Supreme Court, Religious Conversion 
ಸುದ್ದಿಗಳು

ವಿವಿಧ ರಾಜ್ಯಗಳ ಮತಾಂತರ ಕಾಯಿದೆ ಸಿಂಧುತ್ವ ಪ್ರಶ್ನಿಸಿದ್ದ ಮನವಿಗಳನ್ನು ತನಗೆ ವರ್ಗಾಯಿಸಿಕೊಂಡ ಸುಪ್ರೀಂ ಕೋರ್ಟ್

ಆರು ವಾರಗಳ ಬಳಿಕ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು ಆಗ ಕಾಯಿದೆ ಜಾರಿ ತಡೆ ಕೋರಿರುವ ಅರ್ಜಿಯನ್ನು ಆಲಿಸುವುದಾಗಿ ನ್ಯಾಯಾಲಯ ತಿಳಿಸಿದೆ.

Bar & Bench

ಮತಾಂತರ ನಿಷೇಧಿಸಿ ವಿವಿಧ ರಾಜ್ಯಗಳಲ್ಲಿ ಜಾರಿಗೆ ಬಂದಿರುವ ಕಾಯಿದೆಗಳ ಸಿಂಧುತ್ವ ಪ್ರಶ್ನಿಸಿ ವಿವಿಧ ಹೈಕೋರ್ಟ್‌ಗಳಿಗೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ತನಗೆ ವರ್ಗಾಯಿಸಿಕೊಂಡಿದೆ [ ಸಿಟಿಜನ್ಸ್‌ ಫಾರ್‌ ಜಸ್ಟೀಸ್‌ ಅಂಡ್‌ ಪೀಸ್‌ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ ಮತ್ತು ಸಂಬಂಧಿತ ದಾವೆಗಳು].

ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ  ಮತ್ತು ಉತ್ತರಾಖಂಡ್ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಮತಾಂತರ ಕಾಯಿದೆ ಪ್ರಶ್ನಿಸಿ ಸಲ್ಲಿಸಲಾದ ಇದೇ ರೀತಿಯ ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಎದುರು ನೋಡುತ್ತಿವೆ.  

ಹೈಕೋರ್ಟ್‌ಗಳಲ್ಲಿಯೂ ಇದೇ ಬಗೆಯ ಅರ್ಜಿಗಳು ಬಾಕಿ ಇವೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠಕ್ಕೆ ಇಂದು ತಿಳಿಸಲಾಯಿತು.

ಆ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ತನಗೆ ವರ್ಗಾಯಿಸಿಕೊಳ್ಳಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಕೋರಿದರು.

ಮಧ್ಯಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರು ಪ್ರಕರಣದ ವರ್ಗಾವಣೆಗೆ ತಮ್ಮ ಸರ್ಕಾರದ ಅಭ್ಯಂತರ ಇಲ್ಲ ಎಂದರು. ಆಗ ನ್ಯಾಯಾಲಯವು ಎಲ್ಲಾ ಪ್ರಕರಣಗಳನ್ನು ತನಗೆ ವರ್ಗಾಯಿಸುವಂತೆ ಆದೇಶಿಸಿತು. ಆರು ವಾರಗಳ ಬಳಿಕ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು ಆಗ ಕಾಯಿದೆ ಜಾರಿ ತಡೆ ಕೋರಿರುವ ಅರ್ಜಿಯನ್ನು ಆಲಿಸುವುದಾಗಿ ಅದು ತಿಳಿಸಿದೆ.

ವಿವಿಧ ರಾಜ್ಯಗಳು ಜಾರಿಗೆ ತಂದ ಮತಾಂತರ ನಿಷೇಧ ಕಾಯಿದೆಗಳನ್ನು ಪ್ರಶ್ನಿಸಿ ಸಿಟಿಜನ್ಸ್ ಫಾರ್ ಪೀಸ್ ಅಂಡ್ ಜಸ್ಟೀಸ್ ಎಂಬ ಸರ್ಕಾರೇತರ ಸಂಸ್ಥೆ  ಅರ್ಜಿ ಸಲ್ಲಿಸಿತ್ತು.

ಕಾಯಿದೆಯಿಂದಾಗಿ ಮುಸ್ಲಿಮರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿ 2021ರಲ್ಲಿ ಜಾಮಿಯತ್‌ ಉಲಾಮಾ - ಇ - ಹಿಂದ್‌ ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ಅವಕಾಶ ನೀಡಿತ್ತು.

