A1  
ಸುದ್ದಿಗಳು

ಕೆಟ್ಟ ಕೇಶ ವಿನ್ಯಾಸ: ಪರಿಹಾರ ಮೊತ್ತ ₹2 ಕೋಟಿ ಬದಲು ₹25 ಲಕ್ಷಕ್ಕೆ ಇಳಿಸಿದ ಸುಪ್ರೀಂ ಕೋರ್ಟ್‌

ದೂರುದಾರರ ಕಲ್ಪನೆ ಅಥವಾ ಅವರಿಷ್ಟದಂತೆ ಪರಿಹಾರದ ಮೊತ್ತ ನಿಗದಿಪಡಿಸಲಾಗದು ಎಂದ ಪೀಠ.

Bar & Bench

ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಸೂಕ್ತವಲ್ಲದ ಕೇಶ ವಿನ್ಯಾಸ ಮಾಡಿದ್ದಕ್ಕಾಗಿ ಹಾಗೂ ಆನಂತರ ನಿರ್ಲಕ್ಷ್ಯದಿಂದ ಕೇಶಚಿಕಿತ್ಸೆ ಮಾಡಿದ್ದಕ್ಕಾಗಿ ಮಹಿಳಾ ರೂಪದರ್ಶಿಯೊಬ್ಬರಿಗೆ ₹ 2 ಕೋಟಿ ಪರಿಹಾರ ನೀಡುವಂತೆ ತಾನು ನೀಡಿದ್ದ ಆದೇಶ ಎತ್ತಿ ಹಿಡಿದಿದ್ದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ (ಎನ್‌ಸಿಡಿಆರ್‌ಸಿ) ಆದೇಶವನ್ನು ಸುಪ್ರೀಂ ಕೋರ್ಟ್‌ ಈಚೆಗೆ ಭಾಗಶಃ ರದ್ದುಗೊಳಿಸಿದೆ. [ಐಟಿಸಿ ಲಿಮಿಟೆಡ್ ಮತ್ತು ಆಶ್ನಾ ರಾಯ್ ನಡುವಣ ಪ್ರಕರಣ].

ಕೋಟ್ಯಂತರ ರೂಪಾಯಿಗಳ ಪರಿಹಾರದ ಕೋರಿಕೆಯನ್ನು ಪುಷ್ಟೀಕರಿಸುವಂತೆ ವಿಶ್ವಾಸಾರ್ಹ ಸಾಕ್ಷ್ಯಗಳನ್ನು ಅರ್ಜಿದಾರರು ಒದಗಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರನ್ನೊಳಗೊಂಡ ಪೀಠ ತೀರ್ಪು ನೀಡಿತು.

ದೂರುದಾರರ ಕಲ್ಪನೆಗೆ ತಕ್ಕಂತೆ ಅಥವಾ ಅವರಿಷ್ಟದಂತೆ ಪರಿಹಾರದ ಮೊತ್ತ ನಿಗದಿಪಡಿಸಲಾಗದು. ಅದರಲ್ಲಿಯೂ ಕೋಟ್ಯಂತರ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಾಗ ಅದಕ್ಕೆ ತಕ್ಕಂತಹ ನಂಬಲರ್ಹ ಮತ್ತು ವಿಶ್ವಾಸಾರ್ಹ ಸಾಕ್ಷ್ಯಗಳನ್ನು ಮಂಡಿಸಬೇಕು ಎಂದು ನ್ಯಾಯಾಲಯ ಕಿವಿಮಾತು ಹೇಳಿತು.

ಅಂತಿಮವಾಗಿ ಹಿಂದಿನ ಆದೇಶದನ್ವಯ ಈಗಾಗಲೇ ದೂರುದಾರೆಗೆ ದೊರೆತಿರುವ  ₹25 ಲಕ್ಷ ಪರಿಹಾರ ಮೊತ್ತವನ್ನೇ ಅಂತಿಮಗೊಳಿಸಿ ಉಳಿದ ಮೊತ್ತವನ್ನು ಐಟಿಸಿ ಮೌರ್ಯ ನೀಡಬೇಕಿಲ್ಲ ಎಂದು ಅದು ತಿಳಿಸಿತು.

ಇದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ಎರಡನೇ ಸುತ್ತಿನ ಪ್ರಕ್ರಿಯೆ. ಘಟನೆ 2018ರಲ್ಲಿ ನಡೆದಿತ್ತು. ಸಂದರ್ಶನವೊಂದಕ್ಕೆ ಹಾಜರಾಗಬೇಕಿದ್ದ ಆಶ್ನಾ ರಾಯ್‌ ಅವರು ಕೇಶ ಶೃಂಗಾರಕ್ಕಾಗಿ ಐಟಿಸಿ ಮೌರ್ಯದಲ್ಲಿರುವ ಸೆಲೂನ್‌ಗೆ ತೆರಳಿದ್ದರು. ಯಾವಾಗಲೂ ಕೇಶ ವಿನ್ಯಾಸ ಮಾಡುತ್ತಿದ್ದ ವಿನ್ಯಾಸಕಿ ಇಲ್ಲದಿದ್ದರಿಂದ ಬೇರೊಬ್ಬ ಸ್ಟೈಲಿಸ್ಟ್‌ ಅನ್ನು ಸಲೂನ್‌ ನಿಯೋಜಿಸಿತ್ತು. ಸಲೂನ್‌ ವ್ಯವಸ್ಥಾಪಕರ ಭರವಸೆ ಮೇರೆಗೆ ಆಶ್ನಾ ಅವರು ಸೇವೆ ಪಡೆಯಲು ಮುಂದಾದರು.

ತಮ್ಮನ್ನು ಆ ವಿನ್ಯಾಸಕಿ ಪದೇ ಪದೇ ತಲೆ ತಗ್ಗಿಸು ಎಂದು ಹೇಳುತ್ತಿದ್ದುದರಿಂದ ಕನ್ನಡಿ ನೋಡಲು ಆಗುತ್ತಿರಲಿಲ್ಲ. ಕಡೆಗೆ ತನ್ನ ಕೇಶ ವಿನ್ಯಾಸ ನೋಡಿ ತೀವ್ರ ಆಘಾತಕ್ಕೆ ಒಳಗಾದೆ. ತಲೆಯ ತುದಿಯಿಂದ ಕೇವಲ ನಾಲ್ಕು ಇಂಚು ಬಿಟ್ಟು ಉಳಿದೆಲ್ಲಾ ಕೂದಲನ್ನು ಕತ್ತರಿಸಿಹಾಕಲಾಗಿತ್ತು. ಕೂದಲು ತನ್ನ ಭುಜವನ್ನು ತಾಕುತ್ತಲೇ ಇರಲಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದರು.

ಈ ಬಗ್ಗೆ ಸಲೂನ್‌ ವ್ಯವಸ್ಥಾಪಕರಿಗೆ ಆಕೆ ದೂರು ನೀಡಿದರು. ದೂರಿನ ಬಳಿಕ ಉಚಿತವಾಗಿ ಕೇಶಚಿಕಿತ್ಸೆ ನಡೆಸುವುದಾಗಿ ಹೋಟೆಲ್‌ನವರು ಹೇಳಿದರು. ಆಗ ಒಲ್ಲದ ಮನಸ್ಸಿನಿಂದಲೇ ಆಶ್ನಾ ಒಪ್ಪಿಗೆ ಸೂಚಿಸಿದರು.

