ಚುನಾವಣಾ ಬಾಂಡ್‌ ನಿಧಿ ದುರುಪಯೋಗದ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌

ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ ನಿಷೇಧ ಹೇರುವಂತೆ ಮಧ್ಯಂತರ ನಿರ್ದೇಶನ ಕೋರಿ ಸರ್ಕಾರೇತರ ಸಂಸ್ಥೆ ಎಡಿಆರ್‌ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಪೀಠವು ಆದೇಶ ಕಾಯ್ದಿರಿಸಿದೆ.
Electoral Bonds
Electoral Bonds

ಚುನಾವಣಾ ಬಾಂಡ್‌ ಯೋಜನೆಯ ಮೂಲಕ ಸ್ವೀಕರಿಸಲಾದ ನಿಧಿಯ ದುರ್ಬಳಕೆಯ ಸಾಧ್ಯತೆಯ ಬಗ್ಗೆ ಗಮನಹರಿಸುವಂತೆ ಬುಧವಾರ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಬಾಂಡ್‌ಗಳ ಮಾರಾಟವನ್ನು ನಿಷೇಧಿಸುವ ಕುರಿತು ಮಧ್ಯಂತರ ನಿರ್ದೇಶನ ನೀಡುವಂತೆ ಕೋರಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್ (ಎಡಿಆರ್)‌ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.

“ಮಿಸ್ಟರ್‌ ಅಟಾರ್ನಿ ಅವರೇ ನಾವು ಏನು ಹೇಳುತ್ತಿದ್ದೇವೆ ಎಂಬುದರ ಬಗ್ಗೆ ನಮಗೆ ಖಚಿತತೆ ಇಲ್ಲ. ಕಾನೂನುಬಾಹಿರ ಕ್ರಿಯೆಗಳಾದ ಭಯೋತ್ಪಾದನೆಯಂಥ ಚಟುವಟಿಕೆಗಳಿಗೆ ಈ ನಿಧಿ ಬಳಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ಸರ್ಕಾರವಾದ ನಿಮಗೆ ಸೂಚಿಸುತ್ತೇವೆ. ಹಾಗೆಂದು ರಾಜಕೀಯ ಪಕ್ಷಗಳು ತಮ್ಮ ಕಾರ್ಯಸೂಚಿಯಲ್ಲಿ ಭಯೋತ್ಪಾದನೆ ಹೊಂದಿವೆ ಎಂದು ಸೂಚಿಸುತ್ತಿಲ್ಲ” ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರಿಗೆ ಸಿಜೆಐ ಬೊಬ್ಡೆ ಹೇಳಿದರು.

ಚುನಾವಣಾ ಬಾಂಡ್‌ನಿಂದ ಅಪಾಯ ಹೆಚ್ಚು, ಅದರಿಂದ ಭಾರತದ ಹಣಕಾಸು ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಬರೆದಿರುವ ಪತ್ರವನ್ನು ಎಡಿಆರ್‌ ಪರ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು ನ್ಯಾಯಾಲಯದ ಗಮನಕ್ಕೆ ತಂದರು. “ಚುನಾವಣಾ ಬಾಂಡ್‌ಗಳನ್ನು ಶೆಲ್‌ ಕಂಪೆನಿ ಹುಟ್ಟುಹಾಕಲು ಬಳಸಬಹುದು ಇತ್ಯಾದಿ ಎಂದು ಆರ್‌ಬಿಐ ಹೇಳಿದೆ. ಇದರಿಂದ ಆರ್‌ಬಿಐ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಹೇಳಿಕೊಂಡಿದೆ. ಇಲ್ಲಿ ಸರ್ಕಾರಿ ಮೂಲಗಳ ಮೂಲಕ ಲಂಚ ನೀಡುವ ಕೆಲಸವಾಗುತ್ತಿದೆ. ಬ್ಯಾಂಕ್‌ ಹೊರತುಪಡಿಸಿ ದೇಣಿಗೆ ನೀಡುತ್ತಿರುವವರು ಯಾರು ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಚುನಾವಣಾ ಆಯೋಗಕ್ಕೂ ಈ ಮಾಹಿತಿ ಇರುವುದಿಲ್ಲ” ಎಂದರು. ಈ ಯೋಜನೆಯನ್ನು ಅಂತರಗಡಿ ಖೋಟಾನೋಟು ಚಲಾವಣೆಯಲ್ಲಿ ಬಳಸುವ ಸಾಧ್ಯತೆ ಉಂಟು ಎಂದು ಭೂಷಣ್ ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ, ಸಿಜೆಐ ಬೊಬ್ಡೆ ಅವರು “ಕೆಲವು ವಿಧಾನದ ಮೂಲಕ ಅದನ್ನು (ಚುನಾವಣಾ ಬಾಂಡ್‌ ವ್ಯವಸ್ಥೆ) ಮಾಡುವ ಇರಾದೆ ಹೊಂದಿರುವುದಾಗಿ ಆರ್‌ಬಿಐ ಹೇಳಿದೆ. ಡಿಮ್ಯಾಟ್‌ ವಿಧಾನದ ಮೂಲಕ ಮಾಡಬಹುದು ಎಂದು ಅವರು ಹೇಳುತ್ತಾರೆ” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಭೂಷಣ್,‌ “ಇದರಿಂದ ಅಕ್ರಮ ಹಣ ವರ್ಗಾವಣೆ ಆಗುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ” ಎಂದರು.

