ಡಾ.ಬಿ.ಆರ್.ಅಂಬೇಡ್ಕರ್, ಸುಪ್ರೀಂ ಕೋರ್ಟ್
ಡಾ.ಬಿ.ಆರ್.ಅಂಬೇಡ್ಕರ್, ಸುಪ್ರೀಂ ಕೋರ್ಟ್ 
ಸುದ್ದಿಗಳು

ಸಂವಿಧಾನ ದಿನದಂದು ಸುಪ್ರೀಂ ಕೋರ್ಟ್‌ನಲ್ಲಿ ಡಾ. ಬಿ ಆರ್‌ ಅಂಬೇಡ್ಕರ್ ಪ್ರತಿಮೆ ಅನಾವರಣ

Bar & Bench

ಸಂವಿಧಾನ ದಿನವಾದ ನವೆಂಬರ್ 26ರಂದು ಸುಪ್ರೀಂ ಕೋರ್ಟ್‌ನಲ್ಲಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಪ್ರತಿಮೆ ಅನಾವರಣಗೊಳ್ಳಲಿದೆ.

ಪ್ರಸ್ತುತ ಹರಿಯಾಣದ ಮನೇಸರ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರತಿಮೆಯನ್ನು ಶೀಘ್ರವೇ ಸುಪ್ರೀಂ ಕೋರ್ಟ್‌ಗೆ ಸಾಗಿಸಲಾಗುತ್ತದೆ.

ಸುಪ್ರೀಂ ಕೋರ್ಟ್ ಹುಲ್ಲುಹಾಸಿನಲ್ಲಿರುವ ಪ್ರತಿಮ ಪ್ರತಿಷ್ಠಾಪನಾ ಸ್ಥಳ

ಅಂಬೇಡ್ಕರ್‌ವಾದಿ ಆಂದೋಲನದೊಂದಿಗೆ ಗುರುತಿಸಿಕೊಂಡ ವಕೀಲರ ಗುಂಪು ಮಾಡಿದ ನಿರಂತರ ವಿನಂತಿಯ ಪರಿಣಾಮವಾಗಿ ಪ್ರತಿಮೆ ಸ್ಥಾಪನೆಯಾಗುತ್ತಿದೆ. ಪ್ರತಿಮೆ ಸ್ಥಾಪನೆ ಸಂಬಂಧ ಈ ವಕೀಲ ಸಮೂಹ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಅವರಿಗೆ ಪತ್ರ ಬರೆದಿತ್ತು. ಸುಪ್ರೀಂಕೋರ್ಟ್‌ ವಾದನಿರತ ವಕೀಲರ ಸಂಘ (ಎಸ್‌ಸಿಎಸಿಎ) ಕೂಡ ಪ್ರತಿಮೆ ಸ್ಥಾಪನೆಗೆ ವಿನಂತಿಸಿತ್ತು.

ತಮಿಳುನಾಡಿನ ನ್ಯಾಯಾಲಯಗಳು ಮತ್ತು ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಸಂತ ತಿರುವಳ್ಳುವರ್ ಹೊರತುಪಡಿಸಿ ಯಾವುದೇ ನಾಯಕರ ಛಾಯಾಚಿತ್ರ, ಪ್ರತಿಮೆ ಅಥವಾ ಭಾವಚಿತ್ರ ಅಳವಡಿಸುವಂತಿಲ್ಲ ಎಂದು ತಾನು ಈ ಹಿಂದೆ ನೀಡಿದ್ದ ತೀರ್ಪನ್ನು ಮದ್ರಾಸ್‌ ಹೈಕೋರ್ಟ್‌ ಪೂರ್ಣ ನ್ಯಾಯಾಲಯ ಏಪ್ರಿಲ್ 11ರಂದು ಪುನರುಚ್ಚರಿಸಿತ್ತು

ಈ ಹಿನ್ನೆಲೆಯಲ್ಲಿ ರಾಜ್ಯದ ನ್ಯಾಯಾಲಯಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವಂತೆ ವಿವಿಧ ವಕೀಲರ ಸಂಘಗಳು ಮಾಡಿದ್ದ ಮನವಿಯನ್ನು ಅದು ತಿರಸ್ಕರಿಸಿತ್ತು.

ನ್ಯಾಯಾಲಯಗಳಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಪ್ರದರ್ಶಿಸಲು ವಕೀಲ ಸಮುದಾಯ ಮಾಡಿದ್ದ ಮನವಿಯನ್ನು ತಿರಸ್ಕರಿಸಿದ್ದ ಅಕ್ಟೋಬರ್ 2008ರ ಹಿಂದಿನ ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್‌ ಪೂರ್ಣ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿರುವುದಾಗಿ ಜುಲೈ 7ರಂದು ರಿಜಿಸ್ಟ್ರಾರ್ ಜನರಲ್ ಹೊರಡಿಸಿದ ಸುತ್ತೋಲೆ ತಿಳಿಸಿತ್ತು.

ಆದರೆ, ಅಂಬೇಡ್ಕರ್ ಅವರ ಪ್ರತಿಮೆ ಮತ್ತು ಭಾವಚಿತ್ರಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಜುಲೈ 25ರಂದು ರಾಜ್ಯ ಸರ್ಕಾರ ತಿಳಿಸಿತ್ತು.

ಅಸ್ಪೃಶ್ಯತೆಗೆ ತುತ್ತಾಗಿದ್ದ ಮಹಾರ್‌ ಸಮುದಾಯಕ್ಕೆ ಸೇರಿದವರಾಗಿದ್ದ ಡಾ. ಅಂಬೇಡ್ಕರ್‌ ಪರಿಣಾಮ ಪ್ರಾಥಮಿಕ ಶಿಕ್ಷಣ ಪಡೆಯಲು ಕೂಡ ಹೆಣಗಾಡಿದ್ದರು. ಆದರೆ ಕಡೆಗೆ 26 ಪದವಿಗಳನ್ನು ಪಡೆದ ಅವರು ತಮ್ಮ ಪೀಳಿಗೆಯ ಅತ್ಯಂತ ವಿದ್ಯಾವಂತ ಭಾರತೀಯ ಎನಿಸಿಕೊಂಡರು. ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ. ಅಂಬೇಡ್ಕರ್‌ ಅವರನ್ನು ʼಭಾರತೀಯ ಸಂವಿಧಾನ ಶಿಲ್ಪಿʼ ಎಂದು ಜಗತ್ತು ಕೊಂಡಾಡುತ್ತದೆ.