ಪೂಜಾ ಸ್ಥಳ ಕಾಯಿದೆ- 1991ಅನ್ನು ಜಾರಿಗೊಳಿಸುವಂತೆ ಕೋರಿ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಲ್ಲಿಸಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ನೀಡಿದೆ.
ಈ ಹಿಂದೆ ಜಾಮಿಯತ್ ಉಲಾಮಾ-ಇ-ಹಿಂದ್ ಸಲ್ಲಿಸಿದ್ದ ಅರ್ಜಿಯೊಂದಿಗೆ ಈ ಮನವಿಯನ್ನೂ ಆಲಿಸುವುದಾಗಿ ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ತಿಳಿಸಿದೆ. ಓವೈಸಿ ಪರ ವಕೀಲ ನಿಜಾಮುದ್ದೀನ್ ಪಾಷಾ ವಾದ ಮಂಡಿಸಿದ್ದರು. ಫೆಬ್ರವರಿಯಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಕಾಯಿದೆಯ ಸಾಂವಿಧಾನಿಕ ಸಿಂಧತ್ವ ಪ್ರಶ್ನಿಸಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ (ಪಿಐಎಲ್) ತನ್ನನ್ನು ಕಕ್ಷಿದಾರರನ್ನಾಗಿ ಮಾಡಿಕೊಳ್ಳುವಂತೆ ಜಾಮಿಯತ್ ಉಲಾಮಾ-ಇ-ಹಿಂದ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.
ಅಸ್ತಿತ್ವದಲ್ಲಿರುವ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ವಿವಾದಕ್ಕೆಳೆಸುವ ಪ್ರಕರಣಗಳಲ್ಲಿ ಅಂತಹ ಧಾರ್ಮಿಕ ಸ್ಥಳಗಳ ಸಮೀಕ್ಷೆಗಾಗಲಿ ಅಥವಾ ವಿವಾದದ ಸಂಬಂಧ ಅಂತಿಮ ಆದೇಶವನ್ನಾಗಲಿ ನೀಡದಂತೆ ಡಿಸೆಂಬರ್ 2024ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ಹಾಗೆ ಮೊಕದ್ದಮೆ ದಾಖಲಿಸುವುದನ್ನು ಕಾಯಿದೆ ಸ್ಪಷ್ಟವಾಗಿ ನಿಷೇಧಿಸುತ್ತದೆ ಎಂದು ನ್ಯಾಯಾಲಯ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿತ್ತು.
ಪರಿಣಾಮ ಮಂಗಳೂರಿನ ಮಳಲಿ ಮಸೀದಿ ಸೇರಿದಂತೆ ದೇಶದ ವಿವಿಧ ನ್ಯಾಯಾಲಯಗಳ ಮುಂದೆ ಇದ್ದ ಕನಿಷ್ಠ 18 ಪ್ರಕರಣಗಳ ವಿಚಾರಣೆ ಸ್ಥಗಿತಗೊಂಡಿತ್ತು. ವಿವಿಧ ವ್ಯಕ್ತಿಗಳು ಮತ್ತು ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಈ ದಾವೆಗಳು ಹಿಂದೂ ಪ್ರಚೀನ ದೇವಾಲಯಗಳಿದ್ದ ಜಾಗಗಳಲ್ಲಿ ಮಸೀದಿಗಳನ್ನು ನಿರ್ಮಿಸಲಾಗಿದೆ ಎಂದು ದೂರಿದ್ದವು.