Supreme Court 
ಸುದ್ದಿಗಳು

[ಕೋವಿಡ್]‌ ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್; ಅಮಿಕಸ್ ‌ಕ್ಯೂರಿಯಾಗಿ ಹರೀಶ್‌ ಸಾಳ್ವೆ

ದೇಶದ ವಿವಿಧ ಹೈಕೋರ್ಟ್‌ಗಳ ಮುಂದಿರುವ ಕೋವಿಡ್‌ ಸಂಬಂಧಿತ ಪ್ರಕರಣಗಳನ್ನು ತನ್ನೆಡೆಗೆ ವರ್ಗಾಯಿಸಿಕೊಳ್ಳಬೇಕೆ ಬೇಡವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದ ಸರ್ವೋಚ್ಚ ನ್ಯಾಯಾಲಯ.

Bar & Bench

ಕೋವಿಡ್‌ ಸಾಂಕ್ರಾಮಿಕತೆಯಿಂದ ಉದ್ಭವಿಸುತ್ತಿರುವ ಸಮಸ್ಯೆಗಳು ಮತ್ತು ವಿವಿಧ ರಾಜ್ಯಗಳಲ್ಲಿ ರೋಗ ನಿರ್ವಹಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಸದರಿ ಪ್ರಕರಣದಲ್ಲಿ ನ್ಯಾಯಾಲಯದ ಮಿತ್ರನಾಗಿ (ಅಮಿಕಸ್‌ ಕ್ಯೂರಿ) ಕೆಲಸ ಮಾಡಲು ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರನ್ನು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಪೀಠ ನೇಮಿಸಿದೆ.

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತಹ ಸಮಸ್ಯೆಗಳ ಕುರಿತು ದೇಶದ ವಿವಿಧ ರಾಜ್ಯಗಳಲ್ಲಿ ಆರು ಹೈಕೋರ್ಟ್‌ಗಳು ನಡೆಸುತ್ತಿರುವ ವಿಚಾರಣೆಗಳು ಗೊಂದಲ ಸೃಷ್ಟಿಸುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

“ನ್ಯಾಯಾಲಯವಾಗಿ ಕೆಲವು ವಿಚಾರಗಳನ್ನು ನಾವು ಸ್ವಯಂಪ್ರೇರಿತವಾಗಿ ಪರಿಗಣಿಸಲು ನಿರ್ಧರಿಸಿದ್ದೇವೆ. ದೆಹಲಿ, ಬಾಂಬೆ, ಸಿಕ್ಕಿಂ, ಮಧ್ಯಪ್ರದೇಶ, ಕಲ್ಕತ್ತಾ ಮತ್ತು ಅಲಾಹಾಬಾದ್‌‌ ಸೇರಿದಂತೆ ಆರು ಹೈಕೋರ್ಟ್‌ಗಳು ಕೋವಿಡ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿವೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಹೈಕೋರ್ಟ್‌ಗಳು ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿವೆ. ಇದು ಗೊಂದಲಕ್ಕೆ ಮತ್ತು ಸಂಪನ್ಮೂಲ ಪಲ್ಲಟಕ್ಕೆ ಕಾರಣವಾಗುತ್ತಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಹೀಗಾಗಿ ಕೆಳಗಿನ ನಾಲ್ಕು ವಿಚಾರಗಳಿಗೆ ಸಂಬಂಧಿಸಿದಂತೆ ಪೀಠವು ನೋಟಿಸ್‌ ಜಾರಿ ಮಾಡಲಿದೆ:

  1. ಆಮ್ಲಜನಕ ಪೂರೈಕೆ

  2. ಅಗತ್ಯ ಔಷಧಗಳ ಪೂರೈಕೆ

  3. ಲಸಿಕೆಯ ವಿಧಿ-ವಿಧಾನ

  4. ಲಾಕ್‌ಡೌನ್‌ ಘೋಷಿಸಲು ಇರುವ ಅಧಿಕಾರ

“ಲಾಕ್‌ಡೌನ್‌ ಘೋಷಿಸುವ ಅಧಿಕಾರ ರಾಜ್ಯಗಳಿಗೆ ಇರಬೇಕು ಅದು ನ್ಯಾಯಾಂಗದ ನಿರ್ಣಯವಾಗಬಾರದು ಎಂಬುದು ನಮ್ಮ ನಿಲುವು. ಈ ವಿಚಾರಗಳಿಗೆ ಸಂಬಂಧಿಸಿದಂತೆ ನಾವು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡುತ್ತೇವೆ” ಎಂದು ಪೀಠ ಹೇಳಿದೆ.

