ಸುದ್ದಿಗಳು

ತೀರ್ಪು ಬದಿಗೆ ಸರಿಸಲು ಚರ್ಚೆಯಿಲ್ಲದೆ ಸುಗ್ರೀವಾಜ್ಞೆ ಜಾರಿಗೆ ತಂದ ಕೇಂದ್ರದ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ

Bar & Bench

ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡುವ ವಿಚಾರದಲ್ಲಿ ಅನುಸರಿಸುತ್ತಿರುವ ವಿಳಂಬ ಧೋರಣೆಯಿಂದಾಗಿ ನ್ಯಾಯಮಂಡಳಿಗಳು ನಿಷ್ಕ್ರಿಯವಾಗುವ ಹಂತ ತಲುಪಿವೆ ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

ಮದ್ರಾಸ್‌ ವಕೀಲರ ಸಂಘ ಪ್ರಕರಣದಲ್ಲಿ ನ್ಯಾಯಮಂಡಳಿ ಸದಸ್ಯರ ಸೇವಾ ಷರತ್ತುಗಳ ಕುರಿತು ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಕೂಡಲೇ ಅದನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಯಾವುದೇ ಸೂಕ್ತ ಚರ್ಚೆ ನಡೆಸದೆ ಸುಗ್ರೀವಾಜ್ಞೆ ಜಾರಿತೆ ತಂದಿತು ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

"ಎಲ್ಲದರ ಹೊರತಾಗಿಯೂ, ಎರಡು ದಿನಗಳಲ್ಲಿ ಮತ್ತೆ ಸುಗ್ರೀವಾಜ್ಞೆ ಜಾರಿಗೆ ತರಲಾಯಿತು. ಸಂಸತ್ತಿನಲ್ಲಿ ಯಾವುದೇ ಚರ್ಚೆಯನ್ನು ನಾನು ನೋಡಲಿಲ್ಲ. ಕಾನೂನು ರೂಪಿಸುವುದು ಶಾಸಕಾಂಗದ ಹಕ್ಕು, ಆದರೆ ಈ ಕಾನೂನನ್ನು ರೂಪಿಸಲು ಇರುವ ಕಾರಣಗಳನ್ನು ನಾವು ತಿಳಿದಿರಬೇಕು" ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಹೇಳಿದರು.

ಜಬಲ್‌ಪುರ ಸಾಲ ವಸೂಲಾತಿ ನ್ಯಾಯಾಧಿಕರಣದ ಅಧ್ಯಕ್ಷರ ಅಲಭ್ಯತೆಯಿಂದಾಗಿ ಅದರ ನ್ಯಾಯಿಕವ್ಯಾಪ್ತಿಯನ್ನು ಲಖನೌ ಸಾಲ ವಸೂಲಾತಿ ನ್ಯಾಯಾಧಿಕರಣಕ್ಕೆ ವರ್ಗಾಯಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯ ಸಿಂಧುತ್ವ ಪ್ರಶ್ನಿಸಿ ಮಧ್ಯಪ್ರದೇಶ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿತ್ತು.

ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿದ್ದರೆ ನ್ಯಾಯಮಂಡಳಿಗಳು ನಿಷ್ಕ್ರಿಯವಾಗುತ್ತವೆ ಎಂದು ಪೀಠದ ಮತ್ತೊಬ್ಬ ಸದಸ್ಯರಾದ ನ್ಯಾ. ಸೂರ್ಯ ಕಾಂತ್ ಹೇಳಿದರು. ಸಂಸತ್ತಿಗೆ ಕಾನೂನು ಮಾಡುವ ಅಧಿಕಾರವಿದ್ದರೂ ಅದನ್ನು ಜಾರಿಗೆ ತರುವ ಮೊದಲು ಸ್ವಲ್ಪವಾದರೂ ಚರ್ಚೆ ಮಾತುಕತೆ ನಡೆಯಬೇಕು ಎಂದು ನ್ಯಾಯಾಲಯ ಹೇಳಿತು.

"ದಯವಿಟ್ಟು ಈ ಚರ್ಚೆಯನ್ನು ನಮಗೆ ತೋರಿಸಿ. ಇದು ಗಂಭೀರವಾದ ಸಮಸ್ಯೆಯಾಗಿದೆ. ನ್ಯಾಯಾಧಿಕರಣಗಳು ಮುಂದುವರೆಯಬೇಕೇ ಅಥವಾ ಮುಚ್ಚಬೇಕೇ? ಇದುವೇ ಪ್ರಮುಖ ಪ್ರಶ್ನೆಯಾಗಿದೆ" ಎಂದು ಪೀಠ ಹೇಳಿದೆ. ಮುಂದುವರೆದು, "ಸಚಿವಾಲಯವು ಕಾನೂನನ್ನು ಪರಿಚಯಿಸಲು ಒಂದು ಟಿಪ್ಪಣಿಯನ್ನು ಸಿದ್ಧಪಡಿಸಿರಬಹುದು. ನೀವು ನಮಗೆ (ಅದನ್ನು) ತೋರಿಸಬಹುದೇ" ಎಂದು ಸಿಜೆಐ ಕೇಳಿದರು.

ಕೇಂದ್ರದ ಪರ ವಾದ ಮಂಡಿಸುತ್ತಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸರ್ಕಾರದಿಂದ ಸೂಚನೆಗಳನ್ನು ಪಡೆಯಬೇಕಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಎರಡು ವಾರಗಳ ಕಾಲ ಮುಂದೂಡುವಂತೆ ಕೋರಿದರು. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡುತ್ತಿದ್ದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರಿಗೆ ಅನಾರೋಗ್ಯ ಉಂಟಾಗಿದೆ ಎಂದು ಕೂಡ ಈ ಸಂದರ್ಭದಲ್ಲಿ ಅವರು ತಿಳಿಸಿದರು. ಆದರೂ ಹತ್ತು ದಿನಗಳ ಒಳಗೆ ನ್ಯಾಯಪೀಠಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೇಂದ್ರಕ್ಕೆ ಪೀಠ ನಿರ್ದೇಶಿಸಿತು.