Indian Army women, Supreme Court 
ಸುದ್ದಿಗಳು

ಜಡ್ಜ್ ಅಡ್ವೊಕೇಟ್ ಜನರಲ್ ಹುದ್ದೆ: ಪುರುಷರಿಗೆ ಮಾತ್ರ ಇದ್ದ ಅಸಮಾನ ಮೀಸಲಾತಿ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಜೆಎಜಿ ಹುದ್ದೆಗಳಲ್ಲಿ ಪುರುಷರಿಗೆ 6 ಸ್ಥಾನಗಳು ಮತ್ತು ಮಹಿಳೆಯರಿಗೆ 3 ಸ್ಥಾನಗಳನ್ನು ಮೀಸಲಿಡುವ ನಿರ್ಧಾರ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.

Bar & Bench

ಭಾರತೀಯ ಸೇನೆಯಲ್ಲಿ ಪುರುಷರಿಗೆ 6 ಮತ್ತು ಮಹಿಳೆಯರಿಗೆ 3 ಜಡ್ಜ್‌ ಅಡ್ವೊಕೇಟ್ ಜನರಲ್ (ಜೆಎಜಿ) ಹುದ್ದೆಗಳನ್ನು ಮೀಸಲಿಡುವ ಕ್ರಮವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ [ಅರ್ಷನೂರ್ ಕೌರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಎಲ್ಲಾ ಅಭ್ಯರ್ಥಿಗಳಿಗೆ ಅವರ ಲಿಂಗವನ್ನು ಲೆಕ್ಕಿಸದೆ ಸಂಯೋಜಿತ ಮೆರಿಟ್ ಪಟ್ಟಿ ಸಿದ್ಧಪಡಿಸುವಂತೆ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ  ಆದೇಶಿಸಿತು.

"ಕಾರ್ಯಾಂಗ ಪುರುಷರಿಗೆಂದು ಹುದ್ದೆ ಕಾಯ್ದಿರಿಸುವಂತಿಲ್ಲ. ಪುರುಷರಿಗೆ 6 ಮತ್ತು ಮಹಿಳೆಯರಿಗೆ 3 ಸ್ಥಾನಗಳ ಸ್ಥಾನಗಳ ನೀಡುತ್ತಿರುವುದು ಮನಸೋಇಚ್ಛೆಯ ಕ್ರಮವಾಗಿದ್ದು ದಾಖಲಾತಿ ನೆಪದಲ್ಲಿ ಅದಕ್ಕೆ ಅನುಮತಿ ನೀಡಲಾಗದು. ಲಿಂಗ ತಟಸ್ಥತೆ ಮತ್ತು 2023ರ ನಿಯಮಗಳ ನಿಜವಾದ ಅರ್ಥವೆಂದರೆ ಒಕ್ಕೂಟವು ಅತ್ಯಂತ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಾಗಿದೆ. ಮಹಿಳೆಯರಿಗೆ ಹುದ್ದೆ ನಿರ್ಬಂಧಿಸುವುದು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ... ಅಂತಹ ನೀತಿ ಅನುಸರಿಸಿದರೆ ಯಾವುದೇ ರಾಷ್ಟ್ರ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಮೇಲೆ ತಿಳಿಸಿದ ರೀತಿಯಲ್ಲಿ ನೇಮಕಾತಿ ನಡೆಸಲು, ಪುರುಷ ಮತ್ತು ಮಹಿಳೆಯರನ್ನು ಒಳಗೊಂಡ ಎಲ್ಲಾ ಅಭ್ಯರ್ಥಿಗಳಿಗೆ ಸಂಯೋಜಿತ ಅರ್ಹತಾ ಪಟ್ಟಿ ಪ್ರಕಟಿಸಲು ಒಕ್ಕೂಟಕ್ಕೆ ನಿರ್ದೇಶಿಸಲಾಗಿದೆ " ಎಂದು ನ್ಯಾಯಾಲಯ ಇಂದು ಹೇಳಿದೆ.