ತಾವು ಯಾವಾಗಲೂ ಕೇಶ ವಿನ್ಯಾಸ ಮಾಡಿಕೊಳ್ಳುವ ಸ್ಟೈಲಿಸ್ಟ್‌ ಮೇಲ್ವಿಚಾರಣೆಯಲ್ಲಿ; ತರಬೇತುಪಡೆದ, ಪರಿಣತರಾದ ಸಲೂನಿನ ಮತ್ತೊಬ್ಬ ಕೇಶ ವಿನ್ಯಾಸಕಿ ಕೇಶಚಿಕಿತ್ಸೆ ನೀಡಲಿದ್ದಾರೆ ಎಂದು ಅಶ್ನಾ ಅವರಿಗೆ ತಿಳಿಸಲಾಯಿತು. ಆದರೆ ಚಿಕಿತ್ಸೆ ವೇಳೆ ಬಳಸಿದ ಅಧಿಕ ಅಮೋನಿಯಾದಿಂದಾಗಿ ಮತ್ತು ವಿನ್ಯಾಸದ ವಿಧಾನದಿಂದಾಗಿ ಕೂದಲು ಮತ್ತು ನೆತ್ತಿ ಹಾನಿಗೊಳಗಾಗಿ ಮತ್ತಷ್ಟು ಕಿರಿಕಿರಿಯಾಯಿತು ಎಂದು ಆಶ್ನಾ ದೂರಿದರು. ಚಿಕಿತ್ಸೆ ಬಳಿಕ ಕೂದಲ ತುರಿಕೆ ಉಂಟಾಯಿತು. ಸುಟ್ಟ ನೆತ್ತಿ ಒರಟಾಗಿ ಕಾಣತೊಡಗಿತು. ಈ ವಿಚಾರದಲ್ಲಿ ಹೋಟೆಲ್‌ ಸಿಬ್ಬಂದಿಯ ಸಹಾಯ ಪಡೆಯಲು ಯತ್ನಿಸಿದರೂ ತನಗೆ ನಿಂದನೀಯ ಪದ ಬಳಸಿ ಬೆದರಿಕೆ ಹಾಕಲಾಯಿತು ಎಂದು ಆಶ್ನಾ ತಿಳಿಸಿದರು.  ತಮಗೆ ಉಂಟಾದ ಸೇವಾ ದೋಷ, ಕಿರುಕುಳ, ಅವಮಾನ ಹಾಗೂ ಮಾನಸಿಕ ಆಘಾತದ ಕಾರಣಕ್ಕೆ ₹ 3 ಕೋಟಿ ಪರಿಹಾರ ನೀಡಬೇಕು. ಜೊತೆಗೆ ಐಟಿಸಿ ವ್ಯವಸ್ಥಾಪಕ ಮಂಡಳಿ ಕ್ಷಮೆ ಯಾಚಿಸಬೇಕು ಎಂದು ಆಶ್ನಾ ಕೋರಿದ್ದರು. 

“ಆಶ್ನಾ ಅವರ ಸೂಚನೆಗಳಿಗೆ ವಿರುದ್ಧವಾಗಿ ಸಲೂನ್‌ ಕೇಶ ವಿನ್ಯಾಸದ ವೇಳೆ ಕೂದಲು ಕತ್ತರಿಸಿದ್ದರಿಂದಾಗಿ ಆಕೆ ಅನೇಕ ಅವಕಾಶಗಳಿಂದ ವಂಚಿತರಾಗಿ ದೊಡ್ಡ ನಷ್ಟ ಅನುಭವಿಸಿದರು. ಅವರ ಜೀವನಶೈಲಿ ಬದಲಾಗಿ ಅತ್ಯುತ್ತಮ ರೂಪದರ್ಶಿ ಆಗಬೇಕೆಂಬ ಆಕೆಯ ಕನಸು ಛಿದ್ರಗೊಂಡಿತು” ಎಂದು  2021ರ ಸೆಪ್ಟೆಂಬರ್‌ನಲ್ಲಿ ಎನ್‌ಸಿಡಿಆರ್‌ಸಿ  ತೀರ್ಪು ನೀಡಿತ್ತು. ಈ ಕಾರಣಕ್ಕೆ ಅವರಿಗೆ ₹ 2 ಕೋಟಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಕೇಶಚಿಕಿತ್ಸೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಐಟಿಸಿ ಹೋಟೆಲ್‌ ಕೂಡ ತಪ್ಪಿತಸ್ಥ ಎಂದು ಅದು ಘೋಷಿಸಿತು. ಇದನ್ನು ಪ್ರಶ್ನಿಸಿ ಐಟಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಸುಪ್ರೀಂ ಕೋರ್ಟ್ 2023ರ ಫೆಬ್ರವರಿಯಲ್ಲಿ ನೀಡಿದ ತೀರ್ಪಿನಲ್ಲಿ ಸೇವೆಯಲ್ಲಿ ಕೊರತೆ ಇದೆ ಎಂಬ ನಿರ್ಣಯವನ್ನು ಉಳಿಸಿಕೊಂಡರೂ, ನೀಡಲಾಗಿದ್ದ ಪರಿಹಾರ ಮೊತ್ತವನ್ನು ರದ್ದುಗೊಳಿಸಿತು. ಇಷ್ಟು ದೊಡ್ಡ ಮೊತ್ತವನ್ನು ಸಮರ್ಥಿಸುವ ಯಾವುದೇ ದಾಖಲೆಗಳು ದಾಖಲೆಗಳಲ್ಲಿ ಇಲ್ಲವೆಂದು ನ್ಯಾಯಾಲಯ ತಿಳಿಸಿತು.

