ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಗೋಕರಕೊಂಡ ನಾಗ ಸಾಯಿಬಾಬಾ ಅವರನ್ನು ಶುಕ್ರವಾರ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಖುಲಾಸೆಗೊಳಿಸಿದೆ.
ತಮಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯವೊಂದು 2017ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಾಯಿಬಾಬಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿಗಳಾದ ರೋಹಿತ್ ದಿಯೋ ಮತ್ತು ಅನಿಲ್ ಪನ್ಸಾರೆ ಅವರಿದ್ದ ಪೀಠ ತೀರ್ಪು ನೀಡಿದೆ.
ಮಾವೋವಾದಿಗಳ ಜೊತೆ ನಂಟು ಹೊಂದಿದ್ದ ಮತ್ತು ದೇಶದ ವಿರುದ್ಧ ಸಮರ ಸಾರಿದ ಆರೋಪದ ಮೇರೆಗೆ ಗಢ್‌ಚಿರೋಲಿಯ ಸೆಷನ್ಸ್ ನ್ಯಾಯಾಲಯ ಮಾರ್ಚ್ 2017ರಲ್ಲಿ ಸಾಯಿಬಾಬಾ ಮತ್ತಿತರರನ್ನು ದೋಷಿಗಳು ಎಂದು ಘೋಷಿಸಿ ತೀರ್ಪು ನೀಡಿತ್ತು.
ಸಾಯಿಬಾಬಾ ಅವರನ್ನು ಪ್ರಸ್ತುತ ನಾಗಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದ್ದು ಬೇರೆ ಪ್ರಕರಣಗಳಲ್ಲಿ ಅವರು ಬಂಧಿತರಾಗಿರದೇ ಇದ್ದರೆ ತಕ್ಷಣ ಅವರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಸಾಯಿಬಾಬಾ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ (ನಿಯಂತ್ರಣ) ಕಾಯಿದೆಯ ಸೆಕ್ಷನ್ 45(1) ಅಡಿ ಸೆಷನ್ಸ್ ನ್ಯಾಯಾಲಯವು ಆರೋಪ ನಿಗದಿಪಡಿಸಿರುವುದು ತಪ್ಪು ಎಂದು ನ್ಯಾಯಾಲಯವು ಸಾಯಿಬಾಬಾ ಅವರನ್ನು ಆರೋಪಮುಕ್ತಗೊಳಿಸಿತು.