ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯದ ಸ್ಥಾನಮಾನ ದೊರಕಿಸಿಕೊಡುವಂತೆ ಕೋರಿರುವ ಅರ್ಜಿಯನ್ನು ಆಗಸ್ಟ್ 8ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಇಂದು ಸಿಜೆಐ ಬಿ ಆರ್ ಗವಾಯಿ ಅವರ ನೇತೃತ್ವದ ಪೀಠದೆದುರು ಪ್ರಕರಣ ಪ್ರಸ್ತಾಪಿಸಿದರು.
ರಾಜ್ಯದ ಸ್ಥಾನಮಾನ ಮರುಸ್ಥಾಪಿಸದೇ ಇರುವುದರಿಂದ ಕಾಶ್ಮೀರದ ಜನರ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂದು ಕಾಲೇಜು ಅಧ್ಯಾಪಕ ಜಹೂರ್ ಅಹ್ಮದ್ ಭಟ್ ಅರ್ಜಿ ಸಲ್ಲಿಸಿದ್ದರು.
ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ರಾಜ್ಯದ ಸ್ಥಾನಮಾನ ನೀಡುವ ಮೊದಲೇ ಚುನಾವಣೆ ನಡೆಸಿ ಶಾಸಕಾಂಗ ಸಭೆ ರಚಿಸಲು ಹೊರಡುವುದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಕಾಂಗ್ರೆಸ್ ಮತ್ತು ವಿಧಾನಸಭೆಯ ಕೆಲವು ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಸರ್ಕಾರ ಪ್ರಸ್ತುತ ಕಾಶ್ಮೀರದಲ್ಲಿ ಅಧಿಕಾರ ನಡೆಸುತ್ತಿದೆ.
ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ಕೆಲ ವರ್ಷಗಳ ಹಿಂದೆ ರದ್ದಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರೂಪಿಸಲಾಗಿತ್ತು. ಅದೇ ರಾಜ್ಯದಿಂದ ಲಡಾಖ್ ಪ್ರದೇಶವನ್ನು ಮತ್ತೊಂದು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲಾಗಿತ್ತು.
ಸಂವಿಧಾನದ 370ನೇ ರದ್ದತಿ ಎತ್ತಿಹಿಡಿದು ಡಿಸೆಂಬರ್ 2023ರಲ್ಲಿ ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಕೋರಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮೇ 2024ರಲ್ಲಿ ವಜಾಗೊಳಿಸಿತ್ತು.
ಸಂವಿಧಾನದ 370 ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ದಾರಿ ಮಾಡಿಕೊಟ್ಟ 2019ರ ಕಾನೂನಿನ ಸಿಂಧುತ್ವ ಕುರಿತು ನಿರ್ಧರಿಸಲು ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಕಳೆದ ವರ್ಷ ನಿರಾಕರಿಸಿತ್ತು.
ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತಾತ್ಕಾಲಿಕವಾದುದಾಗಿತ್ತು. ಈ ಪ್ರದೇಶಕ್ಕೆ ಮರಳಿ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂದಿದ್ದ ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರ ಹೇಳಿಕೆಯನ್ನು ನ್ಯಾಯಾಲಯ ಆಗ ದಾಖಲಿಸಿಕೊಂಡಿತ್ತು.