Lawyers, Supreme Court 
ಸುದ್ದಿಗಳು

ಸೆ. 1ರಿಂದ ಭೌತಿಕ ವಿಚಾರಣೆ ಆರಂಭಿಸಲಿರುವ ಸುಪ್ರೀಂ ಕೋರ್ಟ್: ಹೈಬ್ರಿಡ್ ವಿಧಾನಕ್ಕೂ ಅವಕಾಶ

ಭೌತಿಕ ವಿಚಾರಣೆಗೆ (ಹೈಬ್ರಿಡ್ ವಿಧಾನದೊಂದಿಗೆ) ಪಟ್ಟಿ ಮಾಡಿದ ಪ್ರಕರಣದಲ್ಲಿ, ಒಂದು ಪಕ್ಷದ ಪರವಾಗಿ ಹಾಜರಾಗುವ ಎಲ್ಲಾ ವಕೀಲರು ಭೌತಿಕ ವಿಧಾನದ ಮೂಲಕ ಇಲ್ಲವೇ ವಿಡಿಯೋ/ಟೆಲಿ-ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬಹುದು ಎಂದು ಎಸ್ಒಪಿ ಹೇಳಿದೆ.

Bar & Bench

ಸೆಪ್ಟೆಂಬರ್ 1 ರಿಂದ ಹೈಬ್ರಿಡ್ ಆಯ್ಕೆಯೊಂದಿಗೆ ಭೌತಿಕ ವಿಚಾರಣೆ ಆರಂಭಿಸುವುದಾಗಿ ಸುಪ್ರೀಂಕೋರ್ಟ್ ಅಧಿಕೃತವಾಗಿ ಘೋಷಿಸಿದೆ. ನ್ಯಾಯಾಲಯದ ಪ್ರಧಾನ ಕಾರ್ಯದರ್ಶಿ ಈ ಕುರಿತು ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಬಿಡುಗಡೆ ಮಾಡಿದ್ದಾರೆ. ಸದ್ಯಕ್ಕೆ ಮಂಗಳವಾರ, ಬುಧವಾರ ಹಾಗೂ ಗುರುವಾರ ಅಂತಿಮ/ ನಿಯಮಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೌತಿಕ ವಿಚಾರಣೆ ಮೀಸಲಾಗಿರುತ್ತದೆ.

ಭೌತಿಕ ವಿಚಾರಣೆಗೆ (ಹೈಬ್ರಿಡ್ ಆಯ್ಕೆಯೊಂದಿಗೆ) ಪಟ್ಟಿ ಮಾಡಲಾದ ಪ್ರಕರಣದಲ್ಲಿ, ಒಂದು ಪಕ್ಷದ ಪರವಾಗಿ ಹಾಜರಾಗುವ ಎಲ್ಲಾ ವಕೀಲರು ಭೌತಿಕ ವಿಧಾನದ ಮೂಲಕ ಇಲ್ಲವೇ ವಿಡಿಯೋ/ಟೆಲಿ-ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಬಹುದು ಎಂದು ಎಸ್‌ಒಪಿ ಹೇಳಿದೆ.

ಸುಪ್ರೀಂಕೋರ್ಟ್‌ ಆನ್‌ಲೈನ್‌ ಪೋರ್ಟಲ್‌ನಲ್ಲಿ ಅಡ್ವೊಕೇಟ್‌ ಆನ್‌ ರೆಕಾರ್ಡ್‌ಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಬಳಿಕ ಅಂತಿಮ ವಿಚಾರಣೆ ಅಥವಾ ನಿಯಮಿತ ಪ್ರಕರಣಗಳ ವಾರದ ಪಟ್ಟಿ ತಯಾರಿಸಿದ 24 ಗಂಟೆಗಳಲ್ಲಿ ಅಥವಾ ಮರುದಿನ ಮಧ್ಯಾಹ್ನ 1:00 ಗಂಟೆ ಒಳಗಾಗಿ ತಮ್ಮ ಆಯ್ಕೆ ಭೌತಿಕ ವಿಚಾರಣೆಯೋ ಅಥವಾ ವರ್ಚುವಲ್‌ ವಿಚಾರಣೆಯೋ ಎಂಬುದನ್ನು ಸಲ್ಲಿಸಬೇಕು ಎಂದು ಎಸ್‌ಒಪಿ ತಿಳಿಸಿದೆ.

ಅಡ್ವೊಕೇಟ್‌ ಆನ್‌ ರೆಕಾರ್ಡ್‌ಗಳು ಅಥವಾ ಪಾರ್ಟಿ ಇನ್‌ ಪರ್ಸನ್‌ಗಳು ವಿಚಾರಣೆಗಾಗಿ ಒಮ್ಮೆ ಭೌತಿಕ ವಿಧಾನವನ್ನು ಆಯ್ಕೆ ಮಾಡಿಕೊಂಡ ಬಳಿಕ ವೀಡಿಯೊ ಅಥವಾ ಟೆಲಿ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲು ಅವಕಾಶ ಇರುವುದಿಲ್ಲ.