ಸುದ್ದಿಗಳು

ಪೋಲಾವರಂ ನೀರಾವರಿ ಯೋಜನೆ ವಿವಾದ: ಮಧ್ಯಸ್ಥಿಕೆಗೆ ಮುಂದಾಗುವಂತೆ ತೆಲಂಗಾಣ- ಆಂಧ್ರಕ್ಕೆ ಸುಪ್ರೀಂ ಸಲಹೆ

ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳು ಮಧ್ಯಸ್ಥಿಕೆಯ ಬಗ್ಗೆ ಏಕೆ ಯೋಚಿಸಬಾರದು? ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳು ಕೂಡ ಇವೆ ಎಂದು ಸಿಜೆಐ ಕಾಂತ್ ಹೇಳಿದರು.

Bar & Bench

ಪೋಲಾವರಂ ನೀರಾವರಿ ಯೋಜನೆಯನ್ನು ಬನಕಚೆರ್ಲ ಅಥವಾ ನಲ್ಲಮಲ ಸಾಗರ ಜಲಾಶಯದೊಂದಿಗೆ ಸಂಪರ್ಕಿಸುವ ವಿಸ್ತರಣಾ ಕಾಮಗಾರಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ತಲೆದೋರಿರುವ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಸಲಹೆ ನೀಡಿದೆ.

ಕಡ್ಡಾಯ ಕಾನೂನು ಅನುಮೋದನೆ ಪ ಕಡ್ಡಾಯ ಶಾಸನಬದ್ಧ ಅನುಮೋದನೆಗಳಿಲ್ಲದೆ ಆಂಧ್ರಪ್ರದೇಶವು ನಡೆಸುತ್ತಿದೆ ಎನ್ನಲಾದ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ನಿರ್ದೇಶನ ಕೋರಿ ತೆಲಂಗಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಈ ವಿಚಾರ ತಿಳಿಸಿತು.

ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳು ಮಧ್ಯಸ್ಥಿಕೆಯ ಬಗ್ಗೆ ಏಕೆ ಯೋಚಿಸಬಾರದು? ದಯವಿಟ್ಟು ಮಧ್ಯಸ್ಥಿಕೆಯ ಬಗ್ಗೆ ಆಲೋಚಿಸಿ.... ಮಹಾರಾಷ್ಟ್ರ , ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳು ಕೂಡ ಇವೆ" ಎಂದು ಸಿಜೆಐ ಕಾಂತ್ ಹೇಳಿದರು.

ಮೂಲ ಯೋಜನೆಯ ಪ್ರಕಾರವೇ ಪೋಲಾವರಂ ಯೋಜನೆಯನ್ನು ಜಾರಿಗೆ ತರಬೇಕು. ಯಾವುದೇ ವಿಸ್ತರಣೆ ಅಥವಾ ಹೆಚ್ಚುವರಿ ಕಾಮಗಾರಿ ಕಾನೂನುಬಾಹಿರ ಎಂದು ತೆಲಂಗಾಣ ಸರ್ಕಾರ ತನ್ನ ರಿಟ್‌ ಅರ್ಜಿಯಲ್ಲಿ ತಿಳಿಸಿದೆ.

ತನ್ನ ಆಕ್ಷೇಪಣೆ ಪರಿಗಣಿಸದೆಯೇ ನಲ್ಲಮಲ ಸಾಗರ ಯೋಜನೆಯ ಪೂರ್ವ ಕಾರ್ಯಸಿದ್ಧತಾ ವರದಿ ಪರಿಶೀಲಿಸಿರುವ ಕೇಂದ್ರ ನಿರ್ಧಾರಕ್ಕೂ ತೆಲಂಗಾಣ ಆಕ್ಷೇಪ ವ್ಯಕ್ತಪಡಿಸಿದೆ.  ಕೇಂದ್ರ ಜಲ ಆಯೋಗದ (ಸಿಡಬ್ಲ್ಯೂಸಿ) ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಆಂಧ್ರಪ್ರದೇಶ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸುತ್ತಿದೆ ಎಂದು ಆರೋಪಿಸಿರುವ ಅದು ತಕ್ಷಣ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು ಎಂದು ವಾದಿಸಿದೆ.

ತೆಲಂಗಾಣದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಹಿರಿಯ ನ್ಯಾಯವಾದಿ ಜೈದೀಪ್‌ ಗುಪ್ತಾ ವಾದ ಮಂಡಿಸಿದರು. ಮುಂದಿನ ವಾರ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.