ಸಹ ನಿವಾಸಿಗಳ ಒಪ್ಪಿಗೆಯಿಲ್ಲದೆ ವಾಸಸ್ಥಳದ ವಸತಿ ಭಾಗದೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಕಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ [ಇಂದ್ರಾನಿಲ್ ಮುಲ್ಲಿಕ್ ಮತ್ತಿತರರು ಹಾಗೂ ಶುವೇಂದ್ರ ಮುಲ್ಲಿಕ್ ನಡುವಣ ಪ್ರಕರಣ].
ಉಳಿದ ಸಹ ನಿವಾಸಿಗಳ ಒಪ್ಪಿಗೆ ಇಲ್ಲದೆ ಒಟ್ಟಿಗೆ ವಾಸಿಸುವ ವಸತಿ ಸೌಕರ್ಯ (ಶೇರ್ಡ್ ಅಕಾಮೊಡೇಷನ್) ಇರುವ ಆಸ್ತಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆದುಹಾಕುವಂತೆ ಅರ್ಜಿದಾರ ಇಂದ್ರಾನಿಲ್ ಮುಲ್ಲಿಕ್ ಅವರಿಗೆ ಹೈಕೋರ್ಟ್ ಕಳೆದ ಫೆಬ್ರವರಿಯಲ್ಲಿ ಸೂಚಿಸಿತ್ತು.
ಕಟ್ಟಡದಲ್ಲಿರುವ ವಿವಿಧ ಪ್ರಾಚೀನ ಮತ್ತು ಅಮೂಲ್ಯವಾದ ಕಲಾಕೃತಿಗಳನ್ನು ರಕ್ಷಿಸಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂಬ ಕಾರಣ ನೀಡಿ ಹೈಕೋರ್ಟ್ ಆದೇಶವನ್ನು ಇಂದ್ರಾನಿಲ್ ಪ್ರಶ್ನಿಸಿದ್ದರು. ಆದರೆ ಮೇಲ್ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ನಿರಾಕರಿಸಿತು.
ಅರ್ಜಿದಾರರ ಬೇಡಿಕೆಯಂತೆ 15 ಕ್ಯಾಮೆರಾ ಬದಲಾಗಿ 10 ಕ್ಯಾಮೆರಾಗಳು ಆಸ್ತಿಯಲ್ಲಿರುವ ಎಲ್ಲಾ ಕಲಾಕೃತಿಗಳನ್ನು ರಕ್ಷಿಸಲು ಸಾಕಾಗುತ್ತದೆ ಎಂದ ನ್ಯಾಯಾಲಯ ಮೇಲ್ಮನವಿಯನ್ನು ವಜಾಗೊಳಿಸಿತು. 15 ಕ್ಯಾಮೆರಾಗಳಲ್ಲಿ 5 ಕ್ಯಾಮೆರಾಗಳನ್ನು ಅರ್ಜಿದಾರರ ಸಹೋದರನ ವಸತಿ ಭಾಗದಲ್ಲಿ ಅವರ ಒಪ್ಪಿಗೆಯಿಲ್ಲದೆ ಅಳವಡಿಸಲಾಗಿದೆ. ಇದು ಅವರ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ಹೇಳಿತು.
ಅಂತಿಮವಾಗಿ ಎಲ್ಲರೂ ಕಲಾಕೃತಿಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಒಟ್ಟು 15 ಕ್ಯಾಮೆರಾಗಳ ಬದಲು ಸಹೋದರನ ಮನೆಯ ಒಳಭಾಗದ ಕಡೆ ಮುಖ ಮಾಡದ 10 ಕ್ಯಾಮೆರಾಗಳನ್ನು ಬಳಸಿ ಕಲಾಕೃತಿಗಳನ್ನು ರಕ್ಷಿಸಲಿ ಎಂದು ನ್ಯಾಯಾಲಯ ತಿಳಿಸಿತು.
