ ಸಾಂವಿಧಾನಿಕ ತಿದ್ದುಪಡಿಯಿಂದ ಸೇರಿಸಲಾದ ಸಂವಿಧಾನದ 342 ಎ ವಿಧಿಯ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಪೀಠ ಭಿನ್ನ ನಿಲುವು ತಳೆಯಿತು. ದೇಶದಲ್ಲಿ ರಾಷ್ಟ್ರಪತಿಗಳು ಮತ್ತು ರಾಜ್ಯಗಳಲ್ಲಿ ರಾಜ್ಯಪಾಲರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಬೇಕು ಎಂದು 342 ಎ ವಿಧಿ ಹೇಳುತ್ತದೆ. ಯಾವುದೇ ಸಮುದಾಯವನ್ನು ಎಸ್‌ಬಿಸಿ ಎಂದು ವರ್ಗೀಕರಿಸುವ ಅಧಿಕಾರವನ್ನು ಈ ವಿಧಿ ನಿರಾಕರಿಸುತ್ತದೆಯೇ ಎಂಬುದು ನ್ಯಾಯಾಲಯದ ಎದುರಿದ್ದ ಪ್ರಶ್ನೆಯಾಗಿತ್ತು. ನ್ಯಾಯಮೂರ್ತಿಗಳಾದ ಭೂಷಣ್‌ ಮತ್ತು ನಜೀರ್‌ ಅವರು 342 ಎ ವಿಧಿ ಪ್ರಕಾರ ಹಿಂದುಳಿದ ವರ್ಗಗಳನ್ನು ಗುರುತಿಸುವ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವ ಉದ್ದೇಶ ಸಂಸತ್ತಿಗೆ ಇಲ್ಲ ಎಂದು ಅಭಿಪ್ರಾಯಪಟ್ಟರು. 102 ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಸೇರಿಸಲಾದ ಸಂವಿಧಾನದ 342 ಎ ವಿಧಿ ಸೇರ್ಪಡೆ ಮಾಡಿದ್ದನ್ನು ಅವರು ಎತ್ತಿ ಹಿಡಿದರು. ಆದರೆ ನ್ಯಾಯಮೂರ್ತಿಗಳಾದ ರಾವ್‌ ಭಟ್‌ ಹಾಗೂ ಗುಪ್ತಾ ಅವರು 342 ಎ ಅಡಿಯಲ್ಲಿ ಎಸ್ಇಬಿಸಿಯನ್ನು ಗುರುತಿಸಲು ಮತ್ತು ಆ ಕುರಿತು ಅಧಿಸೂಚನೆ ಹೊರಡಿಸಲು ರಾಷ್ಟ್ರಪತಿಗಳಿಗೆ ಮಾತ್ರ ಅಧಿಕಾರವಿದೆ ಎಂದರು. ಇದರ ಮಧ್ಯೆ ಅವರು ಕೂಡ 102 ನೇ ತಿದ್ದುಪಡಿಯನ್ನು ಎತ್ತಿಹಿಡಿದರು.

ಹಿನ್ನೆಲೆ

ಮರಾಠ ಸಮುದಾಯಕ್ಕೆ ಮೀಸಲಾತಿ ಒದಗಿಸುವ ಸಂಬಂಧ ಮಹಾರಾಷ್ಟ್ರ ಸರ್ಕಾರ ರೂಪಿಸಿದ್ದ ಮಹತ್ವಾಕಾಂಕ್ಷಿ ನಿಯಮವನ್ನು 2019ರ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಆದರೆ ಶೇ 16ರಷ್ಟು ಮೀಸಲಾತಿ ನೀಡಲು ಅದು ವಿರೋಧ ವ್ಯಕ್ತಪಡಿಸಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಶೇ 13 ಮತ್ತು ಉದ್ಯೋಗ ಕ್ಷೇತ್ರದಲ್ಲಿ ಶೇ 12ರಷ್ಟು ಮೀಸಲಾತಿ ಮಿತಿ ಮೀರುವಂತಿಲ್ಲ ಎಂದು ಸ್ಪಷ್ಟಪಡಿಸಿತ್ತು. ಮಾರ್ಚ್‌ 26ರಂದು ನ್ಯಾಯಾಲಯ ಪ್ರಕರಣದ ತೀರ್ಪು ಕಾಯ್ದಿರಿಸಿತ್ತು.

ಈ ಆದೇಶ ಪ್ರಶ್ನಿಸಿ ವಿವಿಧ ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ಕಳೆದ ಮಾರ್ಚ್‌ನಲ್ಲಿ ಈ ಸಂಬಂಧ ಸರ್ವೋಚ್ಛ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಆ ವೇಳೆ ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ಅಹವಾಲುಗಳನ್ನು ಆಲಿಸುವುದಾಗಿ ಸುಪ್ರೀಂಕೋರ್ಟ್‌ ತಿಳಿಸಿತ್ತು. ಅಲ್ಲದೆ ಇಂದಿರಾ ಸಾಹ್ನಿ ತೀರ್ಪಿನ ಪರಾಮರ್ಶೆ ನಡೆಸುವುದಾಗಿ ಹೇಳಿತ್ತು. ಹಿರಿಯ ವಕೀಲ ಅರವಿಂದ್‌ ದಾತಾರ್‌ ಶೇ ಐವತ್ತರ ಮಿತಿ ಲಕ್ಷ್ಮಣ ರೇಖೆಯಾಗಿದ್ದು ಮೀಸಲಾತಿ ಒದಗಿಸುವಾಗ ಅದನ್ನು ಪಾಲಿಸಬೇಕು ಎಂದು ವಾದಿಸಿದ್ದರು. ಮರಾಠಾ ಮೀಸಲಾತಿಗೆ ಸಂಬಂಧಿಸಿದಂತೆ ಎದ್ದಿರುವ ಪ್ರಮುಖ ಕಾನೂನು ಪ್ರಶ್ನೆಗಳ ಬಗ್ಗೆ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಬೆಳಕು ಚೆಲ್ಲಿದ್ದರು. ಮತ್ತೊಂದು ಸಂದರ್ಭದಲ್ಲಿ ನ್ಯಾಯಾಲಯ ಮೀಸಲಾತಿಯ ಬಳಿಯೇ ಏಕೆ ನಿಲ್ಲುತ್ತೀರಿ ಜನರನ್ನು ಮೇಲೆತ್ತುವ ಕೆಲಸ ಮಾಡಿ ಎಂದು ಹೇಳಿತ್ತು. ಅಲ್ಲದೆ ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಯಲಿದೆ ಎಂದು ಕೂಡ ಪ್ರಶ್ನಿಸಿತ್ತು. ಇನ್ನೊಂದೆಡೆ ಕೇಂದ್ರ ಸರ್ಕಾರ ಎಸ್‌ಇಬಿಸಿ ಕಾಯಿದೆಗೆ ಬೆಂಬಲ ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.