ಡಿಮ್ಯಾಟ್‌ ವಿಧಾನದ ಮೂಲಕವಾದರೂ ಅಂಥ ದೇಣಿಗೆ ಅನಾಮಿಕವಾಗಿರಬಹುದು ಎಂಬ ಸಿಜೆಐ ಪ್ರತಿಕ್ರಿಯೆಗೆ ಭೂಷಣ್‌ ಅವರು “ಅದು ಅನಾಮಿಕವಾದರೆ ಅದು ನೇರವಾದ ಲಂಚಗುಳಿತನವಾಗುತ್ತದೆ. ರಾಜಕೀಯ ಪಕ್ಷಗಳಿಂದ ಪರೋಕ್ಷವಾಗಿ ಬೇರೊಂದನ್ನು ಪಡೆಯಲು ದೇಣಿಗೆ ನೀಡುವ ಸಾಧ್ಯತೆ ಇರುತ್ತದೆ” ಎಂದರು.

ಹಣಕಾಸು ಮಸೂದೆ 2017 ಅನ್ನು ಉಲ್ಲೇಖಿಸಿದ ಭೂಷಣ್‌ ಅವರು ಚುನಾವಣಾ ಬಾಂಡ್‌ ಯೋಜನೆ ಜಾರಿಗೆ ಇದು ಹೇಗೆ ನೆರವಾಯಿತು ಎಂಬುದನ್ನು ವಿವರಿಸಿದರು. ಅದು ಹಣಕಾಸು ಮಸೂದೆಯಾಗದೇ ಇದ್ದರೂ ಹಣಕಾಸು ಮಸೂದೆ ಎಂದು ಅದಕ್ಕೆ ಒಪ್ಪಿಗೆ ನೀಡಲಾಗಿತ್ತು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಅವರು “ನಿಮ್ಮ ವಾದ ಸರಿಯಾಗಿದ್ದರೆ ಇಡೀ ಕಾನೂನನ್ನು ನಾವು ರದ್ದುಗೊಳಿಸಬೇಕಾಗುತ್ತದೆ. ಇದನ್ನು ಮಧ್ಯಂತರ ಮನವಿಯಲ್ಲಿ ಹೇಗೆ ನಿರ್ಧರಿಸಲು ಸಾಧ್ಯ?” ಎಂದರು.

ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ ಸಂಬಂಧಿಸಿದಂತೆ ಹಿಂದೆ ನಿರ್ದೇಶನಗಳನ್ನು ನೀಡಲಾಗಿದೆ ಎಂಬ ನ್ಯಾಯಾಲಯದ ಪ್ರತಿಕ್ರಿಯೆಗೆ ಅವುಗಳನ್ನು ಸರಿಯಾಗಿ ಪಾಲಿಸಲಾಗುತ್ತಿಲ್ಲ ಎಂದು ಭೂಷಣ್‌ ಹೇಳಿದರು. ಯೋಜನೆಗೆ ತಡೆ ನೀಡುವಂತೆ ಭೂಷಣ್‌ ಅವರು ಕೋರಿದಾಗ ಸಿಜೆಐ ಅವರು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರನ್ನು ಸರ್ಕಾರ ಚುನಾವಣಾ ಬಾಂಡ್‌ಗಳನ್ನು ನೀಡಲಿದೆಯೇ ಎಂದು ಪ್ರಶ್ನಿಸಿದರು. ಚುನಾವಣಾ ಆಯೋಗ ಅನುಮತಿಸಿದ ಬಳಿಕ ಏಪ್ರಿಲ್‌ 1-10ರ ವರೆಗೆ ಚುನಾವಣಾ ಬಾಂಡ್‌ಗಳನ್ನು ವಿತರಿಸಲಾಗುತ್ತದೆ ಎಂದು ವೇಣುಗೋಪಾಲ್‌ ಹೇಳಿದರು.

ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಎ ಜಿ ವೇಣುಗೋಪಾಲ್‌ ಅವರು ಕಾನೂನುಬದ್ಧವಾದ ಹಣವು (ವೈಟ್‌ ಮನಿ) ದೇಣಿಗೆಯಾಗಿ ಬ್ಯಾಂಕ್‌ ಮೂಲಕ ಬಂದು ಚೆಕ್‌ ಅಥವಾ ಡಿಡಿಯಲ್ಲಿ ಪಾವತಿಯಾಗುತ್ತದೆ ಎಂದರು.

ದೇಣಿಗೆ ನೀಡುವವರ ಗುರುತಿನ ಬಗ್ಗೆ ಪ್ರತಿಕ್ರಿಯಿಸಿದ ಎಜಿ ಅವರು “ಬಾಂಡ್‌ನಲ್ಲಿ ದೇಣಿಗೆ ನೀಡುವವರ ಹೆಸರು ಅಥವಾ ಫಲಾನುಭವಿಗಳ ಹೆಸರು ಹೊಂದಿರುವುದಿಲ್ಲ. ಇದೊಂದು ದಾಖಲೆಯಾಗಿದ್ದು, ಅದನ್ನು ಯಾರು ಖರೀದಿಸಿದರು ಮತ್ತು ಅದನ್ನು ಯಾರಿಗೆ ನೀಡಿದರು ಎಂಬುದನ್ನು ಬಹಿರಂಗಪಡಿಸುವುದಿಲ್ಲ… ಕಪ್ಪು ಹಣ ರೋಗ ಎಂದು ಮಾಜಿ ಅರ್ಥ ಸಚಿವ ದಿವಂಗತ ಅರುಣ್‌ ಜೇಟ್ಲಿ ಈ ನಿರ್ಧಾರ ಮಾಡಿದರು” ಎಂದರು.

ಆಗ ಮಧ್ಯಪ್ರವೇಶಿಸಿದ ಸಿಜೆಐ ಬೊಬ್ಡೆ ಅವರು “ಕೆಲವು ರಾಜಕೀಯ ಪಕ್ಷಗಳು ತಮ್ಮ ಕಾರ್ಯಸೂಚಿಯಲ್ಲಿ ಹಿಂಸೆಯನ್ನು ಪ್ರತಿಪಾದಿಸುತ್ತವೆ. ರಾಜಕೀಯ ಪಕ್ಷ ಭಯೋತ್ಪಾದನಾ ಕಾರ್ಯಾಚರಣೆಗೆ ದೇಣಿಗೆ ನೀಡಲಾಗದೇ? ಬಾಂಡ್‌ ಪಡೆದ ಪಕ್ಷವು ಅದನ್ನು ಗಲಭೆಯಾಗಿ ಪರಿವರ್ತನೆಯಾಗುವ ಪ್ರತಿಭಟನೆಗೆ ಬಳಸಲು ಸಾಧ್ಯವಿಲ್ಲವೇ?” ಎಂದರು.

“ಒಂದು ಪಕ್ಷ ₹100 ಕೋಟಿ ಚುನಾವಣಾ ಬಾಂಡ್‌ ಖರೀದಿಸಿದರೆ ಅದನ್ನು ಕಾನೂನುಬಾಹಿರ ಉದ್ದೇಶ ಅಥವಾ ಗಲಭೆ ಸೃಷ್ಟಿಸಲು ಬಳಸುವುದಿಲ್ಲ ಎಂಬುದಕ್ಕೆ ಖಾತರಿ ಏನು? ಎಂದರು. ಇದಕ್ಕೆ ಎಜಿ ಅವರು “ಎಲ್ಲಾ ಪಕ್ಷಗಳು ತಮ್ಮ ಆದಾಯ ತೆರಿಗೆ ದಾಖಲೆ ಸಲ್ಲಿಸಬೇಕು. ಕಮ್ಯುನಿಸ್ಟ್‌ ಪಕ್ಷ ಮತ್ತು ಒಂದು ರಾಷ್ಟ್ರೀಯ ಪಕ್ಷ ಹೊರತುಪಡಿಸಿ ಯಾವೊಂದು ಪಕ್ಷವೂ ಆದಾಯ ತೆರಿಗೆ ಘೋಷಿಸಿಲ್ಲ. ಕಾಂಗ್ರೆಸ್‌ ಸಹ ದಾಖಲೆ ಸಲ್ಲಿಸಿಲ್ಲ. ನೀವು ತೀರ್ಪು ನೀಡಿದ ಬಳಿಕ ಎಲ್ಲರೂ ಅದನ್ನು ಸಲ್ಲಿಸಲು ಆರಂಭಿಸಿದ್ದಾರೆ. ಹಾಗಾಗಿ ದುರ್ಬಳಕೆಯ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದರು.