ಮತಾಂತರ ಕಾನೂನು ಉಲ್ಲಂಘಿಸಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರ ಕನಿಷ್ಠ 20 ವರ್ಷಗಳ ಶಿಕ್ಷೆ ವಿಧಿಸುತ್ತಿದೆ. ಪಿಎಂಎಲ್‌ಎ ಕಾಯಿದೆಯ ಷರತ್ತುಗಳನ್ನು ಕೂಡ ಈ ಕಾಯಿದೆಯಡಿಯ ಪ್ರಕರಣಗಳಿಗೆ ಅನ್ವಯಿಸಲಾಗುತ್ತಿದೆ. ಇದರಿಂದ ಅಂತರ್ಧರ್ಮೀಯ ವಿವಾಹವಾದವರಿಗೆ ಜಾಮೀನು ಸಿಗುವುದು ಬಹಳ ಕಷ್ಟವಾಗಿದೆ. ರಾಜಸ್ಥಾನ ಸರ್ಕಾರ ಕೂಡ ಕಾಯಿದೆ ಜಾರಿಗೆ ತಂದಿದೆ ಹಲವು ರಾಜ್ಯಗಳು ಈ ನಿಟ್ಟಿನಲ್ಲಿ ಸಾಗಿವೆ. ಕೋಮುವಾದಿ ಗುಂಪುಗಳು ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿವೆ ಎಂದು ಇಂದಿನ ವಿಚಾರಣೆ ವೇಳೆ ಹಿರಿಯ ವಕೀಲ ಸಿ ಯು ಸಿಂಗ್ ಅವರು ಆತಂಕ ವ್ಯಕ್ತಪಡಿಸಿದರು.

ವಕೀಲೆ ವೃಂದಾ ಗ್ರೋವರ್  ವಾದ ಮಂಡಿಸಿ " ಉತ್ತರ ಪ್ರದೇಶ ಕಾಯಿದೆ ಮತ್ತು ಹರಿಯಾಣ ಮತಾಂತರ ನಿಯಮಗಳನ್ನು ಪ್ರಶ್ನಿಸಿದ್ದೇವೆ ಮತ್ತು ಇನ್ನೊಂದು ಅರ್ಜಿಯಲ್ಲಿ, ಕಾಯಿದೆಗಳಿಗೆ ತಡೆಯಾಜ್ಞೆ ಕೋರಿದ್ದೇವೆ" ಎಂದರು. ಪ್ರತಿಕ್ರಿಯೆ ಸಲಿಸುವಂತೆ ಸಿಜೆಐ ಅವರು ಸಂಬಂಧಪಟ್ಟ ರಾಜ್ಯಗಳಿಗೆ ತಿಳಿಸಿದರು.

ಇದೇ ವೇಳೆ ವಾದ ಮಂಡಿಸಿದ ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ವಂಚನೆಯಿಂದ ಮಾಡಿದ ಮತಾಂತರ ನಿಷೇಧಿಸುವ ಆದೇಶವನ್ನು ನ್ಯಾಯಾಲಯ ನೀಡಬೇಕು ಎಂದು ಕೋರಿದರು. ಆದರೆ ವಂಚನೆಯ ಮತಾಂತರ ಎಂದು ನಿರ್ಧರಿಸುವವರು ಯಾರು ಎಂಬುದಾಗಿ ಸಿಜೆಐ ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪಿಸಿದ ಹಿರಿಯ ವಕೀಲ ಸಿಂಗ್‌ ಅವರು ನಾವಿಲ್ಲಿ ಕಾಯಿದೆಯ ಸಿಂಧುತ್ವ ಪ್ರಶ್ನಿಸುತ್ತಿದ್ದೇವೆ ಆದರೆ ಉಪಾಧ್ಯಾಯ ಅವರು ಕಾಯಿದೆ ಜಾರಿಗೆ ತರುವಂತೆ ಕೋರುತ್ತಿದ್ದಾರೆ ಎಂದರು. ಆಗ ಉಪಾಧ್ಯಾಯ ಅವರ ಅರ್ಜಿಯನ್ನು ವಿಚಾರಣೆಗೆ ಒಗ್ಗೂಡಿಸಿದ್ದ ಪ್ರಕರಣಗಳ ಪಟ್ಟಿಯಿಂದ ಹೊರ ತೆಗೆಯಲಾಗುತ್ತಿದೆ ಎಂದು ಸಿಜೆಐ ತಿಳಿಸಿದರು.