
ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟ ನೋಟುಗಳ ಕಂತೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಆರೋಪ ಹೊರಿಸಿರುವ ಆಂತರಿಕ ಸಮಿತಿ ವರದಿಯನ್ನು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ವರ್ಮಾ ಅವರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ವಾಗ್ದಂಡನೆ ಪ್ರಸ್ತಾವನೆಯನ್ನು ತರಲು ಯೋಜಿಸುತ್ತಿದೆ ಎನ್ನಲಾಗುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ ತಮ್ಮ ಪದಚ್ಯುತಿಗೆ ಮಾಡಿದ ಶಿಫಾರಸನ್ನು ಅಸಾಂವಿಧಾನಿಕ ಮತ್ತು ಅತಿರೇಕದ ಕ್ರಮ ಎಂದು ಘೋಷಿಸಬೇಕೆಂದು ನ್ಯಾ. ವರ್ಮಾ ಕೋರಿದ್ದಾರೆ.
ನ್ಯಾಯಮೂರ್ತಿಗಳ ವಿರುದ್ಧದ ದೂರುಗಳ ವಿಚಾರಣೆಯ ಆಂತರಿಕ ಕಾರ್ಯವಿಧಾನವನ್ನು ನ್ಯಾಯಮೂರ್ತಿ ವರ್ಮಾ ಪ್ರಶ್ನಿಸಿದ್ದಾರೆ. ಇದು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ತೆಗೆದುಹಾಕಲು ಸಂಸತ್ತಿಗೆ ಮಾತ್ರವೇ ಅಧಿಕಾರವಿರುವ ಕಾನೂನನ್ನು "ಅವಮಾನಿಸುವ" ಸಮಾನಾಂತರವಾದ, ಸಾಂವಿಧಾನಿಕವಲ್ಲದ ಕಾರ್ಯವಿಧಾನವನ್ನು ಸೃಷ್ಟಿಸುತ್ತದೆ ಎಂದು ಆಕ್ಷೇಪಿಸಿದ್ದಾರೆ. ನ್ಯಾಯಾಧೀಶರ (ವಿಚಾರಣಾ) ಕಾಯ್ದೆ, 1968ರ ಅಡಿಯಲ್ಲಿ ಒದಗಿಸಲಾದ ಸುರಕ್ಷತೆಗಳನ್ನು ಆಂತರಿಕ ಕಾರ್ಯವಿಧಾನವು ಹೊಂದಿಲ್ಲ ಎಂದು ಅವರು ವಾದಿಸಿದ್ದಾರೆ.
ನ್ಯಾ. ವರ್ಮಾ ಅವರು ತಮ್ಮ ಅರ್ಜಿಯಲ್ಲಿ, ಆಂತರಿಕ ಸಮಿತಿಯು ನಗದು ಪತ್ತೆಯ ಬಗ್ಗೆ ತನಿಖೆ ನಡೆಸಿದ್ದರೂ, ನಗದು ಮಾಲೀಕತ್ವ ಮತ್ತು ದೃಢೀಕರಣವನ್ನು ಸ್ಥಾಪಿಸುವಲ್ಲಿ ವಿಫಲವಾಗಿದೆ. ಅಲ್ಲದೆ, ಅದು ಪುರಾವೆಯ ಹೊರೆಯನ್ನು ವರ್ಗಾಯಿಸಿದೆ ಎಂದಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಅರ್ಜಿಯಲ್ಲಿ, ನ್ಯಾಯಮೂರ್ತಿ ವರ್ಮಾ ಅವರು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಹೈಕೋರ್ಟ್ ನ್ಯಾಯಮೂರ್ತಿಗಳ ಸ್ಥಾನದಿಂದ ತಮ್ಮನ್ನು ತೆಗೆದುಹಾಕುವಂತೆ ಮಾಡಿದ ಶಿಫಾರಸನ್ನು ಅಸಾಂವಿಧಾನಿಕ ಮತ್ತು ಅತಿರೇಕದ ಕ್ರಮ ಎಂದು ಘೋಷಿಸಬೇಕೆಂದು ಕೋರಿದ್ದಾರೆ.