ಬಳಿಕ ಆಶ್ನಾ ವರಿಗೆ ಸಾಕ್ಷ್ಯಗಳನ್ನು ಸಲ್ಲಿಸಲು ಅವಕಾಶ ನೀಡುವ ಜೊತೆಗೆ, ಅದಕ್ಕೆ ಪ್ರತಿವಾದಿಸಲು ಐಟಿಸಿಗೆ ಸ್ವಾತಂತ್ರ್ಯ ನೀಡುತ್ತಾ, ಪರಿಹಾರದ ಮರುಮೌಲ್ಯಮಾಪನಕ್ಕಾಗಿ ಪ್ರಕರಣವನ್ನು ಆಯೋಗಕ್ಕೆ ಹಿಂದಿರುಗಿಸಲಾಯಿತು.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಪ್ರಕರಣದ ಪರಿಹಾರ ಮೊತ್ತವನ್ನು ಸಾಮಾನ್ಯ ಅಂದಾಜು ನಿಯಮದ ಆಧಾರದಲ್ಲಿ ನಿಗದಿಪಡಿಸಲಾಗದು ಎಂದಿತು. ಸೇವಾ ನ್ಯೂನತೆಯಿಂದಾಗಿ ದೂರುದಾರರಿಗೆ ವಾಸ್ತವದಲ್ಲಿ ಎಷ್ಟು ನಷ್ಟ ಉಂಟಾಗಿದೆ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ದೂರುದಾರೆಯದ್ದೇ ಆಗಿದೆ ಎಂದು ಅದು ನುಡಿಯಿತು.

ರೂಪದರ್ಶಿತ್ವ ಮತ್ತು ಚಲನಚಿತ್ರ ಅವಕಾಶಗಳನ್ನು ಕಳೆದುಕೊಂಡಿದ್ದೇನೆ ಎಂಬ ತನ್ನ ವಾದಕ್ಕೆ ಬೆಂಬಲವಾಗಿ ದೂರುದಾರೆ ಮುಖ್ಯವಾಗಿ ಇಮೇಲ್‌ಗಳ, ಪ್ರಮಾಣಪತ್ರಗಳ ಮತ್ತು ಇತರೆ ಸಂವಹನಗಳ ದಾಖಲೆಗಳನ್ನೇ ಅವಲಂಬಿಸಿದ್ದಾರೆ. ಆದರೆ ಇಂತಹ ದಾಖಲೆಗಳನ್ನಷ್ಟೇ ಆಧರಿಸಿ ನಷ್ಟವನ್ನು ಸಾಬೀತುಪಡಿಸಲಾಗದು ಎಂದು ಪೀಠ ತಿಳಿಸಿತು.

[ತೀರ್ಪಿನ ಪ್ರತಿ]

ITC_LIMITED_vs_AASHNA_ROY.pdf
Preview