ಮುಂದಿನ ದಿನಗಳಲ್ಲಿ ಈ ವಿಚಾರಗಳ ಕುರಿತ ಪ್ರಕರಣಗಳನ್ನು ತನಗೆ ವರ್ಗಾಯಿಸಿಕೊಳ್ಳಬೇಕೆ ಎಂಬುದನ್ನು ಪರಿಶೀಲಿಸುವುದಾಗಿ ನ್ಯಾಯಾಲಯ ಹೇಳಿದೆ. ಸದರಿ ವಿಚಾರಗಳನ್ನು ಸುಪ್ರೀಂ ಕೋರ್ಟ್‌ ತನ್ನ ವ್ಯಾಪ್ತಿಗೆ ತೆಗೆದುಕೊಂಡಿರುವುದರಿಂದ ಈ ವಿಚಾರಗಳ ಕುರಿತು ಹೈಕೋರ್ಟ್‌ಗಳಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರಶ್ನಿಸಿದರು.

“ರಾಷ್ಟ್ರೀಯ ಯೋಜನೆಯನ್ನು ನೀವು ಮಂಡಿಸಬಹುದು. ಸದ್ಯಕ್ಕೆ ಯಾವುದೇ ಆದೇಶವನ್ನು ನಾವು ಸೂಪರ್‌ಸೀಡ್‌ ಮಾಡುತ್ತಿಲ್ಲ. ಯೋಜನೆಯ ಕುರಿತು ನೀವು ಹೈಕೋರ್ಟ್‌ಗಳಿಗೆ ವಿವರಿಸಬಹುದು,” ಎಂದು ನ್ಯಾಯಮೂರ್ತಿ ರವೀಂದ್ರ ಭಟ್‌ ಹೇಳಿದರು.

ಹೈಕೋರ್ಟ್‌ಗಳ ಮುಂದಿರುವ ಪ್ರಕರಣಗಳನ್ನು ತನ್ನತ್ತ ವರ್ಗಾಯಿಸಿಕೊಳ್ಳಬೇಕೆ ಎನ್ನುವುದರ ಕುರಿತು ಸುಪ್ರೀಂ ಕೋರ್ಟ್‌ ಮುಂದಿನ ಹಂತದಲ್ಲಿ ನಿರ್ಧರಿಸಲಿದೆ ಎಂದು ಸಿಜೆಐ ಬೊಬ್ಡೆ ಹೇಳಿದರು.

ನಾಳೆಯು ಪ್ರಕರಣದ ವಿಚಾರಣೆ ನಡೆಯಲಿದ್ದು, ಕೇಂದ್ರ ಸರ್ಕಾರ ಮತ್ತು ಅಮಿಕಸ್‌ ಕ್ಯೂರಿ ವಾದವನ್ನು ಪೀಠ ಆಲಿಸಲಿದೆ. “ಸ್ವಯಂಪ್ರೇರಿತವಾಗಿ ವಿಚಾರಗಳನ್ನು ಪರಿಗಣಿಸಿ ನಾವು ಪ್ರಕರಣ ದಾಖಲಿಸಿಕೊಂಡಿದ್ದು, ನಿಮಗೆ ನೋಟಿಸ್‌ ನೀಡುತ್ತಿದ್ದೇವೆ. ನೀವು ಮತ್ತು ಸಾಳ್ವೆ ಮಾತ್ರ ನಾಳೆ ಇರಲಿದ್ದೀರಿ” ಎಂದು ಸಿಜೆಐ ಬೊಬ್ಡೆ ಹೇಳಿದರು.

“ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣ ಪರಿಗಣಿಸಿದೆ ಎಂದು ನಾವು ಹೈಕೋರ್ಟ್‌ಗಳಿಗೆ ವಿವರಿಸುತ್ತೇವೆ” ಎಂದು ಮೆಹ್ತಾ ಹೇಳಿದರು.