ನಾಗಪುರದಲ್ಲಿ ಆಮ್ಲಜನಕ, ರೆಮ್‌ಡಿಸಿವಿರ್‌ ಪೂರೈಕೆಗೆ ಆದೇಶಿಸಿದ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ

ರಾಜ್ಯದಾದ್ಯಂತ ನ್ಯಾಯಸಮ್ಮತ ಮತ್ತು ಸರಿಸಮಾನ ಕೋವಿಡ್‌ ಔಷಧ ಮತ್ತು ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ಆದೇಶಿಸಿದೆ.
Nagpur Bench, COVID-19
Nagpur Bench, COVID-19
Published on

ಮಹಾರಾಷ್ಟ್ರದಲ್ಲಿ ಕೋವಿಡ್‌ ಸಾಂಕ್ರಾಮಿಕತೆ ಮತ್ತು ಅದರಿಂದ ಜನರು ಎದುರಿಸುತ್ತಿರುವ ಔಷಧಿ ಕೊರತೆಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ಬುಧವಾರ ತಡರಾತ್ರಿ ಹಲವಾರು ನಿರ್ದೇಶನಗಳನ್ನು ನೀಡಿದ್ದು, ಕೊರೊನಾ ಸೋಂಕಿತರಿಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಆದೇಶಿಸಿದೆ.

ಎರಡು ಮೂಲಭೂತ ವಿಚಾರಗಳಾದ ಆಸ್ಪತ್ರೆಗಳಿಗೆ ತುರ್ತಾಗಿ ಆಮ್ಲಜನಕದ ಪೂರೈಕೆ ಹಾಗೂ ಅಗತ್ಯವಾದಷ್ಟು ರೆಮ್‌ಡಿಸಿವಿರ್‌ ವಿತರಣೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎಸ್‌ ಬಿ ಶುಕ್ರೆ ಮತ್ತು ಎಸ್‌ ಎಂ ಮೋದಕ್‌ ಅವರಿದ್ದ ಪೀಠವು ರಾತ್ರಿ ಎಂಟು ಗಂಟೆಗೆ ನಡೆದ ವಿಶೇಷ ವಿಚಾರಣೆಯಲ್ಲಿ ನಿರ್ದೇಶನಗಳನ್ನು ನೀಡಿತು.

ನಾಗಪುರ ನಗರದಲ್ಲಿ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ದಾಖಲಾಗಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಪೀಠ ನಡೆಸಿತು.

ಆಮ್ಲಜನಕ ಪೂರೈಕೆ

ರಾಜ್ಯದಲ್ಲಿ ಆಮ್ಲಜನಕ ಪೂರೈಕೆ ಕೊರತೆಯಾಗಿದೆ. ನಾಗಪುರಕ್ಕೆ 166 ಮೆಟ್ರಿಕ್‌ ಟನ್‌ ಆಮ್ಲಜನಕ ಬೇಕಿದೆ. ವಿದರ್ಭ ಜಿಲ್ಲೆಗೆ 66 ಮೆಟ್ರಿಕ್‌ ಟನ್‌ ಆಮ್ಲಜನಕ ಬೇಕಿದೆ ಎಂದು ಮಧ್ಯಪ್ರವೇಶಕಾರರ ಪರ ವಕೀಲ ತುಷಾರ್‌ ಮಂಡ್ಲೇಕರ್‌ ಹೇಳಿದರು.

"ಭಿಲಾಯ್ ಉಕ್ಕಿನ ಘಟಕದಿಂದ ಲಿಕ್ವಿಡ್‌ ಆಮ್ಲಜನಕ ಪೂರೈಕೆಯಲ್ಲಿ ಕೊರತೆಯಾಗಿದೆ. “ಪರಿಸ್ಥಿತಿ ಹದಗೆಟ್ಟಿದೆ. ಲಿಕ್ವಿಡ್‌ ಆಮ್ಲಜನಕದ ಪೂರೈಕೆ ಹೆಚ್ಚಾಗುವುದರ ಬದಲಿಗೆ ಪೂರೈಕೆಯ ಕೊರತೆಯಾಗಿದೆ. ಮಹಾರಾಷ್ಟ್ರದಲ್ಲಿ ಆಮ್ಲಜನಕ ತೀವ್ರ ಕೊರತೆ ಉಂಟಾಗಿದೆ” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೇ ಎಂದಿನಂತೆ ನಾಗಪುರಕ್ಕೆ 110 ಮೆಟ್ರಿಕ್‌ ಟನ್‌ನಷ್ಟು ಆಮ್ಲಜನಕ ಪೂರೈಸುವಂತೆ ಭಿಲೈ ಉಕ್ಕಿನ ಘಟಕಕ್ಕೆ ಆದೇಶಿಸಿದೆ. “ನಾಗಪುರದಲ್ಲಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಾಸವಾಗಬಾರದು” ಎಂದು ಪೀಠ ಹೇಳಿದೆ.

