Justices JB Pardiwala, Sanjiv Khanna, CJI DY Chandrachud, BR Gavai, Manoj Misra with SC
Justices JB Pardiwala, Sanjiv Khanna, CJI DY Chandrachud, BR Gavai, Manoj Misra with SC 
ಸುದ್ದಿಗಳು

ಚುನಾವಣಾ ಬಾಂಡ್‌ ವ್ಯವಸ್ಥೆಯಲ್ಲಿನ ದೋಷ ಪರಿಹರಿಸುವ ರಾಜಕೀಯ ದೇಣಿಗೆ ವ್ಯವಸ್ಥೆ ರೂಪಿಸಿ: ಸುಪ್ರೀಂ ಕೋರ್ಟ್‌

Bar & Bench

ಪ್ರಸಕ್ತ ಚಾಲ್ತಿಯಲ್ಲಿರುವ ಚುನಾವಣಾ ಬಾಂಡ್‌ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಪರಿಹರಿಸಲು ಹಾಗೂ ರಾಜಕೀಯ ದೇಣಿಗೆಗೆ ಪರ್ಯಾಯ ವ್ಯವಸ್ಥೆ ರೂಪಿಸಲು ಗುರುವಾರ ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ.

ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡುವ ಚುನಾವಣಾ ಬಾಂಡ್‌ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ಬಿ ಆರ್‌ ಗವಾಯಿ, ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರ ನೇತೃತ್ವದ ಸಾಂವಿಧಾನಿಕ ಪೀಠವು ಆದೇಶವನ್ನು ಕಾಯ್ದಿರಿಸಿದೆ.

ಸಿಜೆಐ ಚಂದ್ರಚೂಡ್‌ ಅವರು ವಿಚಾರಣೆಯ ವೇಳೆ, ನಗದಿನ ರೂಪದಲ್ಲಿ ದೇಣಿಗೆ ಪಡೆಯುವಂತಹ ಈ ಹಿಂದಿನ ವ್ಯವಸ್ಥೆಗೆ ಮರಳುವುದನ್ನು ಈ ನ್ಯಾಯಾಲಯ ಸಲಹೆ ಮಾಡುವುದಿಲ್ಲ. ಆದರೆ, ಹಾಲಿ ವ್ಯವಸ್ಥೆಯಲ್ಲಿನ ಗಂಭೀರ ಸಮಸ್ಯೆಗಳನ್ನು ಪರಿಹರಿಸುವುದು ಅಗತ್ಯವಾಗಿದೆ ಎಂದರು.

“ನಗದಿನ ವ್ಯವಸ್ಥೆಗೆ ಮರಳುವಂತೆ ನಾವು ಸೂಚಿಸುವುದಿಲ್ಲ. ಚುನಾವಣಾ ಬಾಂಡ್‌ ವ್ಯವಸ್ಥೆಯಲ್ಲಿನ ಗಂಭೀರ ಸಮಸ್ಯೆಗಳನ್ನು ಪರಿಹರಿಸುವಂತಹ ಸಮತೋಲಿತ ವ್ಯವಸ್ಥೆ ರೂಪಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

“ಹಾಲಿ ವ್ಯವಸ್ಥೆಯಲ್ಲಿರುವ ಸಮಸ್ಯೆಗಳು ಇಲ್ಲದ ಹಾಗೆ ಮತ್ತೊಂದು ವ್ಯವಸ್ಥೆಯನ್ನು ನೀವು ರೂಪಿಸಬಹುದು. ಅದನ್ನು ಹೇಗೆ ಮಾಡಬೇಕು ಎಂಬುದನ್ನು ನೀವು ನಿರ್ಧರಿಸಬೇಕು. ಅದು ನಮ್ಮ ಕಾರ್ಯಕ್ಷೇತ್ರವಲ್ಲವಾದ್ದರಿಂದ ಅದಕ್ಕೆ ನಾವು ಕೈಹಾಕುವುದಿಲ್ಲ” ಎಂದು ನ್ಯಾಯಾಲಯ ಹೇಳಿತು.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಕುರಿತು ನ್ಯಾಯಾಲಯವು ಚುನಾವಣಾ ಪ್ರಕ್ರಿಯೆಯಲ್ಲಿ ಹಣದ ಹರಿವನ್ನು ಕಡಿತ ಮಾಡಬೇಕು; ಬ್ಯಾಂಕುಗಳ ಮುಖಾಂತರ ಅಧಿಕೃತತೆ ಇರುವ ರೀತಿಯಲ್ಲಿ ಹಣದ ಹರಿವಿಗೆ ಅವಕಾಶ ಮಾಡಿಕೊಡಬೇಕು; ಬ್ಯಾಂಕುಗಳ ಮುಖೇನ ವ್ಯವಹರಿಸಲು ಉತ್ತೇಜಕಾರಿ ಕ್ರಮಗಳನ್ನು ಕೈಗೊಳ್ಳಬೇಕು; ಪಾರದರ್ಶಕತೆ ಕಾಯ್ದುಕೊಳ್ಳಬೇಕು; ಕಿಕ್‌ಬ್ಯಾಕ್‌ ಸಕ್ರಮಗೊಳಿಸುವುದನ್ನು ನಿಷೇಧಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಈ ಸಮತೆಯನ್ನು ಶಾಸಕಾಂಗ ಮತ್ತು ಕಾರ್ಯಾಂಗ ಮಾತ್ರ ಸಾಧಿಸಲು ಸಾಧ್ಯ. ಈ ಹಿಂದೆ ಕಂಪೆನಿಗಳು ನೀಡುವ ದೇಣಿಗೆಗೆ ಮಿತಿ ಇತ್ತು. ಒಟ್ಟು ಆದಾಯದಲ್ಲಿ ನಿರ್ದಿಷ್ಟ ಪ್ರಮಾಣದ ಹಣವನ್ನು ದೇಣಿಗೆ ನೀಡಲು ಅವುಗಳಿಗೆ ಅನುಮತಿ ಇತ್ತು. ಈಗ ಶೂನ್ಯ ವಹಿವಾಟು ಹೊಂದಿರುವ ಕಂಪೆನಿಯು ದೇಣಿಗೆ ನೀಡಬಹುದಾಗಿದೆ ಎಂದು ನ್ಯಾಯಾಲಯ ಪ್ರಸಕ್ತ ವ್ಯವಸ್ಥೆಯ ನ್ಯೂನತೆಗಳತ್ತ ಬೆರಳು ಮಾಡಿತು. ಈ ವಿಚಾರದಲ್ಲಿ ತಮಗೆ ಕಳಕಳಿ ಇದೆ ಎಂದು ಪ್ರತಿಕ್ರಿಯಿಸಿದ ಎಸ್‌ಜಿ ಮೆಹ್ತಾ ಅವರು ಆದಾಯ ಹೊಂದಿರುವ ಕಂಪೆನಿಗಳು ಮಾತ್ರವೇ ದೇಣಿಗೆ ನೀಡಬಹುದು ಎಂದರು.

ದೇಣಿಗೆ ನೀಡಲು ಮಿತಿ ವಿಧಿಸಿದ್ದರಿಂದ ನಕಲಿ ಕಂಪೆನಿಗಳನ್ನು ಸೃಷ್ಟಿಸಿ ಅವುಗಳ ಮೂಲಕ ದೇಣಿಗೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.