ಸುದ್ದಿಗಳು

ಮೈಸೂರು ರಾಜಮನೆತನಕ್ಕೆ ಸೇರಿದ ಸಾವಿರಾರು ಎಕರೆ ಭೂವ್ಯಾಜ್ಯ: ಕರ್ನಾಟಕ ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್

Bar & Bench

ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನ ಕುರಬಾರಹಳ್ಳಿ, ಆಲನಹಳ್ಳಿ ಹಾಗೂ ಚೌಡಿಹಳ್ಳಿ 1561.31 ಎಕರೆ ಆಸ್ತಿ ಅಲ್ಲಿನ ರಾಜವಂಶಸ್ಥರಿಗೆ ಸೇರಬೇಕು ಎಂದು ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ.

ಚಾಮುಂಡಿ ಬೆಟ್ಟದ ತಪ್ಪಲಿನ ಮೂರು ಸರ್ವೇ ನಂಬರ್‌ಗಳಿಗೆ ಸೇರಿದ ಭೂಮಿ ಖಾಸಗಿ ಆಸ್ತಿ ಎಂದು ಕಳೆದ ವರ್ಷ ಹೈಕೋರ್ಟ್‌ ವಿಭಾಗೀಯ ಪೀಠ ತೀರ್ಪು ನೀಡಿತ್ತು. ಆದರೆ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪಾಲಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗಿತ್ತು. ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಮೈಸೂರು ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಮಹಾರಾಜರ ಖಾಸಗಿ ಆಸ್ತಿ ಎನ್ನಲಾಗಿದ್ದ ಭೂಮಿಯನ್ನು ಸರ್ಕಾರಿ ಆಸ್ತಿ ಎಂದು ಜಿಲ್ಲಾಧಿಕಾರಿ ಘೋಷಿಸಿದ್ದರು. ಇದನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು. ಆದರೆ ಸಾರ್ವಜನಿಕ ಉದ್ದೇಶಕ್ಕೆ ಇರುವ ಪ್ರದೇಶ (ಖರಾಬು ಜಮೀನು) ಎಂಬ ಬ್ರಿಟಿಷ್‌ ಸರ್ಕಾರದ ಘೋಷಣೆಗೆ ವಿರುದ್ಧವಾಗಿ ಹೈಕೋರ್ಟ್‌ ತೀರ್ಪು ಇದೆ ಎಂದು ಸರ್ಕಾರ ಹೇಳಿತ್ತು.

ಈಗಾಗಲೇ ಖಾಸಗಿ ಆಸ್ತಿಯನ್ನು ಜನ ಖರೀದಿಸಿದ್ದು ದಶಕಗಳ ಬಳಿಕ ಸರ್ಕಾರ ಎಚ್ಚೆತ್ತುಕೊಂಡರೆ ಏನೂ ಮಾಡಲಾಗದು. ಮನವಿ ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ನ್ಯಾ. ಯು ಯು ಲಲಿತ್‌ ಮತ್ತು ಅಜಯ್‌ ರಾಸ್ತೋಗಿ ಅವರಿದ್ದ ಪೀಠ ಅರ್ಜಿ ತಿರಸ್ಕರಿಸಿತು. 1950ರ ಬಳಿಕ ಜಮೀನನ್ನು ರಾಜ್ಯ ಸರ್ಕಾರ ವಶಪಡಿಸಿಕೊಂಡಿತ್ತು ಎಂದಾದರೆ ಆ ಭೂಮಿ ಮಹಾರಾಜರಿಗೆ ಸೇರಿದ್ದೆಂದೇ ಅರ್ಥ ಎಂದು ಪೀಠ ತಿಳಿಸಿತು.