Supreme Court of India 
ಸುದ್ದಿಗಳು

ಬೌದ್ಧಿಕ ಆಸ್ತಿ ನಾಶ: ದಲಿತ ದಂಪತಿಗೆ ನೀಡಿದ ಪರಿಹಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಎಸ್‌ಸಿ- ಎಸ್‌ಟಿ ಕಾಯಿದೆ ಪ್ರಕಾರ ಆಸ್ತಿ ಎಂಬುದು ಬೌದ್ಧಿಕ ಆಸ್ತಿಯನ್ನೂ ಒಳಗೊಳ್ಳುತ್ತದೆ ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪೀಠ ಎತ್ತಿಹಿಡಿದಿದೆ.

Bar & Bench

ಬೌದ್ಧಿಕ ಆಸ್ತಿ ನಾಶವಾದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯಡಿ ವಿತ್ತೀಯ ಪರಿಹಾರ ಕೋರಿದ್ದ ದಲಿತ ದಂಪತಿ ಪರ ಬಾಂಬೆ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಈಚೆಗೆ ಎತ್ತಿಹಿಡಿದಿದ್ದು ಇಂತಹ ನಿರ್ಧಾರ ಇದೇ ಮೊದಲು ಎನ್ನಲಾಗುತ್ತಿದೆ.

ಕಾಯಿದೆಯ ಸೆಕ್ಷನ್ 15 ಎ ಸೆಕ್ಷನ್‌ ಪ್ರಕಾರ ಆಸ್ತಿ ಎಂಬ ಪದವು ಬೌದ್ಧಿಕ ಆಸ್ತಿಯನ್ನೂಒಳಗೊಂಡಿರುತ್ತದೆ ಎಂದು ಬಾಂಬೆ ಹೈಕೋರ್ಟ್‌ ನವೆಂಬರ್ 2023 ರಲ್ಲಿ ತೀರ್ಪು ನೀಡಿತ್ತು. ಆ ಮೂಲಕ ಡಿಜಿಟಲ್‌ ವಿಧಾನದಲ್ಲಿ ಸಂಗ್ರಹವಾಗಿದ್ದ ದತ್ತಾಂಶ ಮತ್ತು ಸಂಶೋಧನಾ ಸಾಮಗ್ರಿಯನ್ನು ಪೊಲೀಸರ ಅಕ್ರಮ ದಾಳಿಯ ಪರಿಣಾಮ ಕಳೆದುಕೊಂಡಿದ್ದ ದಂಪತಿಗೆ ಪರಿಹಾರ ನೀಡಿತ್ತು.

ದಂಪತಿಗಳ ಪರವಾಗಿ ಬಾಂಬೆ ಹೈಕೋರ್ಟ್‌ ನೀಡಿದ ತೀರ್ಪನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠ ಎತ್ತಿಹಿಡಿದಿದ್ದು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ಕುತೂಹಲಕಾರಿ ಸಂಗತಿ ಎಂದರೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ದಂಪತಿ ಖುದ್ದು ವಾದ ಮಂಡಿಸಿದ್ದರು.

ಹಿನ್ನೆಲೆ

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ವಾಂಸರಾದ ಡಾ. ಕ್ಷಿಪ್ರಾ ಕಮಲೇಶ್ ಉಕೆ ಮತ್ತು ಡಾ. ಶಿವಶಂಕರ್ ದಾಸ್ ದಂಪತಿ 2014ರಿಂದ ಮಹಾರಾಷ್ಟ್ರದ ನಾಗಪುರದ ಯುವಜನರಲ್ಲಿನ ಸಾಮಾಜಿಕ-ರಾಜಕೀಯ ಜಾಗೃತಿ ಅಧ್ಯಯನ ಮಾಡಲು ತಮ್ಮ ಸ್ವಂತ ಖರ್ಚಿನಲ್ಲಿ ವೈಯಕ್ತಿಕ ಸಂಶೋಧನೆ ನಡೆಸುತ್ತಿದ್ದರು.

ವಿವಿಧ ಶೈಕ್ಷಣಿಕ ಕೇಂದ್ರಗಳ ವಿದ್ಯಾರ್ಥಿಗಳಿಂದ 500 ಕ್ಕೂ ಹೆಚ್ಚು ಸಮೀಕ್ಷಾ ಮಾದರಿಗಳನ್ನು ಅವರು ಸಂಗ್ರಹಿಸಿದ್ದರು.

ತಾವು ಊರಿನಲ್ಲಿಲ್ಲದ ವೇಳೆ ಬಜಾಜನಗರ ಪೊಲೀಸ್‌ ಠಾಣೆಯ ಪೋಲಿಸ್‌ ಅಧಿಕಾರಿಗಳೊಂದಿಗೆ ಮೇಲ್ಜಾತಿಗೆ ಸೇರಿದ ಬಾಡಿಗೆ ಮನೆಯ ಮಾಲೀಕನ ಮಗ ಮನೆ ಮೇಲೆ ದಾಳಿ ನಡೆಸಿ ಡಿಜಿಟಲ್‌ ರೂಪದಲ್ಲಿದ್ದ ದಾಖಲೆಗಳನ್ನು ನಾಶಪಡಿಸಿದ್ದ ಎಂದು ಆರೋಪಿಸಿ ದಂಪತಿ ದೂರು ದಾಖಲಿಸಿದ್ದರು. ಪೋಲೀಸರ ಜಾತಿ ದೌರ್ಜನ್ಯದ ಪರಿಣಾಮ ತಮ್ಮ ಸಂಶೋಧನೆಯ ಸಮಯದಲ್ಲಿ ಸಂಗ್ರಹಿಸಿದ ಎಲ್ಲಾ ಬೌದ್ಧಿಕ ಆಸ್ತಿ ಕಳೆದುಕೊಂಡಿದ್ದು ಇದಕ್ಕಾಗಿ ಸರ್ಕಾರ ಪರಿಹಾರ ನೀಡಬೇಕೆಂದು  ಕೋರಿದ್ದರು.

ಹೈಕೋರ್ಟ್‌ ಆದೇಶದಂತೆ ಘಟನೆಯ ವಿಚಾರಣೆ ನಡೆಸಿದ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಏಳು ದಿನಗಳಲ್ಲಿ ನಾಗುಪುರ ಜಿಲ್ಲಾಧಿಕಾರಿ ಪರಿಹಾರ ನೀಡಬೇಕೆಂದು ಶಿಫಾರಸು ಮಾಡಿತು. ₹5 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರೂ ಪರಿಹಾರ ದೊರೆತಿರಲಿಲ್ಲ. ಹೀಗಾಗಿ ದಂಪತಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ದಂಪತಿ ಪರವಾಗಿ ತೀರ್ಪಿತ್ತಿತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ ಕದ ತಟ್ಟಿತ್ತು. ಆದರೆ ಜನವರಿ 24ರಂದು ಸರ್ವೋಚ್ಚ ನ್ಯಾಯಾಲಯ ಸರ್ಕಾರದ ಮನವಿ ವಜಾಗೊಳಿಸಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Maharashtra_v__Kshipra_Kamlesh_Uke.pdf
Preview