ನ್ಯಾಯಮೂರ್ತಿ ಯಶವಂತ್ ವರ್ಮಾ
ನ್ಯಾ. ವರ್ಮಾ ಅವರು ತಮ್ಮ ಅರ್ಜಿಯಲ್ಲಿ ಎತ್ತಿರುವ ಪ್ರಮುಖ 5 ಆಕ್ಷೇಪಗಳು ಹೀಗಿವೆ:
ನ್ಯಾಯಮೂರ್ತಿಗಳ ವಿರುದ್ಧದ ದೂರುಗಳನ್ನು ನಿರ್ವಹಿಸಲು 1999 ರಲ್ಲಿ ಸುಪ್ರೀಂ ಕೋರ್ಟ್ ಅಳವಡಿಸಿಕೊಂಡ ಆಂತರಿಕ ಕಾರ್ಯವಿಧಾನವು, ಸ್ವಯಂ ನಿಯಂತ್ರಣ ಮತ್ತು ಸತ್ಯಶೋಧನೆಯ ಉದ್ದೇಶಿತ ವ್ಯಾಪ್ತಿಯನ್ನು ಮೀರಿ ಅಸಮರ್ಥನೀಯವಾಗಿ ವಿಸ್ತರಿಸುತ್ತದೆ ಎಂದು ನ್ಯಾಯಮೂರ್ತಿ ವರ್ಮಾ ವಾದಿಸಿದ್ದಾರೆ.
ಸಂವಿಧಾನವು ಸುಪ್ರೀಂ ಕೋರ್ಟ್ ಅಥವಾ ಸಿಜೆಐ ಅವರಿಗೆ ಹೈಕೋರ್ಟ್‌ಗಳು ಅಥವಾ ಅವುಗಳ ನ್ಯಾಯಮೂರ್ತಿಗಳ ಮೇಲೆ ಯಾವುದೇ ಮೇಲ್ವಿಚಾರಣೆ ಅಥವಾ ಶಿಸ್ತಿನ ಅಧಿಕಾರವನ್ನು ನೀಡುವುದಿಲ್ಲ ಎಂದು ನ್ಯಾಯಮೂರ್ತಿ ವರ್ಮಾ ವಾದಿಸಿದ್ದಾರೆ. ಆಂತರಿಕ ಕಾರ್ಯವಿಧಾನದಂತಹ ಸ್ವಯಂ-ನಿಯಂತ್ರಕ ಕಾರ್ಯವಿಧಾನಗಳು ಹೈಕೋರ್ಟ್ ನ್ಯಾಯಾಧೀಶರ ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟ ಅಧಿಕಾರಾವಧಿಯನ್ನು ತಪ್ಪಿಸಲು ಅಥವಾ ಅತಿಕ್ರಮಿಸಲು ಸಾಧ್ಯವಿಲ್ಲ.
ಆಂತರಿಕ ಸಮಿತಿಯ ತನಿಖೆ ಅಮಾನ್ಯವಾಗಿದೆ, ನೈಸರ್ಗಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸಲಾಗಿದೆ. ಯಾವುದೇ ಔಪಚಾರಿಕ ದೂರು ಇಲ್ಲದೆ ಆಂತರಿಕ ಕ್ರಮಗಳನ್ನು ಅನ್ವಯಿಸುವುದು ಅನುಚಿತವಾಗಿದೆ. ಪ್ರಕರಣದ ಕೇಂದ್ರದಲ್ಲಿರುವ ಬೆಂಕಿ ಅವಘಡದ ವೇಳೆ ಪತ್ತೆಯಾದ ನಗದು ಹಣದ ಮೂಲ ಮತ್ತು ಮೌಲ್ಯವನ್ನು ಪತ್ತೆ ಮಾಡುವುದು ಅಗತ್ಯವಾಗಿದೆ. ಯಾರ ಹಣ ಮತ್ತು ಎಷ್ಟು ಹಣ ಎನ್ನುವುದನ್ನು ಪತ್ತೆ ಹಚ್ಚುವಲ್ಲಿ ಸಮಿತಿಯು ವಿಫಲವಾಗಿದೆ.