ಆಮ್ಲಜನಕ ಕೊರತೆಯಾದರೆ ನಾಗಪುರದ ಆಹಾರ ಮತ್ತು ಔಷಧ ವಿಭಾಗದ ಜಂಟಿ ಆಯುಕ್ತ ಮತ್ತು ನ್ಯಾಯಾಲಯ ರಚಿಸಿರುವ ಕೋವಿಡ್‌ ಸಮಿತಿಗೆ ನೋಟಿಸ್‌ ಜಾರಿಗೊಳಿಸಬೇಕು ಎಂದು ಹೇಳಿದೆ.

ರೆಮ್‌ಡಿಸಿವಿರ್‌ ಔಷಧ ಪೂರೈಕೆ

ನಾಗಪುರದಲ್ಲಿ ಔಷಧ ಪೂರೈಕೆಗೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲಾಗುತ್ತಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯವು ಬುಧವಾರ ರಾತ್ರಿ 8 ಗಂಟೆಗೆ ವಿಶೇಷ ವಿಚಾರಣೆ ನಡೆಸಿತು.

Also Read
[ಆಮ್ಲಜನಕದ ಕೊರತೆ] ಕೇಂದ್ರ ಸರ್ಕಾರ ವಾಸ್ತವಕ್ಕೆ ಏಕೆ ಮುಖ ಮಾಡುತ್ತಿಲ್ಲ? ದೆಹಲಿ ಹೈಕೋರ್ಟ್‌ನಿಂದ ಕೇಂದ್ರಕ್ಕೆ ತಪರಾಕಿ

ನ್ಯಾಯಾಲಯ ಆದೇಶಿಸಿರುವ 10,000 ರೆಮ್‌ಡಿಸಿವಿರ್‌ ಬಾಟಲ್‌ಗಳ (ವೈಲ್ಸ್‌) ಪೈಕಿ ಕೆಲವನ್ನು ಬಿಡುಗಡೆ ಮಾಡಿ ಹಂಚಿಕೆ ಮಾಡಲಾಗಿದೆ ಎಂದು ನ್ಯಾಯಾಲಯದ ಗಮನಸೆಳೆಯಲಾಯಿತು. ರಾಜ್ಯದಲ್ಲಿರುವ ಎಲ್ಲಾ ಏಳು ಕಂಪೆನಿಗಳಿಂದ ಒಟ್ಟಾರೆಯಾಗಿ ಪ್ರತಿ ತಿಂಗಳಿಗೆ 88 ಲಕ್ಷ ರೆಮ್‌ಡಿಸಿವಿರ್ ಉತ್ಪಾದನೆಯಾಗುತ್ತಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಯು ಎಂ ಔರಂಗಬಾದ್ಕರ್‌ ಹೇಳಿದರು. ಇದು ಭಾರತದಲ್ಲಿ ಕೋವಿಡ್‌ ರೋಗಿಗಳ ಉಪಚಾರಕ್ಕೆ ಸಾಕಾಗಲಿದೆ ಎಂದು ಮಾಹಿತಿ ನೀಡಿದರು.

ವಿಶೇಷ ತುರ್ತು ವಿಚಾರಣೆ ನಡೆಸಿದ ಪೀಠವು “ನ್ಯಾಯದಾನದ ಈ ಕೊಠಡಿಯಲ್ಲಿ ಉಪಸ್ಥಿತರಿರುವ ಮೂಲಕ ಇಲ್ಲಿರುವ ಎಲ್ಲರೂ ನ್ಯಾಯದಾನದ ಮಹತ್ವವನ್ನು ಹೆಚ್ಚಿಸಿದ್ದಾರೆ” ಎಂದ ಹೇಳಿತು. ಶುಕ್ರವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ಮುಂದುವರಿಯಲಿದೆ.

Kannada Bar & Bench
kannada.barandbench.com