Supreme Court 
ಸುದ್ದಿಗಳು

ಉನ್ನಾವ್‌ ಪ್ರಕರಣ: ನಾಳೆ ಸೆಂಗರ್‌ ವಿರುದ್ಧದ ಮೇಲ್ಮನವಿ ಆಲಿಸಲಿರುವ ಸುಪ್ರೀಂ ಕೋರ್ಟ್ ರಜಾಕಾಲೀನ ಪೀಠ

ಪೊಕ್ಸೊ ಕಾಯಿದೆಯ ಸೆಕ್ಷನ್ 5(ಸಿ) ಅಡಿಯಲ್ಲಿ ತೀವ್ರ ಲೈಂಗಿಕ ಪ್ರವೇಶಿಕೆ ದೌರ್ಜನ್ಯ ಆರೋಪ ಸೆಂಗರ್ ವಿರುದ್ಧ ಸಾಬೀತಾಗಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿರುವುದು ಕಾನೂನುಬಾಹಿರ ಎಂಬುದಾಗಿ ಸಿಬಿಐ ವಾದಿಸಿದೆ.

Bar & Bench

ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿರುವ ದೆಹಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ನಾಳೆ (ಸೋಮವಾರ) ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ಆಲಿಸಲಿದೆ.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ರಜಾಕಾಲೀನ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ. ಪ್ರಸ್ತುತ ಸುಪ್ರೀಂ ಕೋರ್ಟ್‌ಗೆ ಚಳಿಗಾಲದ ರಜೆ ಇದ್ದು ನಿಯಮಿತ ಕಲಾಪಗಳು ಜನವರಿ 5ರಂದು ಪುನರಾರಂಭವಾಗಲಿವೆ.

ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಕುಲದೀಪ್ ಸಿಂಗ್ ಸೆಂಗರ್‌ ವಿರುದ್ಧ ಐಪಿಸಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಆರೋಪ ಸಾಬೀತಾಗಿ, ಡಿಸೆಂಬರ್ 2019ರಲ್ಲಿ ದೆಹಲಿ ವಿಚಾರಣಾ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಆದರೆ  ಶಿಕ್ಷೆ ಅಮಾನತು ಮಾಡಿ ದೆಹಲಿ ಹೈಕೋರ್ಟ್‌ನ ಡಿಸೆಂಬರ್ 23ರಂದು ನೀಡಿದ್ದ ಆದೇಶ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಪೊಕ್ಸೊ ಕಾಯಿದೆಯ ಸೆಕ್ಷನ್ 5(ಸಿ) ಅಡಿಯಲ್ಲಿ ತೀವ್ರ ಲೈಂಗಿಕ ಪ್ರವೇಶಿಕೆ ದೌರ್ಜನ್ಯ (ಅಗ್ರೆವೇಟೆಡ್ಪೆನೆಟ್ರೇಟಿವ್ ಸೆಕ್ಷುಯಲ್ ಅಸಾಲ್ಟ್ ) ಆರೋಪ ಸೆಂಗರ್ ವಿರುದ್ಧ ರೂಪುಗೊಂಡಿಲ್ಲ ಎಂದು ತಿಳಿಸಿದ್ದ ಹೈಕೋರ್ಟ್‌ ಆತನ ಬಿಡುಗಡೆಗೆ ಆದೇಶಿಸಿತ್ತು.

ಪೋಕ್ಸೊ ಕಾಯಿದೆಯ ಸೆಕ್ಷನ್ 5 ಪ್ರಕಾರ, ಸಾರ್ವಜನಿಕ ಹುದ್ದೆಯಲ್ಲಿರುವವರು, ಪೊಲೀಸ್ ಅಧಿಕಾರಿ, ಸಶಸ್ತ್ರ ಪಡೆ ಅಥವಾ ಭದ್ರತಾ ಪಡೆ ಸದಸ್ಯರು, ಆಸ್ಪತ್ರೆ ಅಥವಾ ಜೈಲು ಸಿಬ್ಬಂದಿ ಮುಂತಾದವರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಲ್ಲಿ ಅದನ್ನು ‘ತೀವ್ರ ಲೈಂಗಿಕ ಪ್ರವೇಶಿಕೆ ದೌರ್ಜನ್ಯ’ ಎಂದು ಪರಿಗಣಿಸಲಾಗುತ್ತದೆ. ಇಂತಹ ಅಪರಾಧಕ್ಕೆ ಕನಿಷ್ಠ 20 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗುತ್ತಿದ್ದು, ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದಾಗಿದೆ.

