ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಆಂತರಿಕ ಸಮಿತಿ ಸಲ್ಲಿಸಿದ್ದ ವರದಿ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಾಳೆ (ಜುಲೈ 28 ಸೋಮವಾರ) ವಿಚಾರಣೆ ನಡೆಸಲಿದೆ.ದೆ̤
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ.ಜಿ. ಮಸೀಹ್ ಅವರಿದ್ದ ಪೀಠ ಅರ್ಜಿ ಆಲಿಸಲಿದೆ.
ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ತಮ್ಮನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮಾಡಿರುವ ಶಿಫಾರಸು ಸಂವಿಧಾನ ಬಾಹಿರ ಮತ್ತು ಅದು ಅವರ ಅಧಿಕಾರ ವ್ಯಾಪ್ತಿ ಮೀರಿದ್ದು ಎಂಬುದಾಗಿ ಘೋಷಿಸಬೇಕು ಎಂದು ನ್ಯಾ. ವರ್ಮಾ ಮನವಿ ಮಾಡಿದ್ದಾರೆ.
ಯಾವುದೇ ಔಪಚಾರಿಕ ದೂರು ಇಲ್ಲದಿದ್ದರೂ ತಮ್ಮ ವಿರುದ್ಧ ಆಂತರಿಕ ಸಮಿತಿ ವರದಿ ನೀಡಿರುವುದು ಅನುಚಿತ ಮತ್ತು ಅಮಾನ್ಯವಾದುದು. ಅಲ್ಲದೆ ಘಟನೆಗೆ ಸಂಬಂಧಿಸಿದ ವಿವರಗಳನ್ನು ಸುಪ್ರೀಂ ಕೋರ್ಟ್ ಪತ್ರಿಕಾ ಪ್ರಕಟಣೆ ಮೂಲಕ ಬಹಿರಂಗಪಡಿಸಿದ್ದರಿಂದ ತಾವು ಮಾಧ್ಯಮ ವಿಚಾರಣೆಗೆ ತುತ್ತಾಗುವಂತಾಯಿತು ಎಂದು ಅವರು ದೂರಿದ್ದಾರೆ.
ಸಮಿತಿ ನಡೆಸಿದ ವಿಚಾರಣೆಗಳು ಸ್ವಾಭಾವಿಕ ನ್ಯಾಯ ತತ್ವಗಳನ್ನು ಉಲ್ಲಂಘಿಸಿವೆ ಎಂದು ಅವರು ಆರೋಪಿಸಿದ್ದಾರೆ. ಸಮಿತಿ ತನ್ನ ಯೋಜಿತ ಪ್ರಕ್ರಿಯೆಯನ್ನು ತಿಳಿಸದೆ ಇರುವುದರಿಂದ ಸಾಕ್ಷ್ಯಗಳನ್ನು ಒದಗಿಸುವ ಅವಕಾಶ ನಿರಾಕರಿಸಿದೆ ಎಂದು ಅವರು ವಾದಿಸಿದ್ದಾರೆ.
ತಮ್ಮ ನಿವಾಸದಲ್ಲಿ ನಗದು ಪತ್ತೆಯಾದ ಆರೋಪದ ಕುರಿತು, ಅದು ಯಾರಿಗೆ ಸೇರಿದೆ ಮತ್ತು ಎಷ್ಟು ಹಣ ಕಂಡುಬಂದಿದೆ ಎಂಬುದನ್ನು ನಿರ್ಧರಿಸುವುದು ಅತ್ಯಗತ್ಯ. ಆದರೆ ಸಮಿತಿ ಅದಕ್ಕೆ ಉತ್ತರ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಅನಗತ್ಯವಾಗಿ ಗಡುವಿನೊಳಗೆ ತಾನು ರಾಜೀನಾಮೆ ನೀಡಬೇಕು ಅಥವಾ ಸ್ವಯಂಪ್ರೇರಿತ ನಿವೃತ್ತಿ ಪಡೆಯಬೇಕು ಎಂದು ಅಂದಿನ ಸಿಜೆಐ ಖನ್ನಾ ಅವರು ಆರೋಪಿಸಿದ್ದು ಪದಚ್ಯುತಿ ಪ್ರಕ್ರಿಯೆ ಆರಂಭಿಸುವ ಎಚ್ಚರಿಕೆಯನ್ನೂ ನೀಡಿದ್ದರು ಎಂದಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಪ್ರಸ್ತುತ ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗವಾಗಿರುವ ನ್ಯಾ. ವರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಈಚೆಗೆ ಹಾಲಿ ಸಿಜೆಐ ಬಿ ಆರ್ ಗವಾಯಿ ಅವರು ಹಿಂದೆ ಸರಿದಿದ್ದರು.
"ನಾನು ಕೂಡ ಸಮಿತಿಯ ಭಾಗವಾಗಿದ್ದರಿಂದ ಪ್ರಕರಣ ಕೈಗೆತ್ತಿಕೊಳ್ಳಲು ಸಾಧ್ಯವಾಗದು. ಆದರೆ ಅರ್ಜಿಯನ್ನು ಪಟ್ಟಿ ಮಾಡಲಾಗುತ್ತದೆ" ಎಂದು ಸಿಜೆಐ ಹೇಳಿದ್ದರು.
ಮಾಜಿ ಸಿಜೆಐ ಸಂಜೀವ್ ಖನ್ನಾ ಅವರ ಅಧಿಕಾರಾವಧಿಯಲ್ಲಿ ನ್ಯಾಯಮೂರ್ತಿ ವರ್ಮಾ ವಿರುದ್ಧ ಆಂತರಿಕ ಕ್ರಮ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ತಾವು ಭಾಗಿಯಾಗಿದ್ದನ್ನು ಸಿಜೆಐ ಗವಾಯಿ ಉಲ್ಲೇಖಿರುವ ಸಾಧ್ಯತೆಗಳಿವೆ.