ಜೆಎಜಿ ಹುದ್ದೆಗಳಲ್ಲಿ ಪುರುಷರಿಗೆ 6 ಸ್ಥಾನಗಳು ಮತ್ತು ಮಹಿಳೆಯರಿಗೆ 3 ಸ್ಥಾನಗಳನ್ನು ಮೀಸಲಿಡುವ 2023ರ ಅಧಿಸೂಚನೆ ಪ್ರಶ್ನಿಸಿ ಮಹಿಳೆಯರಿಬ್ಬರು ಅರ್ಜಿ ಸಲ್ಲಿಸಿದ್ದರು..

ಇಬ್ಬರು ಅರ್ಜಿದಾರರು ನಾಲ್ಕನೇ ಮತ್ತು ಐದನೇ ರ‍್ಯಾಂಕ್ ಗಳಿಸಿದ್ದರೂ, ಹೆಚ್ಚಿನ ಸಂಖ್ಯೆಯ ಖಾಲಿ ಹುದ್ದೆಗಳನ್ನು ಪುರುಷ ಅಭ್ಯರ್ಥಿಗಳಿಗೆ ಮೀಸಲಿಟ್ಟಿರುವುದರಿಂದ ತಮಗೆ ಅರ್ಹತೆ ದೊರೆಯಲಿಲ್ಲ ಎಂದು ಮಹಿಳೆಯರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಆಗಸ್ಟ್ 2023ರಲ್ಲಿ ಈ ಸಂಬಂಧ ನೋಟಿಸ್‌ ಜಾರಿ ಮಾಡಿದ್ದ ನ್ಯಾಯಾಲಯ ಅಂತಿಮ ತೀರ್ಪು ಹೊರಬರುವವರೆಗೆ ಎರಡು ಹುದ್ದೆಗಳನ್ನು ಖಾಲಿ ಇರಿಸುವಂತೆ ನಿರ್ದೇಶಿಸಿತ್ತು.

ಕಳೆದ ಮೇನಲ್ಲಿ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದ ಅದು ಅರ್ಜಿದಾರರಲ್ಲಿ ಒಬ್ಬರು ಮಂಡಿಸಿದ ವಾದ ಮೇಲ್ನೋಟಕ್ಕೆ ತೃಪ್ತಿಕರವಾಗಿದ್ದು ಅವರನ್ನು ನೇಮಿಸಿಕೊಳ್ಳಲು ಸೂಚಿಸಿತ್ತು. ವಿಚಾರಣೆಯ ಸಮಯದಲ್ಲಿ, ಮಹಿಳೆಯರಿಗೆ ಕಡಿಮೆ ಹುದ್ದೆಗಳನ್ನು ಖಾಲಿ ಇಟ್ಟಿದ್ದರೂ ಹುದ್ದೆಗಳು ಲಿಂಗ ತಟಸ್ಥವಾಗಿವೆ ಎಂದು ಹೇಳಿಕೊಂಡಿದ್ದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್  ಪ್ರಶ್ನಿಸಿತ್ತು.

ಜೆಎಜಿ ಹುದ್ದೆಗಳು ಲಿಂಗ ತಟಸ್ಥವಾಗಿದ್ದು 2023 ರಿಂದ 50:50 ಅನುಪಾತದಲ್ಲಿ ಆಯ್ಕೆ ಕಾರ್ಯ ನಡೆಯುತ್ತಿದೆ ಎಂಬ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರ ವಾದ ನ್ಯಾಯಾಲಯಕ್ಕೆ ತೃಪ್ತಿ ನೀಡಿರಲಿಲ್ಲ.

 ಜೆಎಜಿ ಹುದ್ದೆಗೆ ಮೊದಲ ಅರ್ಜಿದಾರರನ್ನು ನೇಮಿಸುವಂತೆ ತಾನು ಈ ಹಿಂದೆ ನೀಡಿದ್ದ ನಿರ್ದೇಶನವನ್ನು ಇಂದಿನ ತೀರ್ಪಿನ ವೇಳೆ ನ್ಯಾಯಾಲಯ ಅಖೈರುಗೊಳಿಸಿದೆ. ಎರಡನೇ ಅರ್ಜಿದಾರರು ಯಾವುದೇ ಪರಿಹಾರಕ್ಕೆ ಅರ್ಹರಲ್ಲ ಎಂದು ಅದು ಇದೇ ವೇಳೆ ಸ್ಪಷ್ಟಪಡಿಸಿದೆ.