ರಾಜಸ್ಥಾನದ ಜೋಜರಿ ನದಿ ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಪ್ರಕರಣದ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸುವಂತೆ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಗೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿದೆ.
"ಗೌರವಾನ್ವಿತ ಸಿಜೆಐ ಅವರು ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸುತ್ತಾರೆ " ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು ತಿಳಿಸಿದರು.
ಯಾವುದೇ ನಿರ್ದಿಷ್ಟ ನದಿಯ ಮಾಲಿನ್ಯದ ಬಗ್ಗೆ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆಯೇ ಅಥವಾ ಒಂದಕ್ಕಿಂತ ಹೆಚ್ಚು ನದಿಗಳ ಮಾಲಿನ್ಯದ ಬಗ್ಗೆ ಮೊಕದ್ದಮೆ ದಾಖಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆನ್‌ಲೈನ್ ಪರಿಸರ ಪತ್ರಿಕೆಯಾದ ಮೊಂಗಾಬೇ ಇಂಡಿಯಾವು ಜೋಜರಿ ನದಿಯಲ್ಲಿ ಉಂಟಾಗಿರುವ ಮಾಲಿನ್ಯದ ಬಗ್ಗೆ ಇತ್ತೀಚೆಗೆ ವರದಿ ಮಾಡಿತ್ತು . ಜೋಜರಿ ನದಿ ಕಲುಷಿತಗೊಂಡ ಪರಿಣಾಮ ಕಳೆದ ಎರಡು ದಶಕಗಳಿದ ರಾಜಸ್ಥಾನದ 50 ಹಳ್ಳಿಗಳು ಹಾಗೂ ಕುಗ್ರಾಮಗಳು ತೊಂದರೆಗೀಡಾಗಿವೆ ಎಂದು ಅದು ಆತಂಕ ವ್ಯಕ್ತಪಡಿಸಿತ್ತು.