ನ್ಯಾಯಮೂರ್ತಿ ವರ್ಮಾ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಶಿಫಾರಸು ಮಾಡುವ ಮೊದಲು ಸಮಿತಿಯ ಅಂತಿಮ ವರದಿಯನ್ನು ಪರಿಶೀಲಿಸಲು ಸಿಜೆಐ ಖನ್ನಾ ಅವರಿಗೆ ಸಾಕಷ್ಟು ಸಮಯ ನೀಡಲಿಲ್ಲ ಎಂದು ವಾದಿಸಲಾಗಿದೆ.
ಮಾಧ್ಯಮ ವಿಚಾರಣೆಯ ಬಗ್ಗೆಯೂ ನ್ಯಾಯಮೂರ್ತಿ ವರ್ಮಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಘಟನೆಯನ್ನು ಹಿಂದೆಂದೂ ಮಾಡಿರದ ರೀತಿಯಲ್ಲಿ ಬಹಿರಂಗಪಡಿಸಿದ್ದರಿಂದ ತಾವು ಮಾಧ್ಯಮ ವಿಚಾರಣೆಗೊಳಪಡಬೇಕಾಯಿತು. ಇದರಿಂದ ನ್ಯಾಯಾಂಗ ಅಧಿಕಾರಿಯಾಗಿ ತಮ್ಮ ಖ್ಯಾತಿಗೆ ಹಾಗೂ ವೃತ್ತಿಜೀವನಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟಾಗಿದೆ ಎಂದು ವಾದಿಸಿದ್ದಾರೆ. ಈ ರೀತಿಯ ಸಾರ್ವಜನಿಕ ಬಹಿರಂಗಪಡಿಸುವಿಕೆಯು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ನಿಗದಿಪಡಿಸಿದ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಅವರು ಹೇಳಿದ್ದಾರೆ.
ಹಿನ್ನೆಲೆ: ನ್ಯಾ.ವರ್ಮಾ ಅವರ ದೆಹಲಿ ನಿವಾಸದಲ್ಲಿ ಮಾರ್ಚ್ 14ರ ಸಂಜೆ ಅಗ್ನಿ ಅವಗಢ ಸಂಭವಿಸಿತ್ತು. ಈ ವೇಳೆ ಅಗ್ನಿಶಾಮಕ ದಳ ಬೆಂಕಿ ನಂದಿಸುವಾಗ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿದೆ ಎಂಬ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ವಿಚಾರವಾಗಿ ನ್ಯಾ. ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.
ಘಟನೆಯ ತನಿಖೆಗಾಗಿ ಅಂದಿನ ಸಿಜೆಐ ಸಂಜೀವ್ ಖನ್ನಾ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಹಾಗೂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನೊಳಗೊಂಡ ಸಮಿತಿ ರಚಿಸಿದ್ದರು.
ಮಾರ್ಚ್ 25ರಂದು ತನಿಖೆ ಆರಂಭಿಸಿದ್ದ ಸಮಿತಿ ಮೇ4 ರಂದು ಅಂದಿನ ಸಿಜೆಐ ಖನ್ನಾ ಅವರಿಗೆ ವರದಿ ಸಲ್ಲಿಸಿತ್ತು. ನ್ಯಾ. ವರ್ಮಾ ಅವರು ರಾಜೀನಾಮೆ ನೀಡಬೇಕು ಇಲ್ಲವೇ ವಾಗ್ದಂಡನಾ ಪ್ರಕ್ರಿಯೆ ಎದುರಿಸಬೇಕು ಎಂದು ವರದಿ ಸ್ವೀಕರಿಸಿದ್ದ ನ್ಯಾ. ಖನ್ನಾ ತಿಳಿಸಿದ್ದರು. ಆದರೆ ನ್ಯಾ. ವರ್ಮಾ ಅವರು ರಾಜೀನಾಮೆ ನೀಡಲು ಒಪ್ಪದ ಹಿನ್ನೆಲೆಯಲ್ಲಿ ನ್ಯಾ. ವರ್ಮಾ ಅವರನ್ನು ವಜಾಗೊಳಿಸುವಂತೆ ತಿಳಿಸಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಅವರಿಗೆ ಪತ್ರ ಬರೆದಿದ್ದರು.