GN Saibaba
GN Saibaba Supreme Court
ಸುದ್ದಿಗಳು

ಪ್ರೊ. ಸಾಯಿಬಾಬಾ ಖುಲಾಸೆ ಆದೇಶ ಅಮಾನತ್ತಿನಲ್ಲಿರಿಸಿದ ಸುಪ್ರೀಂ ಕೋರ್ಟ್‌; ವಿಚಾರಣೆ ವೇಳೆ 'ನಗರ ನಕ್ಸಲರ' ಪ್ರಸ್ತಾಪ

Bar & Bench

ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೊ. ಗೋಕರಕೊಂಡ ನಾಗ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್‌  ನಾಗಪುರ ಪೀಠದ ತೀರ್ಪನ್ನು ಸುಪ್ರೀಂ ಕೋರ್ಟ್ ಶನಿವಾರ ಅಮಾನತ್ತಿನಲ್ಲಿರಿಸಿದೆ.

ಬೆಳಗ್ಗೆ 11 ಗಂಟೆಗೆ ನಡೆದ ವಿಶೇಷ ಕಲಾಪದಲ್ಲಿ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಈ ಆದೇಶ ನೀಡಿತು.

“ಸಿಆರ್‌ಪಿಸಿ ಸೆಕ್ಷನ್‌ 390ರ ಅಡಿ ಅಧಿಕಾರ ಚಲಾಯಿಸಿ ಹೈಕೋರ್ಟ್‌ನ ಆದೇಶವನ್ನು ಅಮಾನತುಗೊಳಿಸುವುದಕ್ಕೆ ಇದು ಸೂಕ್ತ ಪ್ರಕರಣ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ....ಆರೋಪಿಯ ವೈದ್ಯಕೀಯ ಕಾರಣಗಳನ್ನು ಹೈಕೋರ್ಟ್‌ನಲ್ಲಿ ಹಾಜರುಪಡಿಸಲಾಗಿತ್ತು ಮತ್ತದು ತಿರಸ್ಕೃತವಾಗಿತ್ತು. ಹೀಗಾಗಿ, ಹೈಕೋರ್ಟ್ ಆದೇಶವನ್ನು ಅಮಾನತುಗೊಳಿಸಲಾಗಿದೆ. ನೋಟಿಸ್ ಜಾರಿ ಮಾಡಿ," ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಆದರೂ ಜಾಮೀನಿಗೆ ಅರ್ಜಿ ಸಲ್ಲಿಸಲು ಆರೋಪಿಗೆ ಮುಕ್ತ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ, ವೈದ್ಯಕೀಯ ಕಾರಣಗಳಿಗಾಗಿ (ವಿಕಲ ಚೇತನ) ಸಾಯಿಬಾಬಾ ಅವರನ್ನು ಜೈಲಿನಲ್ಲಿಡುವ ಬದಲು ಗೃಹಬಂಧನದಲ್ಲಿ ಇರಿಸಬೇಕೆಂಬ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿತು.

ವೈದ್ಯಕೀಯ ಕಾರಣಗಳಿಗಾಗಿ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು2020 ರಲ್ಲಿ ಹೈಕೋರ್ಟ್‌ ತಿರಸ್ಕರಿಸಿದಾಗಲೂ ಅದನ್ನೇ ಒತ್ತಿ ಹೇಳಲಾಗಿತ್ತು ಎಂದು ನ್ಯಾಯಾಲಯ ತಿಳಿಸಿತು.

ʼನಗರ ನಕ್ಸಲರು ಮನೆಯಿಂದಲೇ  ಏನೂ ಮಾಡಬಲ್ಲರುʼ

‘ನಗರ ನಕ್ಸಲರುʼ ತಮ್ಮನ್ನು ಜೈಲಿನಲ್ಲಿ ಇರಿಸುವ ಬದಲು ಗೃಹಬಂಧನದಲ್ಲಿರಿಸುವಂತೆ ಒತ್ತಾಯಿಸುವ ಪ್ರವೃತ್ತಿ ಇತ್ತೀಚೆಗೆ ಕಂಡುಬರುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರದ ಪರ ವಾದ ಮಂಡನೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ  ತಿಳಿಸಿದರು.

ಸಾಯಿಬಾಬಾ ಪರ ವಕೀಲ ಆರ್‌ ಬಸಂತ್‌ ಅವರು “ವೈದ್ಯಕೀಯ ತೊಂದರೆಗಳಿಂದ ಬಳಲುತ್ತಿರುವ ಕಾರಣ ತಮ್ಮ ಕಕ್ಷೀದಾರರನ್ನು ಜೈಲಿನ ಬದಲು ಗೃಹಬಂಧನದಲ್ಲಿರಿಸಬೇಕೆಂದು ಪ್ರಾರ್ಥಿಸಿದಾಗ ಎಸ್‌ಜಿ ಈ ರೀತಿ ಪ್ರತಿಕ್ರಿಯಿಸಿದರು.

 "ಇತ್ತೀಚಿಗೆ ನಗರ ನಕ್ಸಲರು ಗೃಹಬಂಧನಕ್ಕೆ ಯತ್ನಿಸುತ್ತಿದ್ದಾರೆ. ಆದರೆ ಅವರು ಮನೆಯೊಳಗಿಂದಲೇ ಏನು ಬೇಕಾದರೂ ಮಾಡಬಹುದು. ಫೋನ್ ಮೂಲಕ ಎಲ್ಲವೂ ಸಾಧ್ಯವಾಗುತ್ತದೆ. ದಯವಿಟ್ಟು ಗೃಹಬಂಧನ ಯಾವುದೇ ಕಾರಣಕ್ಕೂ ಆಯ್ಕೆಯ ವಿಷಯವಲ್ಲ ಎಂದು ಹೇಳಿ” ಎಂಬುದಾಗಿ ಅವರು ನ್ಯಾಯಾಲಯವನ್ನು ಕೋರಿದರು.

ಆಗ ಬಸಂತ್‌ ಅವರು ದೂರವಾಣಿ ನಿರ್ಬಂಧಿಸಲು ಅಧಿಕಾರಿಗಳು ಸ್ವತಂತ್ರರು ಎಂದರು. ಕಡೆಗೆ ನ್ಯಾಯಾಲಯ ಸಾಯಿಬಾಬಾ ಅವರ ವಿನಂತಿಯನ್ನು ಒಪ್ಪದೆ ಬಾಂಬೆ ಹೈಕೋರ್ಟ್ ತೀರ್ಪನ್ನು ಅಮಾನತ್ತಿನಲ್ಲಿರಿಸಿತು.