ಸೆಂಗರ್‌ ಸಾರ್ವಜನಿಕ ಸೇವಕನ ವ್ಯಾಖ್ಯಾನಕ್ಕೆ ಒಳಪಡುವ ವ್ಯಕ್ತಿ ಎಂಬ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯ ಅವನಿಗೆ ಈ ಶಿಕ್ಷೆ ವಿಧಿಸಿತ್ತು.

ಆದರೆ ಸೆಂಗರ್‌ ಪೋಕ್ಸೊ ಕಾಯಿದೆಯ ಸೆಕ್ಷನ್ 5(ಸಿ) ಅಥವಾ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(ಬಿ) ಅಡಿಯಲ್ಲಿ ಸಾರ್ವಜನಿಕ ಹುದ್ದೆಯಲ್ಲಿರುವವರು ಎಂದು ಪರಿಗಣಿತನಲ್ಲ ಎಂಬುದಾಗಿ ನ್ಯಾಯಮೂರ್ತಿಗಳಾದ ಸುಬ್ರಮಣಿಯಂ ಪ್ರಸಾದ್ ಮತ್ತು ಹರಿಶ್ ವೈದ್ಯನಾಥನ್ ಶಂಕರ್ ಅವರನ್ನೊಳಗೊಂಡ ದೆಹಲಿ ಹೈಕೋರ್ಟ್ ಪೀಠ  ಹೇಳಿತ್ತು

ಹೀಗೆಯೇ, ‘ವಿಶ್ವಾಸ ಅಥವಾ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿ’ ಎಂಬ ಅರ್ಥದಲ್ಲಿ ಪೋಕ್ಸೊ ಕಾಯಿದೆಯ ಸೆಕ್ಷನ್ 5(p) ವ್ಯಾಪಿಗೂ ಸೆಂಗರ್‌ ಕೃತ್ಯ ಒಳಪಡದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಆದರೆ ಪೋಕ್ಸೊ ಕಾಯಿದೆಯ ಸೆಕ್ಷನ್ 5(c) ಅಡಿಯಲ್ಲಿತೀವ್ರ ಲೈಂಗಿಕ ಪ್ರವೇಶಿಕೆ ದೌರ್ಜನ್ಯ ಅಪರಾಧ ಆತನಿಗೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಹೇಳಿರುವುದು ಕಾನೂನುಬಾಹಿರ ಎಂಬುದಾಗಿ ಸಿಬಿಐ ಸುಪ್ರೀಂ ಕೋರ್ಟ್ ಎದುರು ವಾದಿಸಿದೆ.

ಘಟನೆ ನಡೆದಾಗ ಹಾಲಿ ಶಾಸಕನಾಗಿದ್ದ ಸೆಂಗರ್‌ ಒಬ್ಬ ಸಂವಿಧಾನಾತ್ಮಕ ಹುದ್ದೆ ಹೊಂದಿದ ವ್ಯಕ್ತಿಯಾಗಿದ್ದು, ಸಾರ್ವಜನಿಕೆ ವಿಶ್ವಾಸ ಮತ್ತು ಜವಾಬ್ದಾರಿಯನ್ನು ಹೊಂದಿದ್ದಾನೆ. ಆದ್ದರಿಂದ ಅವನು ಸಾರ್ವಜನಿಕ ಸೇವಕನ ವ್ಯಾಖ್ಯಾನಕ್ಕೆ ಒಳಪಡುವವನಾಗಿದ್ದಾನೆ ಎಂದಿದೆ.

ಇದಲ್ಲದೆ, ಸೆಂಗರ್‌ ಪ್ರಭಾವಶಾಲಿ ವ್ಯಕ್ತಿಯಾಗಿರುವುದರಿಂದ ಆತನ ಬಿಡುಗಡೆ ದೂರುದಾರ ಯುವತಿ ಮತ್ತು ಅವಳ ಕುಟುಂಬದ ಭದ್ರತೆಗೆ ಅಪಾಯ ಉಂಟುಮಾಡಬಹುದು ಹಾಗೂ ನ್ಯಾಯ ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆ ತರಬಹುದು ಎಂದು ಸಿಬಿಐ ಆತಂಕ ವ್ಯಕ್ತಪಡಿಸಿದೆ.