Also Read
ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ: ಚುನಾವಣಾ ಬಾಂಡ್‌ ಪ್ರಶ್ನಿಸಿರುವ ಮನವಿ ತುರ್ತು ವಿಚಾರಣೆಗೆ ಎಡಿಆರ್‌ ಕೋರಿಕೆ

ಚುನಾವಣಾ ಬಾಂಡ್‌ಗಳ ಮೂಲಕ ಸ್ವೀಕರಿಸಲಾದ ನಿಧಿಯು ಕಾನೂನುಬದ್ಧವಾದ ಹಣವಾಗಿದ್ದು, ಅದನ್ನು ಚೆಕ್‌ ಅಥವಾ ಡಿಮ್ಯಾಂಡ್‌ ಡ್ರಾಫ್ಟ್‌ ಮೂಲಕ ನೀಡಲಾಗುತ್ತದೆ. ಇದಕ್ಕಾಗಿ 'ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ' (ಕೆವೈಸಿ) ನಿಯಮಾವಳಿಗಳನ್ನು ಅನುಸರಿಸಲಾಗುತ್ತದೆ ಎಂದು ವೇಣುಗೋಪಾಲ್‌ ಮತ್ತು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಇದಕ್ಕೆ ಭೂಷಣ್‌ ಅವರು “ಮೂಲದಲ್ಲಿ ಕೊಂಡವರು ಅದನ್ನು ನಗದಿನ ರೂಪದಲ್ಲಿ ಕೊಳ್ಳಲು ಸಾಧ್ಯವಿಲ್ಲ. ಆದರೆ, ಆನಂತರ ಅದನ್ನು ನಗದಿನ ರೂಪದಲ್ಲಿ ಇತರರಿಗೆ ಮಾರಾಟ ಮಾಡದಿರಲು ಯಾವುದೇ ನಿಯಂತ್ರಣವಿಲ್ಲ. ಬಹಳಷ್ಟು ಹಂತಗಳಲ್ಲಿ ಅನಾಮಿಕತೆ ಇದೆ" ಎಂದರು.

ವಿಚಾರಣೆಯ ಅಂತಿಮ ಹಂತದಲ್ಲಿ ಚುನಾವಣಾ ಬಾಂಡ್‌ಗೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ದಾಖಲೆಯಲ್ಲಿ ಚುನಾವಣಾ ಆಯೋಗವು ತನ್ನ ಅಭಿಪ್ರಾಯ ಸಲ್ಲಿಸಿತು.

ಅಂತಿಮವಾಗಿ ಯೋಜನೆಯ ದುರ್ಬಳಕೆಯ ಸಾಧ್ಯತೆಯ ಬಗ್ಗೆ ಗಮನಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಪೀಠವು ಈ ಸಂಬಂಧದ ಆದೇಶವನ್ನು ಕಾಯ್ದಿರಿಸಿದೆ. ಚುನಾವಣಾ ಬಾಂಡ್‌ ಯೋಜನೆ ಪ್ರಶ್ನಿಸಿ 2017ರಲ್ಲಿ ತಾನು ಸಲ್ಲಿಸಿರುವ ರಿಟ್‌ ಮನವಿಗಳನ್ನು ತುರ್ತು ವಿಚಾರಣೆಗೆ ನಿಗದಿಗೊಳಿಸುವಂತೆ ಕೋರಿ ಮಾರ್ಚ್‌ 9ರಂದು ಎಡಿಆರ್‌ ಮನವಿ ಸಲ್ಲಿಸಿತ್ತು.

Related Stories

No stories found.
Kannada Bar & Bench
kannada.barandbench.com