ಇಂದ್ರಾನಿಲ್ ಮುಲ್ಲಿಕ್ ತಮ್ಮ ಪಾಲಿಗೆ ಹಂಚಿಕೆಯಾಗಿರುವ ಮನೆಯ ವಸತಿ ಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಕ್ಕೆ ಅವರ ಸಹೋದರ ಶುವೇಂದ್ರ ಮುಲ್ಲಿಕ್ ಆಕ್ಷೇಪ ವ್ಯಕ್ತಪಡಿಸಿ ಈ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಕ್ಯಾಮೆರಾಗಳನ್ನು ತಮ್ಮ ಒಪ್ಪಿಗೆಯಿಲ್ಲದೆ ಅಳವಡಿಸಲಾಗಿದ್ದು ತಮ್ಮ ವಾಸಸ್ಥಳದ ಆಂತರಿಕ ಪ್ರದೇಶಗಳ ಮೇಲೆ ಕ್ಯಾಮೆರಾಗಳು ಕಣ್ಣಿಟ್ಟಿವೆ. ಇದು ಗೌಪ್ಯತೆ ಉಲ್ಲಂಘನೆಯಾಗುತ್ತದೆ ಎಂದು ಶುವೇಂದ್ರ ವಾದಿಸಿದ್ದರು.
ವಿಚಾರಣೆ ನಡೆಸಿದ್ದ ಕಲ್ಕತ್ತಾ ಹೈಕೋರ್ಟ್ ಐದು ಕ್ಯಾಮೆರಾಗಳಿಗೆ ನಿರ್ಬಂಧ ವಿಧಿಸಿತ್ತು. ಸಂವಿಧಾನದ ಅಡಿಯಲ್ಲಿ ಶುವೇಂದ್ರ ಅವರ ಗೌಪ್ಯತೆಯ ಹಕ್ಕಿಗೆ ಆ ಕ್ಯಾಮೆರಾಗಳ ಅಳವಡಿಕೆ ವ್ಯತಿರಿಕ್ತವಾಗಿದ್ದು ವಾಸಿಸುವ ಜಾಗದಲ್ಲಿ ಅವರ ಚಲನವಲನಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಅವಕಾಶ ನೀಡುತ್ತದೆ ಎಂದಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಇಂದ್ರಾನಿಲ್, ಆವರಣದೊಳಗೆ ಇರಿಸಲಾಗಿರುವ ಅಮೂಲ್ಯ ಕಲಾಕೃತಿಗಳು ಮತ್ತು ಚರಾಸ್ತಿಗಳನ್ನು ರಕ್ಷಿಸಲು ಕ್ಯಾಮೆರಾಗಳು ಅಗತ್ಯವೆಂದು ವಾದಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕ್ಯಾಮೆರಾಗಳ ಸಂಖ್ಯೆ ನಿರ್ಬಂಧಿಸುವುದರಿಂದ ಈ ವಸ್ತುಗಳ ಭದ್ರತೆಗೆ ಧಕ್ಕೆಯಾಗುತ್ತದೆ ಎಂದಿದ್ದ ಅವರು ದೃಶ್ಯಾವಳಿಗಳ ಲಭ್ಯತೆಗೆ ನಿರ್ಬಂಧ ಉಂಟಾಗುತ್ತದೆ ಎಂದು ಪ್ರಸ್ತಾಪಿಸಿದ್ದರು.
ಆದರೆ ಶುವೇಂದ್ರ ಅವರು ಎತ್ತಿರುವ ಗೌಪ್ಯತೆ ಕುರಿತಾದ ಆತಂಕದಲ್ಲಿ ಹುರುಳಿದೆ ಎಂದ ಸುಪ್ರೀಂ ಕೋರ್ಟ್ ಪರಿಹಾರ ಪಡೆಯುವುದಿದ್ದರೆ ಅದನ್ನು ಹೈಕೋರ್ಟ್‌ನಿಂದಲೇ ಪಡೆಯಬೇಕು ಎಂದು ಇಂದ್ರಾನಿಲ್ ಅವರಿಗೆ ತಿಳಿಸಿತು. ಅಂತೆಯೇ ಹೈಕೋರ್ಟ್ ಆದೇಶ ಮಾರ್ಪಡಿಸಲು ನಿರಾಕರಿಸಿತು.